ಬದಲಿಯಾಗಿ ಬಂದವರೆ ಭಾರತದ ಗೆಲುವಿನ ರೂವಾರಿಗಳಾದ್ರು: ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾದವರ ಕತೆಯಿದು!
ಕೆಲವೊಮ್ಮೆ ಪ್ರತಿಭೆಯಿದ್ದರೂ ತಂಡದಲ್ಲಿ ಸ್ಥಾನ ಸಿಗದೆ ವರ್ಷಗಟ್ಟಲೇ ಬೆಂಚ್ ಕಾಯ್ದ ಕ್ರಿಕೆಟಿಗರು ಬಯಸದೇ ಬಂದ ಭಾಗ್ಯವೆಂಬಂತೆ ಇತರ ಆಟಗಾರರ ಇಂಜುರಿಯಿಂದಲೋ ಅಥವಾ ಇನ್ನಿತರ ಕಾರಣಗಳಿಂದಲೋ ತಂಡದಲ್ಲಿ ಆಡುವ ಅವಕಾಶ ಪಡೆದು ಭಾರತದ ಗೆಲುವಿನ ರೂವಾರಿಗಳಾಗಿದ್ದಾರೆ.
ಸೌರವ್ ಗಂಗೂಲಿ ನಾಯಕತ್ವದಲ್ಲಿ ವಿದೇಶಗಳಲ್ಲೂ ಸರಣಿ ಗೆಲ್ಲುವಂತೆ ಬೆಳೆದು ನಿಂತ ಭಾರತ, ಧೋನಿ ನಾಯಕನಾದ ಮೇಲಂತ್ತೂ ಕ್ರಿಕೆಟ್ ದುನಿಯಾದ ಅನಭಿಶಕ್ತ ದೊರೆಯಾಗಿ ಮೆರೆಯಲಾರಂಭಿಸಿತು. ಧೋನಿ ನಾಯಕತ್ವದಲ್ಲಿ ಭಾರತ, ಐಸಿಸಿ ನಡೆಸಿಕೊಡುವ ಎಲ್ಲಾ ಪ್ರಮುಖ ಸರಣಿಗಳು ಚಾಂಪಿಯನ್‌ಪಟ್ಟಕೇರಿತು. ದಾದಾ ನಾಯಕತ್ವ ಒಹಿಸಿಕೊಂಡ ಮೇಲೆ ಟೀಂ ಇಂಡಿಯಾದಲ್ಲಿ ಯುವ ಪ್ರತಿಭೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಅಂದಿನಿಂದ ಟೀಂ ಇಂಡಿಯಾದಲ್ಲಿ ಪ್ರತಿಭಾವಂತರು ಹಾಗೂ ಸಾಮರ್ಥ್ಯ ಇರುವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಆರಂಭಿಸಿದರು. ಆದರೆ ಕೆಲವೊಮ್ಮೆ ಪ್ರತಿಭೆಯಿದ್ದರೂ ತಂಡದಲ್ಲಿ ಸ್ಥಾನ ಸಿಗದೆ ವರ್ಷಗಟ್ಟಲೇ ಬೆಂಚ್ ಕಾಯ್ದ ಕ್ರಿಕೆಟಿಗರು ಬಯಸದೇ ಬಂದ ಭಾಗ್ಯವೆಂಬಂತೆ ಇತರ ಆಟಗಾರರ ಇಂಜುರಿಯಿಂದಲೋ ಅಥವಾ ಇನ್ನಿತರ ಕಾರಣಗಳಿಂದಲೋ ತಂಡದಲ್ಲಿ ಆಡುವ ಅವಕಾಶ ಪಡೆದು ಭಾರತದ ಗೆಲುವಿನ ರೂವಾರಿಗಳಾಗಿದ್ದಾರೆ. ಅಂತವರ ಬಗ್ಗೆ ಒಂದಿಷ್ಟು ಮಾಹಿತಿ ಹೀಗಿದೆ.
ಇಂಜುರಿಯಿಂದ ಕನ್ನಡಿಗನಿಗೆ ಸಿಕ್ತು ಅವಕಾಶ ಉದಾಹರಣೆಗೆ, ಭಾರತದ ವೀರೋಚಿತ ಆರಂಭಿಕ ಜೋಡಿಯಲ್ಲಿ ಒಬ್ಬರಾದ ಕನ್ನಡಿಗ K.L. ರಾಹುಲ್ ಅವರನ್ನೇ ತೆಗೆದುಕೊಳ್ಳಿ. ರಾಹುಲ್ ಈಗಾಗಲೇ ಪ್ರಸ್ತುತ ಇಂಗ್ಲೆಂಡ್ ಪ್ರವಾಸದ ಈ ಸರಣಿಯ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಲಾರ್ಡ್ಸ್‌ನಲ್ಲಿ ಬಾರಿಸಿದ ಆ ಅದ್ಭುತ ಶತಕ ಮತ್ತು ಅನುಭವಿ ರೋಹಿತ್ ಶರ್ಮಾ ಅವರೊಂದಿಗಿನ ಕೆಲವು ಆರಂಭಿಕ ಪಾಲುದಾರಿಕೆ ಟೀಂ ಇಂಡಿಯಾ ಗೆಲುವಿಗೆ ಸಹಕಾರಿಯಾಗಿದೆ.
ಎಷ್ಟರಮಟ್ಟಿಗೆಂದರೆ, ಇಂಗ್ಲೆಂಡ್‌ನ ಬೌಲರ್‌ಗಳ ಸ್ವಿಂಗ್ ಮತ್ತು ಸೀಮ್ ವಿರುದ್ಧ ಅವರ ಆರಂಭಿಕ ಬ್ಯಾಟಿಂಗ್ ಪರಾಕ್ರಮ ಅದ್ಭುತವಾಗಿದೆ ಎಂದು ಈಗಾಗಲೇ ಕ್ರಿಕೆಟ್ ಪಂಡಿತರಿಂದ ಪ್ರಶಂಸಿಸಲಾಗಿದೆ. ಆದಾಗ್ಯೂ, ಈ ಸರಣಿಗೆ ಓಪನರ್ ಆಗಿ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ ಎಂಬುದನ್ನು ನಾವೆಲ್ಲರೂ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯವಾಗಿದೆ. ಆದ್ದರಿಂದ ಇಂಗ್ಲೆಂಡ್‌ನ ಬೌಲಿಂಗ್ ಭದ್ರಕೋಟೆಯನ್ನು ಛಿದ್ರಪಡಿಸಿ ಭಾರತ ಗೆಲುವಿಗೆ ಸಹಕಾರಿಯಾದ ಬದಲಿ ಆಟಗಾರ ರಾಹುಲ್ನನ್ನು ತಂಡದಲ್ಲಿ ಆಯ್ಕೆ ಮಾಡದ ಆಯ್ಕೆಗಾರರಿಗೆ ಈ ಗೆಲುವಿನ ಕ್ರೆಡಿಟ್ ನೀಡುವುದು ಸರಿಯಲ್ಲ.
ರಾಹುಲ್ ಇದ್ದರೂ ಪೃಥ್ವಿ ಶಾಗೆ ಮಣೆ ಹಾಕಿದರು ರಾಹುಲ್ ತಂಡದಲ್ಲಿ ಆಯ್ಕೆಯಾಗುವುದಕ್ಕೂ ಮೊದಲು ಅಭ್ಯಾಸ ಪಂದ್ಯಗಳಲ್ಲಿ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು. ಆಯ್ಕೆಗಾರರ ಪ್ರಕಾರ ಶುಭ್ಮನ್ ಗಿಲ್ ಅಥವಾ ಮಯಾಂಕ್ ಅಗರ್ವಾಲ್ ರೋಹಿತ್ ಶರ್ಮಾ ಜೊತೆ ಟೆಸ್ಟ್‌ನಲ್ಲಿ ಓಪನರ್ ಆಗಿ ಕಣಕ್ಕಿಳಿಯಬೇಕಿತ್ತು. ಆದರೆ ಗಿಲ್ ಅವರು ಗಾಯಗೊಂಡಿದ್ದರಿಂದ ಆಯ್ಕೆಗಾರರು ಶ್ರೀಲಂಕಾದಲ್ಲಿ ಸರಣಿ ಆಡುತ್ತಿದ್ದ ಪೃಥ್ವಿ ಶಾ ಅವರಿಗೆ ಇಂಗ್ಲೆಂಡ್ಗೆ ಬರಲು ಆಹ್ವಾನ ನೀಡಿದರು.
ಆಗಲೂ ಸಹ ಪೃಥ್ವಿ ಶಾ ಅವರನ್ನು ಶ್ರೀಲಂಕಾದಿಂದ, ಇಂಗ್ಲೆಂಡ್ಗೆ ಕಳುಹಿಸುವಾಗ ಆಯ್ಕೆಗಾರರು ರಾಹುಲ್ ಬಗ್ಗೆ ಯೋಚಿಸಲಿಲ್ಲ. ನಂತರ, ಅಗರ್ವಾಲ್ ಮೊದಲ ಟೆಸ್ಟ್‌ಗೆ ಒಂದೆರಡು ದಿನಗಳಿರುವಾಗ ನೆಟ್ನಲ್ಲಿ ಗಾಯಗೊಂಡರು. ಅಲ್ಲದೆ ಶ್ರೀಲಂಕಾದಿಂದ ಬಂದಿದ್ದ ಪೃಥ್ವಿ ಶಾರ ಕ್ಯಾರೆಂಟೈನ್ ಅವಧಿ ಇನ್ನು ಮುಗಿದಿರಲಿಲ್ಲ. ಹಾಗಾಗಿ ಬೇರೆ ದಾರಿಯಿಲ್ಲದೆ ಆಯ್ಕೆ ಮಂಡಳಿ ರಾಹುಲ್ನನ್ನು ಓಪನರ್ ಆಗಿ ಆಡಿಸಿತು. ನಂತರ ರಾಹುಲ್ ಬದಲಿಗೆ ಐದನೇ ನಂಬರ್ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆಗೆ ಅವಕಾಶ ನೀಡಿದ್ದರು.
ಆದರೆ ಅವಕಾಶ ಸಿಕ್ಕ ಕೂಡಲೇ, ರಾಹುಲ್ ಆಯ್ಕೆ ಮಂಡಳಿಯ ಮೂಕಕ್ಕೆ ಹೊಡೆಯುವಂತಹ ಪ್ರದರ್ಶನ ನೀಡಿದರು. ಮೊದಲ ಪಂದ್ಯದಲ್ಲೇ 84 ರನ್ಗಳ ಶ್ರೇಷ್ಠ ನಾಕ್ ಆಡಿದರು ಮತ್ತು ರೋಹಿತ್ ಜೊತೆ 97 ರನ್ಗಳ ಆರಂಭಿಕ ಪಾಲುದಾರಿಕೆ ಹಂಚಿಕೊಂಡರು. ಈ ಆರಂಭಿಕ ಪಾಲುದಾರಿಕೆಯಿಂದ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಸ್ಪರ್ಧಾತ್ಮಕ ಗುರಿ ಸಾಧಿಸಿತು.
ನೆಟ್ಸ್ ಬೌಲರ್ ಆಗಿದ್ದ ಸುಂದರ್ಗೆ ಆಕಸ್ಮಿಕ ಅವಕಾಶ ಇಂತಹದೆ ಇನ್ನೊಂದು ಘಟನೆಯಾದ ವಾಷಿಂಗ್ಟನ್ ಸುಂದರ್ ಪ್ರಕರಣವನ್ನು ತೆಗೆದುಕೊಳ್ಳಿ. ಈ ವರ್ಷದ ಆರಂಭದಲ್ಲಿ ಭಾರತ, ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಆ ವೇಳೆ ಆಯ್ಕೆ ಮಂಡಳಿ ವಾಷಿಂಗ್ಟನ್ ಸುಂದರ್ ಅವರನ್ನು ಕೇವಲ ನೆಟ್ಸ್ ಬೌಲರ್ ಆಗಿ ಆಯ್ಕೆ ಮಾಡಿತ್ತು. ಆದರೆ ತಂಡದ ಪ್ರಮುಖ ಆಟಗಾರರ ಇಂಜುರಿ ಸಮಸ್ಯೆಯಿಂದ ಜನವರಿಯಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಸುಂದರ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಿತು. ಸುಂದರ್ ಮತ್ತು ಶಾರ್ದೂಲ್ ಠಾಕೂರ್ ಅವರ ಅತ್ಯುತ್ತಮವಾದ ಪ್ರದರ್ಶನದಿಂದಾಗಿ ಭಾರತ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು.
ಇವೆಲ್ಲ ಪ್ರಸಂಗಗಳ ಜೊತೆಗೆ ಭಾರತೀಯ ಕ್ರಿಕೆಟ್‌ನ ಇತ್ತೀಚಿನ ಯಶಸ್ಸುಗಳಾದ ರಿಷಬ್ ಪಂತ್, ಸಿರಾಜ್, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್‌ವಾಲ್ ಮತ್ತು ಇತರ ಅನೇಕ ಆಟಗಾರರಿಗೆ, ಪ್ರಮುಖ ಆಟಗಾರರ ಇಂಜುರಿ ಸಮಸ್ಯೆಯಿಂದ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ವಿಪರ್ಯಾಸ.
ಗಾಯಗೊಂಡರೆ ಮಾತ್ರ ಇತರರಿಗೆ ಅವಕಾಶ ಮೊಹಮ್ಮದ್ ಶಮಿ ಗಾಯಗೊಳ್ಳದಿದ್ದರೆ ಮತ್ತು ಇಶಾಂತ್ ಶರ್ಮಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೆ, ಶಾರ್ದೂಲ್ ಠಾಕೂರ್ ಅಥವಾ ಉಮೇಶ್ ಯಾದವ್ ನಾಲ್ಕನೇ ಟೆಸ್ಟ್ ಆಡುತ್ತಿರಲಿಲ್ಲ. ಬದಲಾಗಿ, ಅವರ ಸೇರ್ಪಡೆಯು ತಂಡದ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳಲ್ಲಿ ಸಾಕಷ್ಟು ಹುರುಪು, ತಾಜಾತನ ಮತ್ತು ಉತ್ಸಾಹವನ್ನು ತಂದಿತು.
ಕೋವಿಡ್ -19 ಪ್ರೋಟೋಕಾಲ್‌ಗಳ ಕಾರಣದಿಂದಾಗಿ ಅಸಾಧಾರಣವಾಗಿ ಬೃಹತ್ ಆಟಗಾರರ ತಂಡದೊಂದಿಗೆ ಪ್ರಯಾಣಿಸುವುದು ಮತ್ತು ತರಬೇತಿ ನೀಡುವುದು 16 ಕ್ಕೂ ಹೆಚ್ಚು ಆಟಗಾರರ ಪ್ರತಿಭೆಯನ್ನು ಉತ್ತಮಗೊಳಿಸಲು ಸಹಾಯ ಮಾಡಿದೆ. ಆದರೆ ಬದಲಿ ಆಟಗಾರರ ಹಸಿವು, ನಂಬಿಕೆ ಮತ್ತು ತೀವ್ರ ಸ್ಪರ್ಧಾತ್ಮಕ ಮನೋಭಾವದ ಬಗ್ಗೆ ಕೊಂಚ ಯೋಜಿಸುವುದು ಸೂಕ್ತವಾಗಿದೆ. ಅವರು ಆಸ್ಟ್ರೇಲಿಯಾದಲ್ಲಿ ಮತ್ತು ಈಗ ಇಂಗ್ಲೆಂಡಿನಲ್ಲಿ ಉತ್ತಮ ಪ್ರದರ್ಶನ ತೋರಿರುವುದು ಭಾರತೀಯ ಕ್ರಿಕೆಟ್‌ನ ಆಳ ಮತ್ತು ಸ್ಪರ್ಧಾತ್ಮಕತೆಗೆ ಬಲ ನೀಡಿದೆ. ಆದಾಗ್ಯೂ, ಆಯ್ಕೆದಾರರು ಆಯ್ಕೆಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರದಿದ್ದರೆ ಮತ್ತು ನಿಜ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡಲು ಇತರ ಆಟಗಾರರ ಗಾಯಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ ಇಂತಹ ನೂರಾರು ಪ್ರತಿಭೆಗಳು ದೇಶದಿಂದ ಪಲಾಯನ ಮಾಡಬಹುದು. ಅಥವಾ ಅವಕಾಶಗಳಿಗಾಗಿ ಕಾಯ್ದು ಕಾಯ್ದು ಮೂಲೆ ಗುಂಪಾಗಿ ಬಿಡಬಹುದು.
ಇದನ್ನೂ ಓದಿ:KL Rahul: ಇಲ್ಲಿ ನಮ್ಮ ಒಬ್ಬ ಆಟಗಾರನನ್ನು ಕೆಣಕಿದ್ರೆ ನಾವು 11 ಆಟಗಾರರು ತಿರುಗಿ ಬೀಳುತ್ತೇವೆ: ಕೆ.ಎಲ್ ರಾಹುಲ್