T20 World Cup 2022: 12 ತಂಡಗಳು, 30 ಪಂದ್ಯಗಳು: ಹೇಗಿರಲಿದೆ ಸೂಪರ್-12 ಹಣಾಹಣಿ?
T20 World Cup 2022: 2007 ರ ಟಿ20 ವಿಶ್ವಕಪ್ ಬಳಿಕ ಉಭಯ ತಂಡಗಳು ಚುಟುಕು ಕ್ರಿಕೆಟ್ ಕದನದಲ್ಲಿ ಮತ್ತೆ ಫೈನಲ್ ಆಡಿಲ್ಲ. ಹೀಗಾಗಿ ಈ ಬಾರಿ ಫೈನಲ್ ಫೈಟ್ನಲ್ಲಿ ಮತ್ತೆ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.
T20 World Cup 2022: ಟಿ20 ವಿಶ್ವಕಪ್ 2ನೇ ಹಂತಕ್ಕೆ ಕಾಲಿಟ್ಟಿದೆ. ಮೊದಲ ಹಂತದಲ್ಲಿ 8 ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದು, ಅದರಲ್ಲಿ ಗೆದ್ದ ನಾಲ್ಕು ತಂಡಗಳು ಇದೀಗ ಸೂಪರ್-12 ಹಂತಕ್ಕೆ ಪ್ರವೇಶಿಸಿದೆ. ಹೆಸರೇ ಸೂಚಿಸುವಂತೆ ಸೂಪರ್-12 ನಲ್ಲಿ ಒಟ್ಟು 12 ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಆದರೆ ಈ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿರುವುದು ವಿಶೇಷ. ಅಂದರೆ ಇಲ್ಲಿ 12 ತಂಡಗಳನ್ನು 6 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಯಾ ಗ್ರೂಪ್ನ ತಂಡಗಳು ಪರಸ್ಪರ ಒಂದೊಂದು ಪಂದ್ಯವಾಡಲಿದೆ. ಇಲ್ಲಿ ಒಂದು ತಂಡವು ತನ್ನ ಗ್ರೂಪ್ನಲ್ಲಿ ಒಟ್ಟು ಐದು ಪಂದ್ಯಗಳನ್ನಾಡಬೇಕಿದೆ. ಅದರಂತೆ ಸೂಪರ್-12 ಸುತ್ತಿನಲ್ಲಿ ಒಟ್ಟು 30 ಪಂದ್ಯಗಳನ್ನಾಡಲಿದೆ. ಯಾವ ಗ್ರೂಪ್ನಲ್ಲಿ ಯಾವೆಲ್ಲಾ ತಂಡಗಳಿವೆ…
ಗ್ರೂಪ್- 1
- ಅಫ್ಘಾನಿಸ್ತಾನ್
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ಐರ್ಲೆಂಡ್
- ನ್ಯೂಜಿಲೆಂಡ್
- ಶ್ರೀಲಂಕಾ
ಗ್ರೂಪ್-2
- ಭಾರತ
- ಪಾಕಿಸ್ತಾನ್
- ಬಾಂಗ್ಲಾದೇಶ್
- ನೆದರ್ಲ್ಯಾಂಡ್ಸ್
- ಸೌತ್ ಆಫ್ರಿಕಾ
- ಜಿಂಬಾಬ್ವೆ
ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯುವುದರಿಂದ ಸೂಪರ್-12 ಹಂತದಲ್ಲಿ ಗ್ರೂಪ್ಗಳ ನಡುವೆ ಯಾವುದೇ ಪಂದ್ಯ ನಡೆಯುವುದಿಲ್ಲ. ಅಂದರೆ ಗ್ರೂಪ್-1 ನಲ್ಲಿರುವ ತಂಡಗಳು ಗ್ರೂಪ್-2 ನಲ್ಲಿರುವ ತಂಡಗಳ ವಿರುದ್ಧ ಸೆಣಸುವುದಿಲ್ಲ. ಬದಲಾಗಿ ಎರಡು ಗ್ರೂಪ್ಗಳ ನಾಲ್ಕು ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿದೆ.
ಅಂದರೆ ಇಲ್ಲಿ ಆಯಾ ಗ್ರೂಪ್ಗಳಿಗೆ ಪಾಯಿಂಟ್ ಟೇಬಲ್ ಇರಲಿದೆ. ಈ ಪಾಯಿಂಟ್ ಟೇಬಲ್ನಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ಹಂತಕ್ಕೇರಲಿದೆ. ಅಂದರೆ ಗ್ರೂಪ್-1 ಹಾಗೂ ಗ್ರೂಪ್-2 ಪಾಯಿಂಟ್ ಟೇಬಲ್ನಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆಯುವ 4 ತಂಡಗಳು ಸೆಮಿಫೈನಲ್ಗೆ ಎಂಟ್ರಿ ಕೊಡಲಿದೆ.
ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರಲಿದೆ?
ಸೆಮಿಫೈನಲ್ನಲ್ಲಿ ನಾಲ್ಕು ತಂಡಗಳು ವಿರುದ್ಧವಾಗಿ ಸೆಣಸಲಿದೆ. ಅಂದರೆ ಒಂದೇ ಗ್ರೂಪ್ನಿಂದ ಸೆಮಿಫೈನಲ್ಗೇರಿದ ಎರಡು ತಂಡಗಳು ಮುಖಾಮುಖಿಯಾಗುವುದಿಲ್ಲ. ಬದಲಾಗಿ ಗ್ರೂಪ್-1 vs ಗ್ರೂಪ್- 2 ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಇನ್ನು ಒಂದೇ ಗ್ರೂಪ್ನಿಂದ ಆಯ್ಕೆಯಾದ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಬಹುದು. ಅಂದರೆ ಸೆಮಿಫೈನಲ್ನಲ್ಲಿ ಪರಸ್ಪರ ವಿರುದ್ಧ ಗ್ರೂಪ್ನಿಂದ ಆಯ್ಕೆಯಾದ ತಂಡಗಳು ಮುಖಾಮುಖಿಯಾಗುವುದರಿಂದ, ಒಂದೇ ಗ್ರೂಪ್ನ ಎರಡು ತಂಡಗಳು ಸೆಮಿಫೈನಲ್ನಲ್ಲಿ ಜಯ ಸಾಧಿಸಿದರೆ ಫೈನಲ್ಗೇರಬಹುದು. ಈ ಮೂಲಕ ಒಂದೇ ಗ್ರೂಪ್ನ 2 ತಂಡಗಳು ಫೈನಲ್ನಲ್ಲಿ ಮತ್ತೆ ಸೆಣಸಿದರೂ ಅಚ್ಚರಿಪಡಬೇಕಿಲ್ಲ.
ಸದ್ಯ ಭಾರತ ಹಾಗೂ ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಉಭಯ ತಂಡಗಳು ಸೆಮಿಫೈನಲ್ಗೇರಿ ಫೈನಲ್ನಲ್ಲಿ ಮತ್ತೆ ಮುಖಾಮುಖಿಯಾಗಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ. ಏಕೆಂದರೆ 2007 ರ ಟಿ20 ವಿಶ್ವಕಪ್ ಬಳಿಕ ಉಭಯ ತಂಡಗಳು ಚುಟುಕು ಕ್ರಿಕೆಟ್ ಕದನದಲ್ಲಿ ಮತ್ತೆ ಫೈನಲ್ ಆಡಿಲ್ಲ. ಹೀಗಾಗಿ ಈ ಬಾರಿ ಫೈನಲ್ ಫೈಟ್ನಲ್ಲಿ ಮತ್ತೆ ಮುಖಾಮುಖಿಯಾಗಲಿದೆಯಾ ಕಾದು ನೋಡಬೇಕಿದೆ.
Published On - 3:42 pm, Sat, 22 October 22