T20 World Cup 2024: ಐಪಿಎಲ್ ವೀರರ ಚಿಂತೆ ಹೆಚ್ಚಿಸಿದ ‘ಸ್ಪಾಂಜಿ’ ಪಿಚ್
T20 World Cup 2024: ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನವನ್ನು ಬುಧವಾರ ಆರಂಭಿಸಲಿದೆ. ಜೂನ್ 5 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದ್ದು, ಹಾಗೆಯೇ ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ. ಇದಾದ ಬಳಿಕ ಯುಎಸ್ಎ ಮತ್ತು ಕೆನಡಾ ವಿರುದ್ಧ ಪಂದ್ಯಗಳನ್ನಾಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಹೊಡಿಬಡಿ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ ಆಟಗಾರರು ಇದೀಗ ಟಿ20 ವಿಶ್ವಕಪ್ಗಾಗಿ (T20 World Cup 2024) ಭರ್ಜರಿ ತಯಾರಿಯಲ್ಲಿದ್ದಾರೆ. ಈ ತಯಾರಿ ನಡುವೆ ನ್ಯೂಯಾರ್ಕ್ನ ನೂತನ ಪಿಚ್ ಬ್ಯಾಟರ್ಗಳ ಚಿಂತೆಯನ್ನು ಹೆಚ್ಚಿಸಿದೆ. ಇದಕ್ಕೆ ಮುಖ್ಯ ಕಾರಣ ನಸ್ಸೌ ಕೌಂಟಿ ಮೈದಾನದಲ್ಲಿ ‘ಸ್ಪಾಂಜಿ’ ಪಿಚ್ ಇರುವುದು.
ಸ್ಪಾಂಜಿ ಪಿಚ್ ಎಂದರೆ ಮೃದು ಮೇಲ್ಮೈ ಹೊಂದಿರುವ ಪಿಚ್. ಇಂತಹ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟಕರ. ಆದರೆ ತಾಳ್ಮೆಯಿದ್ದರೆ ಉತ್ತಮ ಇನಿಂಗ್ಸ್ ಕಟ್ಟಬಹುದು. ಅಂದರೆ ಇದೇ ಪಿಚ್ ಬ್ಯಾಟಿಂಗ್ಗೆ ಸಹಕಾರಿನಾ ಎಂದು ಕೇಳಿದ್ರೆ, ಬ್ಯಾಟರ್ಗಳಿಗೆ ಅಬ್ಬರಿಸಲು ಅವಕಾಶವಂತು ಇದೆ ಎನ್ನಬಹುದು.
ಆದರೆ ಬೌಲರ್ಗಳು ಕೂಡ ಸ್ಪಾಂಜಿ ಪಿಚ್ನಲ್ಲಿ ಯಾವಾಗ ಬೇಕಿದ್ದರೆ ಲಾಭ ಪಡೆಯಬಹುದು. ಅಂದರೆ ಈ ಪಿಚ್ ಮೇಲ್ಮೈ ಅನಿಶ್ಚಿತತೆಯಿಂದ ಕೂಡಿರುತ್ತದೆ. ಇದೇ ಕಾರಣದಿಂದಾಗಿ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಟೀಮ್ ಇಂಡಿಯಾ ಬ್ಯಾಟರ್ಗಳು ಆರಂಭದಲ್ಲಿ ತಿಣುಕಾಡಿದ್ದರು.
ಇಲ್ಲಿ ಬಿರುಸಿನ ಬ್ಯಾಟಿಂಗ್ಗೆ ಯತ್ನಿಸಿದರೂ ರೋಹಿತ್ ಶರ್ಮಾ 19 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 23 ರನ್ಗಳಾಗಿತ್ತು. ಅಂದರೆ ಹೆಚ್ಚಿನ ಎಸೆತಗಳನ್ನು ರಕ್ಷಣಾತ್ಮಕವಾಗಿ ಆಡಿದ್ದರು. ಆದರೆ ಎಡಗೈ ದಾಂಡಿಗ ರಿಷಭ್ ಪಂತ್ ಇದೇ ಮೈದಾನದಲ್ಲಿ 32 ಎಸೆತಗಳಲ್ಲಿ 53 ರನ್ ಬಾರಿಸಿ ಅಬ್ಬರಿಸಿದ್ದರು.
ಇದಾಗ್ಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು 182 ರನ್ಗಳು ಮಾತ್ರ. ಅಂದರೆ ಬಲಿಷ್ಠ ದಾಂಡಿಗರ ಬಳಗ ಹೊಂದಿರುವ ಟೀಮ್ ಇಂಡಿಯಾಗೆ 200 ರನ್ಗಳ ಗಡಿದಾಟಲು ಸಾಧ್ಯವಾಗಿರಲಿಲ್ಲ.
ಇನ್ನು ಭಾರತೀಯ ಬೌಲರ್ಗಳು ಈ ಪಿಚ್ನಲ್ಲಿ ಮೂಡಿಬರುತ್ತಿದ್ದ ಅನಿರೀಕ್ಷಿತ ತಿರುವುಗಳ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಅನಿರೀಕ್ಷಿತ ಬೌನ್ಸರ್ಗಳಿಂದಾಗಿ ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ತುಸು ಕಷ್ಟಕರವಾಗಿತ್ತು.
ಹಾಗೆಯೇ ಡ್ರಾಪ್-ಇನ್ ವಿಕೆಟ್ ಪರಿಣಾಮವಾಗಿ, ಕೆಲವು ಚೆಂಡುಗಳು ನೇರವಾಗಿ ಬಂದರೆ, ಇನ್ನು ಕೆಲವು ಬಾಲ್ಗಳು ಸ್ವಿಂಗ್ ಆಗುತ್ತಿದ್ದವು. ಹೀಗಾಗಿ ಈ ಪಿಚ್ನಲ್ಲಿ ಸ್ಪಿನ್ ಬೌಲರ್ಗಳು ಕೂಡ ಹೆಚ್ಚಿನ ಯಶಸ್ಸು ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಐಪಿಎಲ್ನಲ್ಲಿ ಸಿಡಿಲಬ್ಬರ ಪ್ರದರ್ಶಿಸಿದ ಬ್ಯಾಟರ್ಗಳು ನಸ್ಸೌ ಗ್ರೌಂಡ್ನಲ್ಲಿ ರನ್ಗಳಿಸಲು ಪರದಾಡಿದರೂ ಅಚ್ಚರಿ ಪಡಬೇಕಿಲ್ಲ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ನ್ಯೂಯಾರ್ಕ್ ನಸ್ಸೌ ಸ್ಟೇಡಿಯಂನಲ್ಲಿ ಬಹುತೇಕ ಪಂದ್ಯಗಳು ಹಗಲಿನಲ್ಲಿ ನಡೆಯಲಿದೆ. ಹೀಗಾಗಿ ಬಿಸಿಲಿನ ತಾಪದಿಂದಾಗಿ ಮುಂದಿನ ದಿನಗಳಲ್ಲಿ ಪಿಚ್ ಮೇಲ್ಮೈ ಕೂಡ ಬದಲಾಗಬಹುದು.
ಇದನ್ನೂ ಓದಿ: Virat Kohli: ಈ ಬಾರಿಯಾದರೂ ಈಡೇರುತ್ತಾ ಕಿಂಗ್ ಕೊಹ್ಲಿಯ ಕನಸು..!
ಹೀಗಾಗಿ ನಸ್ಸೌ ಸ್ಟೇಡಿಯಂ ಪಿಚ್ನ ಸ್ಪಷ್ಟ ಚಿತ್ರಣ ಸೌತ್ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯದ ವೇಳೆ ಗೊತ್ತಾಗಲಿದೆ. ಏಕೆಂದರೆ ಜೂನ್ 3 ರಂದು ನಡೆಯಲಿರುವ ಟಿ20 ವಿಶ್ವಕಪ್ನ 4ನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಪಿಚ್ ಹೇಗೆ ವರ್ತಿಸಲಿದೆ ಎಂಬುದನ್ನು ತಿಳಿಯಲು ಉಳಿದ ತಂಡಗಳು ಕೂಡ ಕಾತುರದಿಂದ ಕಾಯುತ್ತಿದೆ.