T20 Blast 2022: ಪಂದ್ಯದ ವೇಳೆ ಮೈದಾನಕ್ಕೆ ಬಂದ ಕಾರು: ಅಚ್ಚರಿಯಿಂದ ನೋಡಿ ನಿಂತ ಆಟಗಾರರು..!
T20 Blast 2022: ಸರ್ರೆ ಪರ ಟಾಮ್ ಕರ್ರನ್ 36 ಮತ್ತು ಲಾರಿ ಇವಾನ್ಸ್ ಅಜೇಯ 35 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಜೇಮಿ ಓವರ್ಟನ್ 21 ಎಸೆತಗಳಲ್ಲಿ 40 ರನ್ ಗಳಿಸಿದರೂ ಸರ್ರೆ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.
ಕಾಲ ಬದಲಾದಂತೆ ಕ್ರಿಕೆಟ್‌ನಲ್ಲೂ ಬದಲಾವಣೆ ಆಗುತ್ತಿದೆ. ತಂತ್ರಜ್ಞಾನವು ಈ ಆಟವನ್ನು ನೋಡುವ ಮತ್ತು ಪ್ರದರ್ಶಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ನಲ್ಲೂ ಇಂತಹದೊಂದು ಬದಲಾವಣೆ ಕಂಡುಬಂದಿದೆ. ಸರ್ರೆ ಮತ್ತು ಯಾರ್ಕ್‌ಷೈರ್ ನಡುವಿನ T20 ಬ್ಲಾಸ್ಟ್‌ನ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಚೆಂಡನ್ನು ಕಾರಿನ ಮೂಲಕ ಮೈದಾನಕ್ಕೆ ತರಲಾಯಿತು. ಆರಂಭದಲ್ಲಿ ಚೆಂಡಿಗಾಗಿ ಕಾದು ನಿಂತಿದ್ದ ಆಟಗಾರರಿಗೆ ಟಾಯ್ ಕಾರು ಮೈದಾನಕ್ಕೆ ಎಂಟ್ರಿ ಕೊಟ್ಟಿತ್ತು ಅಚ್ಚರಿ ಮೂಡಿಸಿತ್ತು. ಆದರೆ ಕಾರು ಹತ್ತಿರ ಬರುತ್ತಿದ್ದಂತೆ ಮೇಲೆ ಚೆಂಡು ಇರುವುದು ಕಂಡು ಬಂದಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಕಾರಿನ ಮೇಲ್ಛಾವಣಿಯಲ್ಲಿ ಚೆಂಡನ್ನು ಇಟ್ಟು ರಿಮೋಟ್ ಕಂಟ್ರೋಲ್ ಮೂಲಕ ಆಪರೇಟ್ ಮಾಡಲಾಗಿದೆ. ಸಾಮಾನ್ಯವಾಗಿ ಪಂದ್ಯ ಆರಂಭಕ್ಕೂ ಮುನ್ನ ಚೆಂಡು ಅಂಪೈರ್ ಕೈಯಲ್ಲಿರುತ್ತದೆ. ಆದರೆ, ಟಿ20 ಬ್ಲಾಸ್ಟ್‌ನಲ್ಲಿ ಮೈದಾನದಲ್ಲಿ ಚೆಂಡನ್ನು ಪಡೆಯುವ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಇದಾಗ್ಯೂ ಟಿ20 ಬ್ಲಾಸ್ಟ್ ಆಡಳಿತ ಮಂಡಳಿಯ ಈ ನಡೆಯನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
? @Vitality_UK bringing out the match ball in style ? pic.twitter.com/rks0SBXabZ
— Vitality Blast (@VitalityBlast) July 6, 2022
ಏಕೆಂದರೆ ಐಪಿಎಲ್ ಸೇರಿದಂತೆ ಕೆಲ ಲೀಗ್ಗಳಲ್ಲಿ ಡ್ರೋಣ್ ಮೂಲಕವೇ ಈಗಾಗಲೇ ಚೆಂಡನ್ನು ಅಂಪೈರ್ಗೆ ತಲುಪಿಸಲಾಗಿದೆ. ಅಂತಹದ್ರಲ್ಲಿ ರಿಮೋಟ್ ಕಾರಿನ ಮೂಲಕ ಚೆಂಡನ್ನು ತಲುಪಿಸಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಯಾರ್ಕ್‌ಷೈರ್ ಮತ್ತು ಸರ್ರೆ ನಡುವಿನ ಮೊದಲ ಕ್ವಾರ್ಟರ್‌ಫೈನಲ್ ಬಹಳ ರೋಚಕವಾಗಿತ್ತು. ಸರ್ರೆ ಗೆಲುವಿಗೆ ಕೊನೆಯ 6 ಎಸೆತಗಳಲ್ಲಿ 5 ರನ್‌ಗಳ ಅಗತ್ಯವಿತ್ತು. ಆದರೆ, ಯಾರ್ಕ್‌ಷೈರ್ ಈ ಪಂದ್ಯವನ್ನು 1 ರನ್‌ನಿಂದ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೇವಿಡ್ ವಿಲ್ಲಿ ನಾಯಕತ್ವದ ಯಾರ್ಕ್ ಶೈರ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಯಾರ್ಕ್‌ಷೈರ್ ಪರ ಟಾಮ್ ಕೊಹ್ಲರ್ 48 ಎಸೆತಗಳಲ್ಲಿ 62 ರನ್ ಗಳಿಸಿದರು. ಸರ್ರೆ ಪರ ಗಸ್ ಅಟ್ಕಿನ್ಸನ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರು.
161 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸರ್ರೆ ತಂಡವು 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 1 ರನ್‌ಗಳಿಂದ ಸೋಲನುಭವಿಸಿತು. ಸರ್ರೆ ಪರ ಟಾಮ್ ಕರ್ರನ್ 36 ಮತ್ತು ಲಾರಿ ಇವಾನ್ಸ್ ಅಜೇಯ 35 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಜೇಮಿ ಓವರ್ಟನ್ 21 ಎಸೆತಗಳಲ್ಲಿ 40 ರನ್ ಗಳಿಸಿದರೂ ಸರ್ರೆ ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.