IND vs ENG: ಟೀಮ್ ಇಂಡಿಯಾದಲ್ಲಿ DK ಯ ಸ್ಥಾನಕ್ಕೆ ಕುತ್ತು..!
India vs England 2nd T20: ವಿರಾಟ್ ಕೊಹ್ಲಿಗಾಗಿ ಭರ್ಜರಿ ಫಾರ್ಮ್ನಲ್ಲಿರುವ ದೀಪಕ್ ಹೂಡಾ ಸ್ಥಾನ ಕಳೆದುಕೊಳ್ಳಬಹುದು. ಹಾಗೆಯೇ ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲಿದ್ದಾರೆ.
ಭಾರತ-ಇಂಗ್ಲೆಂಡ್ (India vs England 2nd T20) ನಡುವಣ 2ನೇ ಟಿ20 ಪಂದ್ಯವು ಇಂದು ಎಡ್ಜ್ಬಾಸ್ಟನ್ನಲ್ಲಿ ನಡೆಯಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 50 ರನ್ಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ (Team India) ಈ ಮ್ಯಾಚ್ನಲ್ಲಿ ಗೆದ್ದರೆ ಸರಣಿ ವಶಪಡಿಸಿಕೊಳ್ಳಬಹುದು. ಅತ್ತ ಇಂಗ್ಲೆಂಡ್ಗೆ ಇದು ಮಾಡು ಇಲ್ಲವೇ ಮಡಿ. ಅತ್ತ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದಿದ್ದರೂ, ಆ ಪಂದ್ಯದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಈ ಭಾರೀ ಬದಲಾವಣೆ ಕಂಡು ಬರಲಿದೆ. ಏಕೆಂದರೆ ಮೊದಲ ಮ್ಯಾಚ್ನಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ (Virat Kohli), ರಿಷಭ್ ಪಂತ್ (Rishabh Pant), ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (Ravindra Jadeja) ತಂಡಕ್ಕೆ ಮರಳಿದ್ದಾರೆ. ಈ ಐವರು ಆಟಗಾರರಲ್ಲಿ ನಾಲ್ವರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು ಎಂಬುದು ವಿಶೇಷ. ಹೀಗಾಗಿ ಇವರುಗಳಿಗಾಗಿ ಯುವ ಆಟಗಾರರು ತಂಡದ ಹೊರಗುಳಿಯಬೇಕಾಗಿ ಬರಬಹುದು.
ಇಲ್ಲಿ ವಿರಾಟ್ ಕೊಹ್ಲಿಗಾಗಿ ಭರ್ಜರಿ ಫಾರ್ಮ್ನಲ್ಲಿರುವ ದೀಪಕ್ ಹೂಡಾ ಸ್ಥಾನ ಕಳೆದುಕೊಳ್ಳಬಹುದು. ಹಾಗೆಯೇ ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಲಿದ್ದಾರೆ. ಇನ್ನು ಅಕ್ಷರ್ ಪಟೇಲ್ ಜಾಗದಲ್ಲಿ ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಖಚಿತ. ಆದರೆ ರಿಷಭ್ ಪಂತ್ ಯಾರ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದೇ ಪ್ರಶ್ನೆ.
ಏಕೆಂದರೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ಗಳಾಗಿ ಇಬ್ಬರು ಆಟಗಾರರಿದ್ದಾರೆ. ಇಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಆರಂಭಿಕರಾಗಿ ಆಡುತ್ತಿದ್ದಾರೆ. ಹೀಗಾಗಿ ಎಡಗೈ-ಬಲಗೈ ಜೋಡಿಯಾಗಿ ರೋಹಿತ್ ಶರ್ಮಾ ಜೊತೆ ಕಿಶನ್ ಆರಂಭಿಕನಾಗಿ ಮುಂದುವರೆಯಬಹುದು. ಹಾಗೆಯೇ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ದಿನೇಶ್ ಕಾರ್ತಿಕ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾದ ಹೊಸ ಫಿನಿಶರ್ ಆಗಿರುವ ಡಿಕೆ ಸೌತ್ ಆಫ್ರಿಕಾ ಸರಣಿಯ ಮೂಲಕ ಕಂಬ್ಯಾಕ್ ಮಾಡಿದ್ದರು.
ಅಂದರೆ 2019 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಬಾರಿ ಆಡಿದ್ದ ಡಿಕೆ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಅದರಂತೆ ಸೌತ್ ಆಫ್ರಿಕಾ ಸರಣಿಯಿಂದ ಡಿಕೆ ಟೀಮ್ ಇಂಡಿಯಾದಲ್ಲಿದ್ದಾರೆ. ಅಲ್ಲದೆ ಕಳೆದ 7 ಪಂದ್ಯಗಳಿಂದ 70 ಎಸೆತಗಳಲ್ಲಿ ಒಟ್ಟು 108 ರನ್ ಕಲೆಹಾಕಿದ್ದಾರೆ. ಒಂದಾರ್ಥದಲ್ಲಿ ಟೀಮ್ ಇಂಡಿಯಾ ಪರ ದಿನೇಶ್ ಕಾರ್ತಿಕ್ ಫಿನಿಶಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
ಆದರೀಗ ತಂಡದಲ್ಲಿ ಪ್ರಮುಖ ಆಟಗಾರರ ದಂಡೇ ಇದ್ದು, ಹೀಗಾಗಿ 37 ವರ್ಷದ ಡಿಕೆಗೆ ಅವಕಾಶ ಸಿಗಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಎಡ್ಜ್ಬಾಸ್ಟನ್ ಟೆಸ್ಟ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ರಿಷಭ್ ಪಂತ್ ಇದೀಗ ತಂಡಕ್ಕೆ ಮರಳಿದ್ದಾರೆ. ಇದೀಗ ಅದೇ ಮೈದಾನದಲ್ಲಿ ಟೀಮ್ ಇಂಡಿಯಾ 2ನೇ ಟಿ20 ಪಂದ್ಯವಾಡುತ್ತಿದೆ.
ಇತ್ತ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಖಾಯಂ ಸದಸ್ಯ ಎನಿಸಿಕೊಂಡಿರುವ ಪಂತ್ ಆಗಮನದೊಂದಿಗೆ ದಿನೇಶ್ ಕಾರ್ತಿಕ್ ಹೊರಬೀಳುವ ಸಾಧ್ಯತೆಯಿದೆ. ಏಕೆಂದರೆ ಪಂತ್ ತಂಡದಲ್ಲಿದ್ದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ಪಂತ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಿದ್ರೆ, ಯಾರನ್ನು ಕೈ ಬಿಡುವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ಪ್ರಸ್ತುತ ಪ್ಲೇಯಿಂಗ್ ಇಲೆವೆನ್ ಗಮನಿಸಿದ್ರೆ ದಿನೇಶ್ ಕಾರ್ತಿಕ್ ಅವರೇ ಹೊರಗುಳಿಯಬೇಕಾಗಿ ಬರಬಹುದು.
ಅಂದರೆ ಮುಂದಿನ ದಿನಗಳಲ್ಲಿ ರಿಷಭ್ ಪಂತ್ ಭರ್ಜರಿ ಪ್ರದರ್ಶನ ನೀಡಿದ್ರೆ ದಿನೇಶ್ ಕಾರ್ತಿಕ್ ಬೆಂಚ್ ಕಾಯಬೇಕಾಗಿ ಬರಬಹುದು. ಏಕೆಂದರೆ ಟೀಮ್ ಇಂಡಿಯಾದಲ್ಲಿ ಫಿನಿಶಿಂಗ್ ಜವಾಬ್ದಾರಿ ನಿರ್ವಹಿಸಲು ಸದ್ಯ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಇದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುವುದು ಅನುಮಾನ ಎಂದೇ ಹೇಳಬಹುದು. ಒಟ್ಟಿನಲ್ಲಿ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯಲು ಆಟಗಾರರ ನಡುವೇ ಪೈಪೋಟಿ ಏರ್ಪಟ್ಟಿದೆ.