Asia Cup 2025: ಹ್ಯಾಂಡ್‌ಶೇಕ್ ವಿವಾದ; ಐಸಿಸಿ ಮುಂದೆ ವಿಚಾರಣೆಗೆ ಹಾಜರಾದ ಸೂರ್ಯ
Asia Cup 2025: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದೊಂದಿಗಿನ ಹ್ಯಾಂಡ್‌ಶೇಕ್ ವಿವಾದದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೂರಿನ ಮೇರೆಗೆ ಈ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 26 ರಂದು ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ವಿಚಾರಣೆಯ ಫಲಿತಾಂಶದ ಆಧಾರದ ಮೇಲೆ ಸೂರ್ಯಕುಮಾರ್ ಅವರಿಗೆ ಎಚ್ಚರಿಕೆ ಅಥವಾ ದಂಡ ವಿಧಿಸಬಹುದು. ಬಿಸಿಸಿಐ ಕೂಡ ಪಾಕಿಸ್ತಾನದ ಇಬ್ಬರು ಆಟಗಾರರ ವಿರುದ್ಧ ಐಸಿಸಿಗೆ ದೂರು ನೀಡಿದೆ.

2025 ರ ಏಷ್ಯಾಕಪ್ (Asia Cup 2025) ಆರಂಭದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ ಹ್ಯಾಂಡ್‌ಶೇಕ್ ವಿವಾದದ ಬಗ್ಗೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ದೂರಿನನ್ವಯ ಐಸಿಸಿ (ICC), ಇಂದು ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ. ಪಿಸಿಬಿಯಿಂದ ಬಂದ ದೂರಿನ ಮೇರೆಗೆ ಸೂರ್ಯಕುಮಾರ್ ಯಾದವ್ ಅವರ ವಿಚಾರಣೆ ಇಂದು ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್ ಅವರ ಮುಂದೆ ನಡೆದಿದೆ. ವರದಿಗಳ ಪ್ರಕಾರ ಸೆಪ್ಟೆಂಬರ್ 26 ರಂದು ವಿಚಾರಣೆಯ ಅಂತಿಮ ನಿರ್ಧಾರ ಹೊರಬೀಳಲಿದೆ. ನಿರ್ಧಾರವು ಸೂರ್ಯಕುಮಾರ್ ಯಾದವ್ ವಿರುದ್ಧ ಹೋದರೆ, ಅವರಿಗೆ ಎಚ್ಚರಿಕೆ ಅಥವಾ ಅವರ ಪಂದ್ಯ ಶುಲ್ಕದ ಶೇಕಡಾವಾರು ದಂಡವನ್ನು ಪಡೆಯಬಹುದು. ಆದಾಗ್ಯೂ, ಸೂರ್ಯ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ರೆಫರಿ ಕಂಡುಕೊಂಡರೆ, ಅವರು ಯಾವುದೇ ಶಿಕ್ಷೆಯನ್ನು ಎದುರಿಸುವುದಿಲ್ಲ.
ಏನಿದು ಹ್ಯಾಂಡ್‌ಶೇಕ್ ವಿವಾದ?
ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್‌ನ ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದವು. ಆ ಸಮಯದಲ್ಲಿ ನಾಯಕ ಸೂರ್ಯ, ಪಾಕ್ ತಂಡದ ನಾಯಕನೊಂದಿಗೆ ಹ್ಯಾಂಡ್‌ಶೇಕ್ ಮಾಡಿರಲಿಲ್ಲ. ಪಂದ್ಯ ಮುಗಿದ ಬಳಿಕವೂ ಟೀಂ ಇಂಡಿಯಾ ಆಟಗಾರರು ಪಾಕ್ ತಂಡದ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡದೆ ಡ್ರೆಸಿಂಗ್ ರೂಮ್ಗೆ ತೆರಳಿದ್ದರು. ನಂತರ ಪಂದ್ಯ ಪ್ರಸ್ತುತಿಯ ಸಮಯದಲ್ಲಿ ನಾಯಕ ಸೂರ್ಯ, ಈ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರಿಗೆ ಹಾಗೂ ಭಾರತೀಯ ಸೇನೆಗೆ ಅರ್ಪಿಸಿದ್ದರು. ಇದೆಲ್ಲವುಗಳಿಂದ ಕೆರಳಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಟೀಂ ಇಂಡಿಯಾ ಹಾಗೂ ಸೂರ್ಯಕುಮಾರ್ ವಿರುದ್ಧ ಐಸಿಸಿಗೆ ದೂರು ನೀಡಿತ್ತು. ಪಿಸಿಬಿಯ ದೂರಿನನ್ವಯ ಇಂದು ವಿಚಾರಣೆ ನಡೆದಿದೆ.
ಲೀಗ್ ಹಂತದ ಬಳಿಕ ನಡೆದಿದ್ದ ಸೂಪರ್ 4 ಸುತ್ತಿನಲ್ಲೂ ಕೆಲವು ವಿವಾದಾತ್ಮಕ ಘಟನೆಗಳು ನಡೆದಿದ್ದವು. ಇದು ಬಿಸಿಸಿಐ ಸಾಹಿಬ್ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ವಿರುದ್ಧ ಐಸಿಸಿಗೆ ದೂರು ನೀಡಲು ಪ್ರೇರೇಪಿಸಿತು. ಒಂದೆಡೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸೂರ್ಯಕುಮಾರ್ ಯಾದವ್ ವಿರುದ್ಧ ಎರಡು ಆರೋಪಗಳ ಮೇಲೆ ದೂರು ದಾಖಲಿಸಿದರೆ, ಮತ್ತೊಂದೆಡೆ ಬಿಸಿಸಿಐ, ಪಾಕಿಸ್ತಾನದ ಇಬ್ಬರು ಆಟಗಾರರ ಮೇಲೆ ಐಸಿಸಿಗೆ ದೂರು ನೀಡಿದೆ.
Asia Cup 2025: ಸೂಪರ್ 4 ಸುತ್ತಿನ ಕೊನೆಯ ಪಂದ್ಯಕ್ಕೆ ಭಾರತ- ಶ್ರೀಲಂಕಾ ಸಜ್ಜು
ಪಾಕಿಸ್ತಾನಿ ಆಟಗಾರರ ವಿಚಾರಣೆ ಯಾವಾಗ?
ಬಿಸಿಸಿಐ, ಪಾಕಿಸ್ತಾನದ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಹ್ಯಾರಿಸ್ ರೌಫ್ ವಿರುದ್ಧ ಐಸಿಸಿಗೆ ದೂರು ನೀಡಿದೆ. ಭಾರತ ವಿರುದ್ಧದ ಸೂಪರ್ ಫೋರ್ ಪಂದ್ಯದ ವೇಳೆ ಇವರಿಬ್ಬರು ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದರು. ಫರ್ಹಾನ್ ಅರ್ಧಶತಕ ತಲುಪಿದ ನಂತರ ಗನ್ ಸಂಭ್ರಮಾಚರಣೆ ಮಾಡಿದರೆ, ಹ್ಯಾರಿಸ್ ರೌಫ್ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದ ಸನ್ನೆ ಮಾಡಿದರು. ಇದೀಗ ಸೆಪ್ಟೆಂಬರ್ 26 ರಂದು ಮ್ಯಾಚ್ ರೆಫರಿ ಈ ಇಬ್ಬರು ಆಟಗಾರರ ವಿಚಾರಣೆ ನಡೆಸಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
