
ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆದಿದ್ದ 2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಗಂಭೀರ ಆರೋಪವೊಂದು ಕೇಳಿಬಂದಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಐಸಿಸಿ (ICC) ಕೂಡ ಈಗಾಗಲೇ ತನಿಖೆ ನಡೆಸುತ್ತಿದೆ ಎಂತಲೂ ವರದಿಯಾಗಿದೆ. ವರದಿಯ ಪ್ರಕಾರ, ನ್ಯೂಜಿಲೆಂಡ್ ಹಾಗೂ ಕೆನಡಾ ನಡುವಿನ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್ ನಡೆದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ಘಟಕ ಈ ಪಂದ್ಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ಭ್ರಷ್ಟಾಚಾರ ನಿಗ್ರಹ ಘಟಕ, ಕೆನಡಾ ಕ್ರಿಕೆಟ್ ಮೇಲೆ ಕೇಳಿಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಟಿ20 ವಿಶ್ವಕಪ್‌ನಲ್ಲಿ ಕೆನಡಾ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಐಸಿಸಿ ಈ ಬಗ್ಗೆ ತನಿಖೆ ಆರಂಭಿಸಿದೆ. ಐಸಿಸಿ ಈ ಬಗ್ಗೆ ತನಿಖೆ ನಡೆಸಲು ಕಾರಣವೂ ಇದ್ದು, ಪಂದ್ಯದ ವೇಳೆ ಕೆನಡಾ ತಂಡದ ಬೌಲರ್ಗಳು ಬೌಲ್ ಮಾಡಿದ ದುಬಾರಿ ಓವರ್ಗಳು ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿವೆ.
ನಿರ್ದಿಷ್ಟವಾಗಿ ಹೇಳುವುದಾದರೆ, ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಐದನೇ ಓವರ್ ಅನ್ನು ಕೆನಡಾದ ನಾಯಕ ದಿಲ್‌ಪ್ರೀತ್ ಬಾಜ್ವಾ ಎಸೆದರು. ಈ ಓವರ್‌ನಲ್ಲಿ ಅವರು ನೋ-ಬಾಲ್ ಹಾಗೂ ವೈಡ್ ಸೇರಿದಂತೆ ಒಟ್ಟು 15 ರನ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕೂ ಮೊದಲು, ಕೆನಡಾದ ವೇಗಿಗಳಾದ ಜಸ್ಕರನ್ ಸಿಂಗ್ ಮತ್ತು ಡಿಲ್ಲನ್ ಹೆಯ್ಲಿಗರ್ ಕೂಡ ದುಬಾರಿ ಓವರ್‌ಗಳನ್ನು ಎಸೆದಿದ್ದರು. ಏತನ್ಮಧ್ಯೆ, ಸ್ಪಿನ್ನರ್ ಸಾದ್ ಬಿನ್ ಜಾಫರ್ ಮೂರನೇ ಓವರ್‌ನಲ್ಲಿ ವಿಕೆಟ್-ಮೇಡನ್ ಓವರ್ ಎಸೆದಿದ್ದರು.
ಇದೆಲ್ಲವನ್ನು ಕೇಂದ್ರವಾಗಿಸಿಕೊಂಡು ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ “ಭ್ರಷ್ಟಾಚಾರ, ಅಪರಾಧ ಮತ್ತು ಕ್ರಿಕೆಟ್” ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಪ್ರಸಾರ ಮಾಡಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರವಾದ ಬಳಿಕ ಐಸಿಸಿ ಈ ಬಗ್ಗೆ ತನಿಖೆ ಪ್ರಾರಂಭಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ಕೆನಡಾ ಕ್ರಿಕೆಟ್ ಮಂಡಳಿಯೊಳಗಿನ ಆಂತರಿಕ ವ್ಯವಹಾರಗಳು, ಆಟಗಾರರ ಆಯ್ಕೆಯಲ್ಲಿ ಒತ್ತಡ ಮತ್ತು ಅನುಮಾನಾಸ್ಪದ ಪಂದ್ಯ-ಸಂಬಂಧಿತ ಚಟುವಟಿಕೆಗಳನ್ನು ಎತ್ತಿ ತೋರಿಸಿದೆ. ಅಲ್ಲದೆ ಟಿ20 ವಿಶ್ವಕಪ್ ವೇಳೆ ಕೆನಡಾ ತಂಡದ ತರಬೇತುದಾರರಾಗಿದ್ದ ಖುರ್ರಾಮ್ ಚೋಹನ್ ಅವರದ್ದು ಎನ್ನಲಾದ ಮೊಬೈಲ್ ರೆಕಾರ್ಡಿಂಗ್ ಅನ್ನು ಸಹ ಈ ಸಾಕ್ಷ್ಯಚಿತ್ರದಲ್ಲಿ ಭಿತ್ತರಿಸಲಾಗಿದ್ದು, ಈ ರೆಕಾರ್ಡಿಂಗ್ನಲ್ಲಿ ಅವರು, ‘ಕೆನಾಡ ತಂಡದ ಆಯ್ಕೆ ಮಂಡಳಿಯ ಸದಸ್ಯರು ತಂಡದಲ್ಲಿ ಕೆಲವು ಆಟಗಾರರನ್ನು ಸೇರಿಸಲು ಒತ್ತಡ ಹೇರಿದ್ದರು’ ಎಂದು ಹೇಳಿಕೊಂಡಿದ್ದಾರೆ.
2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ
ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಪ್ರಸ್ತುತ ಈ ಆರೋಪಗಳ ತನಿಖೆ ನಡೆಸುತ್ತಿದೆಯಾದರೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಕಳೆದ ಒಂದು ವರ್ಷದಿಂದ ಕೆನಡಾ ಕ್ರಿಕೆಟ್ ಆಡಳಿತಾತ್ಮಕ ಅಸ್ಥಿರತೆಯನ್ನು ಎದುರಿಸುತ್ತಿದೆ. ಮಾಜಿ ಸಿಇಒ ಸಲ್ಮಾನ್ ಖಾನ್ ಅವರ ನೇಮಕಾತಿ ಮತ್ತು ಅವರ ವಿರುದ್ಧದ ದುರುಪಯೋಗ ಮತ್ತು ವಂಚನೆ ಆರೋಪಗಳು, ಆಟಗಾರರ ಸಂಬಳ ಮತ್ತು ಬಹುಮಾನದ ಹಣದಲ್ಲಿನ ವಿಳಂಬ ಮತ್ತು ಮಂಡಳಿಯಲ್ಲಿನ ಬದಲಾವಣೆಗಳು ಈಗಾಗಲೇ ಸುದ್ದಿಯಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 17 April 26