ಹೀಗಾದ್ರೆ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದಲೇ ಔಟ್..!

India vs Pakistan: ಟಿ20 ವಿಶ್ವಕಪ್​ನ 27ನೇ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 175 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ ತಂಡ ಗಳಿಸಿದ್ದು ಕೇವಲ 114 ರನ್​​ ಮಾತ್ರ. ಈ ಮೂಲಕ ಟೀಮ್ ಇಂಡಿಯಾ 61 ರನ್​​ಗಳ ಅಮೋಘ ಗೆಲುವು ದಾಖಲಿಸಿದೆ.

ಹೀಗಾದ್ರೆ ಪಾಕಿಸ್ತಾನ್ ತಂಡ ವಿಶ್ವಕಪ್​ನಿಂದಲೇ ಔಟ್..!
Pakistan

Updated on: Feb 16, 2026 | 9:58 AM

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲೂ ಜಯ ಸಾಧಿಸಿ ಮುಂದಿನ ಹಂತಕ್ಕೇರಿದೆ. ಅತ್ತ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಸೋಲುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಪಾಕ್ ಪಾಲಿಗೆ ಮುಂದಿನ ಮ್ಯಾಚ್ ನಿರ್ಣಾಯಕ.

ಪ್ರಸ್ತುತ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ತಂಡವು 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇನ್ನು ದ್ವಿತೀಯ ಸ್ಥಾನದಲ್ಲಿರುವುದು ಯುಎಸ್​ಎ. 4 ಮ್ಯಾಚ್​ಗಳಲ್ಲಿ 2 ಜಯ ಸಾಧಿಸಿರುವ ಯುಎಸ್​ಎ ತಂಡ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಅತ್ತ ಪಾಕಿಸ್ತಾನ್ ತಂಡವು ಮೂರು ಪಂದ್ಯಗಳನ್ನಾಡಿದ್ದು, ಈ ವೇಳೆ ಯುಎಸ್​ಎ ಹಾಗೂ ನೆದರ್​ಲೆಂಡ್ಸ್ ವಿರುದ್ಧ ವಿಜಯ ಸಾಧಿಸಿದೆ.

ಇದೀಗ 4 ಅಂಕಗಳನ್ನು ಹೊಂದಿರುವ ಪಾಕಿಸ್ತಾನ್ ತಂಡಕ್ಕೆ ಇನ್ನೊಂದು ಮ್ಯಾಚ್ ಮಾತ್ರ ಬಾಕಿಯಿದೆ. ಅದು ಕೂಡ ನಮೀಬಿಯ ವಿರುದ್ಧ. ಈ ಪಂದ್ಯದಲ್ಲಿ ಪಾಕ್ ತಂಡ ಗೆಲ್ಲದೇ ಇದ್ದರೆ ವಿಶ್ವಕಪ್ ಟೂರ್ನಿಯಿಂದ ಹೊರಬೀಳುವುದು ಖಚಿತ.

ಏಕೆಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ 4 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿರುವ ಯುಎಸ್​ಎ ತಂಡವು +0.787 ನೆಟ್ ರನ್ ರೇಟ್ ಹೊಂದಿದೆ. ಆದರೆ ಪಾಕಿಸ್ತಾನ್ ತಂಡವು 4 ಅಂಕಗಳನ್ನು ಪಡೆದಿದ್ದರೂ -0.403 ನೆಟ್ ರನ್ ರೇಟ್ ಹೊಂದಿದೆ. ಹೀಗಾಗಿ ನಮೀಬಿಯ ವಿರುದ್ಧದ ಪಂದ್ಯವು ಪಾಕ್ ಪಾಲಿಗೆ ನಿರ್ಣಾಯಕ.

ಪಾಕಿಸ್ತಾನ್ ತಂಡದ ಸೂಪರ್-8 ಸಮೀಕರಣ:

  • ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಗೆದ್ದರೆ ಸೂಪರ್-8 ಹಂತಕ್ಕೇರಲಿದೆ. ಇಲ್ಲಿ ಯಾವುದೇ ನೆಟ್ ರನ್​ ರೇಟ್ ಲೆಕ್ಕಾಚರ ಬರುವುದಿಲ್ಲ.
  • ಪಾಕಿಸ್ತಾನ್ ಮತ್ತು ನಮೀಬಿಯ ನಡುವಣ ಪಂದ್ಯವು ಯಾವುದಾದರೂ ಕಾರಣದಿಂದ ರದ್ದಾದರೂ ಪಾಕ್ ತಂಡ ಸೂಪರ್-8 ಹಂತಕ್ಕೇರಲಿದೆ. ಏಕೆಂದರೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಈ ಮೂಲಕ 5 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದು ಪಾಕಿಸ್ತಾನ್ ಸೂಪರ್-8 ಹಂತಕ್ಕೇರಬಹುದು.
  • ಒಂದು ವೇಳೆ ಪಾಕಿಸ್ತಾನ್ ತಂಡವು ನಮೀಬಿಯ ವಿರುದ್ಧ ಸೋತರೆ, ಯುಎಸ್​ಎ ತಂಡ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆ. ಏಕೆಂದರೆ ಇಲ್ಲಿ ನೆಟ್ ರನ್​ ರೇಟ್ ಪರಿಗಣನೆಗೆ ಬರಲಿದೆ. ಅಂದರೆ ಉಭಯ ತಂಡಗಳು ತಲಾ 4 ಅಂಕಗಳನ್ನು ಪಡೆದಿರುವ ಕಾರಣ ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡ ಸೂಪರ್-8 ಹಂತಕ್ಕೇರಲಿದೆ. ಅದರಂತೆ ಪಾಕಿಸ್ತಾನಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುವ ಯುಎಸ್​ಎ ತಂಡಕ್ಕೆ ಮುಂದಿನ ಸುತ್ತಿಗೆ ಪ್ರವೇಶಿಸಲು ಅವಕಾಶ ಸಿಗಲಿದೆ.

ಇದನ್ನೂ ಓದಿ: 42 ರನ್​ಗಳು… ಪಾಕ್ ವಿರುದ್ಧ ‘ಪವರ್’​ಫುಲ್ ದಾಖಲೆ ಬರೆದ ಇಶಾನ್ ಕಿಶನ್

ಅಂದರೆ ಫೆಬ್ರವರಿ 18 ರಂದು ನಡೆಯಲಿರುವ ನಮೀಬಿಯ ವಿರುದ್ಧದ ಪಂದ್ಯವು ಪಾಕಿಸ್ತಾನ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನ್ ಸೂಪರ್-8 ಹಂತಕ್ಕೇರಲಿದೆ. ಒಂದು ವೇಳೆ ಸೋತರೆ ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ. ಹೀಗಾಗಿ ಬುಧವಾರ ನಡೆಯಲಿರುವ ಪಂದ್ಯವು ಪಾಕ್ ಪಾಲಿಗೆ ಅಗ್ನಿಪರೀಕ್ಷೆ ಎಂದರೆ ತಪ್ಪಾಗಲಾರದು.

 

Follow Us