+5.350, +3.800: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ
T20 World Cup 2026: ಟಿ20 ವಿಶ್ವಕಪ್‌ನ ಮೊದಲ 4 ಮ್ಯಾಚ್ಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಹೀನಾಯ ಸೋಲನುಭವಿಸಿದೆ. ಈ ಸೋಲಿನ ಹೊರತಾಗಿಯೂ ಭಾರತ ತಂಡವು ಝಿಂಬಾಬ್ವೆ ಹಾ್ಗೂ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ಗೇರಬಹುದು. ಆದರೆ ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ತನ್ನ ನೆಟ್ ರನ್ ರೇಟ್ ಉತ್ತಮಪಡಿಸಬೇಕಿದೆ.

ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್- 8 ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳು ಭರ್ಜರಿ ಜಯ ಸಾಧಿಸಿದೆ. ಗ್ರೂಪ್-1 ರ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಟೀಮ್ ಇಂಡಿಯಾವನ್ನು 76 ರನ್ಗಳಿಂದ ಸೋಲಿಸಿದರೆ, ದ್ವಿತೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ವೆಸ್ಟ್ ಇಂಡೀಸ್ ತಂಡ 107 ರನ್‌ಗಳ ಅಮೋಘ ಗೆಲುವು ದಾಖಲಿಸಿದೆ. ಈ ಎರಡು ತಂಡಗಳ ಭರ್ಜರಿ ಪ್ರದರ್ಶನದಿಂದಾಗಿ ಭಾರತ ತಂಡದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಏಕೆಂದರೆ ಈ ಎರಡು ತಂಡಗಳು ಮುಂದಿನ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದರೆ ಸೆಮಿಫೈನಲ್ಗೇರುವುದು ಬಹುತೇಕ ಖಚಿತವಾಗಲಿದೆ. ಇದಕ್ಕೆ ಮುಖ್ಯ ಕಾರಣ ಉಭಯ ತಂಡಗಳ ನೆಟ್ ರನ್ ರೇಟ್. ಇಲ್ಲಿ ಸೌತ್ ಆಫ್ರಿಕಾ ತಂಡವು +3.800 ನೆಟ್ ರನ್ ರೇಟ್ ಹೊಂದಿದ್ದರೆ, ವೆಸ್ಟ್ ಇಂಡೀಸ್ ತಂಡವು +5.350 ನೆಟ್ ರನ್ ರೇಟ್ ಹೊಂದಿದೆ.
ಈ ಎರಡು ತಂಡಗಳ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು ಟೀಮ್ ಇಂಡಿಯಾ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಸಾಕಾಗದು. ಬದಲಾಗಿ ಅಮೋಘ ಗೆಲುವು ಅನಿವಾರ್ಯ. ಅಂದರೆ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕನಿಷ್ಠ 70 ರಿಂದ 80 ರನ್‌ಗಳ ಅಂತರದಿಂದ ಗೆದ್ದರೆ ಮಾತ್ರ ನೆಟ್ ರನ್ ರೇಟ್ ಪಾಸಿಟಿವ್ ಆಗಲಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಜಯಗಳಿಸುವ ಮೂಲಕ ಮಾತ್ರ ಸೌತ್ ಆಫ್ರಿಕಾ ಹಾಗೂ ವಿಂಡೀಸ್ ಅನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಬಹುದು. ಹೀಗಾಗಿಯೇ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ತಂಡಗಳ ಅತ್ಯುತ್ತಮ ಪ್ರದರ್ಶನ ಟೀಮ್ ಇಂಡಿಯಾದ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸಾಧ್ಯತೆಯಿದೆ.
ಟೀಮ್ ಇಂಡಿಯಾದ ‘ಸೆಮಿಫೈನಲ್‘ ಲೆಕ್ಕಾಚಾರ:
- ಮೂರು ತಂಡಗಳ ಸಮಬಲದ ಭೀತಿ: ಒಂದು ವೇಳೆ ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆದ್ದರೂ, ವೆಸ್ಟ್ ಇಂಡೀಸ್ ತಂಡ ಸೌತ್ ಆಫ್ರಿಕಾವನ್ನು ಸೋಲಿಸಿದರೆ, ಮೂರು ತಂಡಗಳು ತಲಾ 4 ಅಂಕಗಳನ್ನು ಪಡೆಯುತ್ತವೆ. ಆಗ ರನ್ ರೇಟ್ ಆಧಾರದ ಮೇಲೆ ಭಾರತ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ (ಏಕೆಂದರೆ ಭಾರತದ NRR ಪ್ರಸ್ತುತ ತುಂಬಾ ಮೈನಸ್‌ನಲ್ಲಿದೆ).
- ದೊಡ್ಡ ಅಂತರದ ಗೆಲುವಿನ ಅನಿವಾರ್ಯತೆ: ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ (ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಕೇವಲ ಗೆದ್ದರೆ ಸಾಲದು, ರನ್ ರೇಟ್ ಸುಧಾರಿಸಿಕೊಳ್ಳಲು ಸುಮಾರು 70-100 ರನ್‌ಗಳ ಬೃಹತ್ ಅಂತರದಿಂದ ಗೆಲ್ಲಬೇಕಿದೆ.
- ಸೌತ್ ಆಫ್ರಿಕಾದ ಸಹಾಯ: ಭಾರತ ತಂಡದ ಸೆಮಿಫೈನಲ್ ಹಾದಿ ಸುಗಮವಾಗಬೇಕಿದ್ದರೆ, ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು. ಆಗ ಭಾರತ ತನ್ನ ಮುಂದಿನ ಎರಡೂ ಪಂದ್ಯ ಗೆದ್ದರೆ ಸುಲಭವಾಗಿ 2ನೇ ಸ್ಥಾನದೊಂದಿಗೆ ಸೆಮಿಫೈನಲ್‌ಗೆ ಹೋಗಬಹುದು.
ಅಂದರೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡೂ ಮ್ಯಾಚ್ಗಳಲ್ಲೂ ಗೆಲ್ಲಬೇಕು. ಒಂದು ವೆಸ್ಟ್ ಇಂಡೀಸ್ ವಿರುದ್ಧ ಸೋತು, ಝಿಂಬಾಬ್ವೆ ವಿರುದ್ಧ ಗೆದ್ದರೆ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಂದರೆ ಟೀಮ್ ಇಂಡಿಯಾ ತನ್ನ ಎರಡೂ ಪಂದ್ಯಗಳನ್ನು ನೆಟ್ ರನ್ ರೇಟ್ ಆಧಾರದ ಮೇಲೆ ಗೆಲ್ಲಬೇಕು. ಇಲ್ಲದಿದ್ದರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಬರೋಬ್ಬರಿ 17 ಸಿಕ್ಸ್… ಶಿಮ್ರಾನ್ ಸಿಡಿಲಬ್ಬರ
ಭಾರತದ ಮುಂದಿನ ಪಂದ್ಯಗಳು:
- ಭಾರತ vs ಝಿಂಬಾಬ್ವೆ: ಫೆಬ್ರವರಿ 26, 2026 (ಚೆನ್ನೈ).
- ಭಾರತ vs ವೆಸ್ಟ್ ಇಂಡೀಸ್: ಮಾರ್ಚ್ 1, 2026 (ಕೋಲ್ಕತ್ತಾ).
