ಟೀಮ್ ಇಂಡಿಯಾ ಪರ ಆಡಲು ನಾನು ಅರ್ಹನಲ್ಲ: ರಿಯಾನ್ ಪರಾಗ್ ಅಚ್ಚರಿಯ ಹೇಳಿಕೆ
Riyan Parag: ದೇಶೀಯ ಕ್ರಿಕೆಟ್ನಲ್ಲಿ ಅಸ್ಸಾಂ ಪರ ಆಡುತ್ತಿರುವ ರಿಯಾನ್ ಪರಾಗ್, ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 183 ರನ್ ಕಲೆಹಾಕಿದ್ದರು.
ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಅನೇಕ ಪ್ರಮುಖ ಆಟಗಾರರು ಈ ಸರಣಿಯ ಭಾಗವಾಗಿಲ್ಲ. ಹೀಗಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗೆಯೇ ಐಪಿಎಲ್ ಮಿಂಚಿದ ಅನೇಕ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ಲಭಿಸಿದೆ. ಇದಾಗ್ಯೂ ರಾಜಸ್ಥಾನ್ ರಾಯಲ್ಸ್‌ನ ಆಲ್ ರೌಂಡರ್ ರಿಯಾನ್ ಪರಾಗ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ಬಗ್ಗೆ ಮಾತನಾಡಿರುವ ರಿಯಾನ್ ಪರಾಗ್, ನಾನು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಅರ್ಹನಲ್ಲ ಎಂದು ಹೇಳಿದ್ದಾರೆ.
ರಿಯಾನ್ ಪರಾಗ್ ಐಪಿಎಲ್ 15ನೇ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಫೈನಲ್ನಲ್ಲಿ ಸೋಲನುಭವಿಸಬೇಕಾಯಿತು. ಆದರೆ ಇಡೀ ಟೂರ್ನಿ ಆಡಿದ ಆಟಗಾರರಲ್ಲಿ ರಿಯಾನ್ ಕೂಡ ಒಬ್ಬರು. ತಂಡದಲ್ಲಿ ಆಲ್ರೌಂಡರ್ ಆಗಿ ಕಾಣಿಸಿಕೊಂಡಿದ್ದ ರಿಯಾನ್ ಪರಾಗ್ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಈ ಸೀಸನ್ನಲ್ಲಿ 17 ಕ್ಯಾಚ್ಗಳನ್ನು ಹಿಡಿದು ಮಿಂಚಿದ್ದರು. ಅಲ್ಲದೆ ನಾನು ಕೂಡ ಟೀಮ್ ಇಂಡಿಯಾ ಪರ ಆಡಬಲ್ಲ ಆಲ್ರೌಂಡರ್ ಎಂಬ ಹೇಳಿಕೆಯನ್ನು ಕೂಡ ಪರಾಗ್ ನೀಡಿದ್ದರು.
ಆದರೆ ಇದೀಗ ತಮ್ಮ ಹೇಳಿಕೆಯನ್ನು ಬದಲಿಸಿಕೊಂಡಿದ್ದಾರೆ. ಸಂವಾದವೊಂದರಲ್ಲಿ ಮಾತನಾಡಿದ ಪರಾಗ್, ‘ಪಂದ್ಯವನ್ನು ಗೆಲ್ಲುವುದು ತಂಡಕ್ಕೆ ಮುಖ್ಯವಾಗಿದೆ. ನಾನು ಅದನ್ನು ಕೆಲವು ಪಂದ್ಯಗಳಲ್ಲಿ ಮಾಡಿದ್ದೇನೆ. ಆದರೆ ಅದು ಮಾತ್ರ ಸಾಕಾಗುವುದಿಲ್ಲ. ಪಂದ್ಯಾವಳಿಯಲ್ಲಿ ನನ್ನ ತಂಡಕ್ಕಾಗಿ ನಾನು 6-7 ಪಂದ್ಯಗಳನ್ನು ಗೆಲ್ಲಿಸಲು ಸಾಧ್ಯವಾದರೆ ಮಾತ್ರ ನಾನು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇನೆ. ಹೀಗಾಗಿ ಭಾರತ ತಂಡದ ಸಂಭಾವ್ಯ ಪಟ್ಟಿಯಲ್ಲಿ ನನ್ನ ಹೆಸರು ಬಂದರೂ ನನಗೆ ಇಷ್ಟವಾಗುವುದಿಲ್ಲ. ಏಕೆಂದರೆ ಟೀಮ್ ಇಂಡಿಯಾ ಪರ ಆಡಲು ಈಗ ಅರ್ಹನಲ್ಲ. ಮುಂಬರುವ ಸೀಸನ್ನಲ್ಲಿ ನನ್ನ ತಂಡವನ್ನು ಇನ್ನಷ್ಟು ಗೆಲುವಿನತ್ತ ಮುನ್ನಡೆಸಿದರೆ ನನ್ನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ಮೂಲಕ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆಯಬೇಕೆಂದಿರುವೆ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಅಸ್ಸಾಂ ಪರ ಆಡುತ್ತಿರುವ ರಿಯಾನ್ ಪರಾಗ್, ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 183 ರನ್ ಕಲೆಹಾಕಿದ್ದರು. ಅಷ್ಟೇ ಅಲ್ಲದೆ 17 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಈ ಸೀಸನ್ನಲ್ಲಿ ಅತ್ಯುತ್ತಮ ಫೀಲ್ಡರ್ ಎನಿಸಿಕೊಂಡಿದ್ದರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.