“ದೇಹ ದಣಿದರೂ ನಾವು ಬಿಡಲ್ಲ”- ಧೋನಿ ಬಗ್ಗೆ ರೈನಾ ಮಾತು

IPL 2026: ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ ಎಂ.ಎಸ್. ಧೋನಿ ಅವರ ಬ್ಯಾಟಿಂಗ್ ನೋಡಲಾಗದೆ ನಿರಾಸೆಗೊಂಡಿದ್ದ ಕೋಟ್ಯಂತರ 'ಥಲಾ' ಅಭಿಮಾನಿಗಳಿಗೆ ಈಗ ಜಂಟಿ ಆಸರೆಯೊಂದು ಸಿಕ್ಕಿದೆ. ಧೋನಿ ಅವರ ಆಪ್ತ ಸ್ನೇಹಿತ ಸುರೇಶ್ ರೈನಾ, ಧೋನಿ ಅವರನ್ನು ಮುಂಬರುವ ಐಪಿಎಲ್ 2027ರ ಸೀಸನ್‌ನಲ್ಲಿ ಆಡುವಂತೆ ಒತ್ತಾಯಿಸಿದ್ದು, ಅದಕ್ಕೆ ಧೋನಿ ನೀಡಿದ ಭಾವುಕ ಮರುನುಡಿ ಈಗ ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ದೇಹ ದಣಿದರೂ ನಾವು ಬಿಡಲ್ಲ- ಧೋನಿ ಬಗ್ಗೆ ರೈನಾ ಮಾತು
MSD - Raina

Updated on: May 19, 2026 | 9:25 PM

ಈ ಬಾರಿಯ ಐಪಿಎಲ್ ನಲ್ಲಿ ಒಂದೇ ಒಂದು ಪಂದ್ಯವಾಡದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಸೀಸನ್- 20 ರಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಧೋನಿಯ ಆಪ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕಡೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸುರೇಶ್ ರೈನಾ,‌ ಮಹೇಂದ್ರ ಸಿಂಗ್ ಧೋನಿ ಮುಂಬರುವ 2027ರ ಐಪಿಎಲ್ ಸೀಸನ್‌ನಲ್ಲಿ ಕಣಕ್ಕಿಳಿಯಬೇಕು ಎಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

“ನೀನು 2026ರ ಐಪಿಎಲ್‌ಗೆ ಮಿಸ್ಡ್ ಕಾಲ್ ಕೊಟ್ಟಿದ್ದೀಯಾ, ಅದು ಲೆಕ್ಕಕ್ಕೆ ಬರುವುದಿಲ್ಲ. ಮುಂದಿನ ವರ್ಷ ನೀನು ಮರಳಿ ಬರಲೇಬೇಕು ಎಂದು ನಾನು ಧೋನಿಗೆ ಹೇಳಿದ್ದೀನಿ” ಎಂದು ರೈನಾ ತಿಳಿಸಿದ್ದಾರೆ.

ನನ್ನ ಈ ಮಾತಿಗೆ ಧೋನಿ, “ನನ್ನ ದೇಹ ಈಗ ಸ್ವಲ್ಪ ದಣಿದಿದೆ” ಎಂದಿದ್ದಾರೆ. ಆದರೆ ನಾನು ಇದನ್ನು ಒಪ್ಪಿಲ್ಲ. “ನಾವು ಯಾವುದನ್ನೂ ನಂಬುವುದಿಲ್ಲ, ನೀನು ಮುಂದಿನ ವರ್ಷ ಆಡಲೇಬೇಕು” ಎಂದು ಧೋನಿಗೆ ಪಟ್ಟು ಹಿಡಿದಿರುವುದಾಗಿ ರೈನಾ ತಿಳಿಸಿದ್ದಾರೆ.

ಧೋನಿ ಸಕಾರಾತ್ಮಕತೆ:

2027 ರ ಐಪಿಎಲ್ ಆಡುವುದು ಧೋನಿ ಅವರ ವೈಯಕ್ತಿಕ ನಿರ್ಧಾರವಾದರೂ, ಅವರು ಈ ಬಗ್ಗೆ ಸಕಾರಾತ್ಮಕವಾಗಿದ್ದಾರೆ ಎಂದು ರೈನಾ ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಿಎಸ್‌ಕೆ ತಂಡವು ಅತ್ಯುತ್ತಮ ತಂಡವಾಗಿ ಒಂದಾಗುತ್ತಿದ್ದು, ಧೋನಿ ಉಪಸ್ಥಿತಿ ತಂಡಕ್ಕೆ ಆನೆ ಬಲ ನೀಡಲಿದೆ ಎಂಬುದು ರೈನಾ ಅವರ ನಂಬಿಕೆಯಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾದಿಂದ 9 ಆಟಗಾರರು ಔಟ್..!

ಒಟ್ಟಾರೆಯಾಗಿ, ಸುರೇಶ್ ರೈನಾ ಅವರ ಈ ಮಾತುಗಳು ಎಂ.ಎಸ್. ಧೋನಿ ಅವರ ಐಪಿಎಲ್ ಭವಿಷ್ಯದ ಕುರಿತಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ವಯಸ್ಸು ಮತ್ತು ದೈಹಿಕ ಸಾಮರ್ಥ್ಯದ ಸವಾಲುಗಳಿದ್ದರೂ, ‘ಥಲಾ’ ಕಣಕ್ಕಿಳಿದರೆ ಸಿಎಸ್‌ಕೆ ತಂಡದ ಬಲ ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ, ಅಂತಿಮವಾಗಿ 2027ರ ಐಪಿಎಲ್‌ನಲ್ಲಿ ಪ್ಯಾಡ್ ಕಟ್ಟಿ ಮೈದಾನಕ್ಕಿಳಿಯುವ ಕುರಿತು ಸ್ವತಃ ಧೋನಿ ಅವರೇ ಅಧಿಕೃತ ನಿರ್ಧಾರ ಪ್ರಕಟಿಸಬೇಕಾಗಿದ್ದು, ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಆ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

 

Follow Us