India vs Pakistan: ಕಿಂಗ್ ಕೊಹ್ಲಿ ಕಮಾಲ್: ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ
India vs Pakistan: ಕೊನೆಯ ಓವರ್ನಲ್ಲಿ ಟೀಮ್ ಇಂಡಿಯಾಗೆ ಗೆಲ್ಲು 16 ರನ್ಗಳ ಅವಶ್ಯಕತೆಯಿತ್ತು. ಈ ಗುರಿಯನ್ನು ಏಕಾಂಗಿಯಾಗಿ ಚೇಸ್ ಮಾಡುವ ಮೂಲಕ ವಿರಾಟ್ ಕೊಹ್ಲಿ ಭಾರತದ ಗೆಲುವಿನ ರೂವಾರಿಯಾದರು.
India vs Pakistan: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪಾಕಿಸ್ತಾನ್ (India vs Pakistan) ವಿರುದ್ಧದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಕಿಂಗ್ ಕೊಹ್ಲಿ. ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟರ್ಗಳು ಕೈಕೊಟ್ಟರೂ ವಿರಾಟ್ ಕೊಹ್ಲಿ (Virat Kohli) ತಂಡಕ್ಕೆ ಆಸರೆಯಾದರು. ಅದರಲ್ಲೂ ಅಂತಿಮ ಓವರ್ಗಳಲ್ಲಿ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಕಳೆದ ಟಿ20 ವಿಶ್ವಕಪ್ನಲ್ಲಿನ ಸೋಲಿನ ಸೇಡನ್ನು ಟೀಮ್ ಇಂಡಿಯಾ ತೀರಿಸಿಕೊಂಡಿದೆ.
2021 ರ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್ ವಿರುದ್ಧ ಸೋಲನುಭವಿಸಿತ್ತು. ಅದು ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಟೀಮ್ ಇಂಡಿಯಾದ ಮೊದಲ ಸೋಲಾಗಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹೀನಾಯ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ವಿರಾಟ್ ಕೊಹ್ಲಿಯೇ ಪಂದ್ಯ ಗೆಲ್ಲಿಸಿ ಕೊಟ್ಟಿರುವುದು ವಿಶೇಷ.
53 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 4 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 82 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ 20ನೇ ಓವರ್ನ ಕೊನೆಯ ಎಸೆತದಲ್ಲಿ ಗೆಲುವಿನ ಗುರಿ ಮುಟ್ಟಿತು. ಈ ಮೂಲಕ 4 ವಿಕೆಟ್ಗಳ ಜಯ ಸಾಧಿಸಿದೆ.
ಕೊನೆಯ ಎರಡು ಓವರ್ಗಳಲ್ಲಿ 31 ರನ್ಗಳ ಗುರಿ ಪಡೆದಿದ್ದ ಟೀಮ್ ಇಂಡಿಯಾ ಪರ ಕಿಂಗ್ ಕೊಹ್ಲಿ 19ನೇ ಓವರ್ನಲ್ಲಿ ಅಬ್ಬರಿಸಿದರು. ವೇಗಿ ಹ್ಯಾರಿಸ್ ರೌಫ್ ಓವರ್ನಲ್ಲಿ 2 ಭರ್ಜರಿ ಸಿಕ್ಸ್ನೊಂದಿಗೆ 15 ರನ್ ಚಚ್ಚುವ ಮೂಲಕ ಗೆಲುವಿನ ಗುರಿಯನ್ನು ತಗ್ಗಿಸಿದರು. ಅಲ್ಲದೆ 20ನೇ ಓವರ್ನಲ್ಲಿ ಮೊಹಮ್ಮದ್ ನವಾಜ್ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದರು. ಇತ್ತ ವಿರಾಟ್ ಕೊಹ್ಲಿಯ ಅಬ್ಬರದ ಮುಂದೆ ಲಯ ತಪ್ಪಿದ ಪಾಕ್ ಬೌಲರ್ಗಳು ಒತ್ತಡಕ್ಕೊಳಗಾದರು.
ಆದರೆ ಇತ್ತ 53 ಎಸೆತಗಳಲ್ಲಿ 82 ರನ್ ಚಚ್ಚುವ ಮೂಲಕ ವಿರಾಟ್ ಕೊಹ್ಲಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಈ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
Published On - 5:24 pm, Sun, 23 October 22