ENG vs WI: ನೇಪಾಳ ವಿರುದ್ಧ ತಿಣುಕಾಡಿ ಗೆದ್ದಿದ್ದ ಇಂಗ್ಲೆಂಡ್‌ಗೆ ವಿಂಡೀಸ್ ವಿರುದ್ಧ ಸೋಲು
T20 World Cup 2026: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ 2026ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಶೆರ್ಫೇನ್ ರುದರ್ಫೋರ್ಡ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ 197 ರನ್ ಗುರಿ ನೀಡಿದ ವಿಂಡೀಸ್, ತನ್ನ ಸ್ಪಿನ್ನರ್‌ಗಳ ಬಲದಿಂದ ಇಂಗ್ಲೆಂಡ್ ಅನ್ನು 166 ರನ್‌ಗಳಿಗೆ ಆಲೌಟ್ ಮಾಡಿತು. 10 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ವಿಂಡೀಸ್ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 2026 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ತನ್ನ ಅಜೇಯ ಓಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ 15 ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ (England vs West Indies) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಶೆರ್ಫೇನ್ ರುದರ್ಫೋರ್ಡ್ ಅವರ ಸ್ಫೋಟಕ ಇನ್ನಿಂಗ್ಸ್ ಬಲದಿಂದ ಇಂಗ್ಲೆಂಡ್‌ಗೆ 197 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ವಿಂಡೀಸ್ ಸ್ಪಿನ್ನರ್‌ಗಳ ಬಲೆಗೆ ಸಿಲುಕಿ ಪೂರ್ಣ 20 ಓವರ್ಗಳನ್ನು ಆಡಲಾಗದೆ ಆಲೌಟ್ ಆಯಿತು. ಅಂತಿಮವಾಗಿ ಇಂಗ್ಲೆಂಡ್‌ನ ಇನ್ನಿಂಗ್ಸ್ 19 ಓವರ್‌ಗಳಲ್ಲಿ 166 ರನ್‌ಗಳಿಗೆ ಕೊನೆಗೊಂಡಿತು. ಇದರೊಂದಿಗೆ ವೆಸ್ಟ್ ಇಂಡೀಸ್ 10 ವರ್ಷಗಳ ನಂತರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಸಾಧನೆ ಮಾಡಿತು.
ವಿಂಡೀಸ್ಗೆ ಕಳಪೆ ಆರಂಭ
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 196 ರನ್ ಗಳಿಸಿತು. ಆದಾಗ್ಯೂ ತಂಡದ ಆರಂಭ ಕಳಪೆಯಾಗಿತ್ತು, ಕೇವಲ 1.1 ಓವರ್‌ಗಳಲ್ಲಿ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ, ಶಿಮ್ರಾನ್ ಹೆಟ್ಮೆಯರ್ ಮತ್ತು ರೋಸ್ಟನ್ ಚೇಸ್ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಆ ಬಳಿಕ ಬಂದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಶೆರ್ಫೇನ್ ರುದರ್ಫೋರ್ಡ್ ಸಿಕ್ಸರ್ಗಳ ಮಳೆಗರೆದರು.
ರುದರ್ಫೋರ್ಡ್ ರೌದ್ರಾವತಾರ
ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಫಾರ್ಮ್‌ನಲ್ಲಿರುವ ರುದರ್ಫೋರ್ಡ್ ಕೇವಲ 42 ಎಸೆತಗಳಲ್ಲಿ ಏಳು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 76 ರನ್ ಸಿಡಿಸಿದರು. ಅವರಿಗೆ ಸಾಥ್ ನೀಡಿದ ಜೇಸನ್ ಹೋಲ್ಡರ್ ಅಂತಿಮ ಓವರ್‌ಗಳಲ್ಲಿ ಕೇವಲ 17 ಎಸೆತಗಳಲ್ಲಿ 33 ರನ್ ಗಳಿಸಿ ತಂಡವನ್ನು 196 ರನ್‌ಗಳಿಗೆ ಕೊಂಡೊಯ್ದರು. ಇಂಗ್ಲೆಂಡ್ ಪರ ಅನುಭವಿ ಸ್ಪಿನ್ನರ್ ಆದಿಲ್ ರಶೀದ್ ಕೇವಲ 16 ರನ್‌ಗಳಿಗೆ ಎರಡು ವಿಕೆಟ್ ಪಡೆದರು.
ಇಂಗ್ಲೆಂಡ್‌ಗೆ ಭರ್ಜರಿ ಆರಂಭ
ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕ ಫಿಲ್ ಸಾಲ್ಟ್ ಕೇವಲ 14 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು. ನಂತರ, ಜೋಸ್ ಬಟ್ಲರ್ ಮತ್ತು ಜಾಕೋಬ್ ಬೆಥೆಲ್ ತ್ವರಿತ ಬ್ಯಾಟಿಂಗ್ ಮೂಲಕ ತಂಡವನ್ನು ಪವರ್‌ಪ್ಲೇನಲ್ಲಿ 70 ರನ್ ದಾಟಿಸಿದರು. ಆದರೆ ಅಲ್ಲಿಂದ, ವೆಸ್ಟ್ ಇಂಡೀಸ್ ಸ್ಪಿನ್ ತ್ರಿಮೂರ್ತಿಗಳು ತಮ್ಮ ಸ್ಪಿನ್ ಮ್ಯಾಜಿಕ್ ಮೂಲಕ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ಒಬ್ಬೊಬ್ಬರನ್ನಾಗಿ ಬಲೆಗೆ ಬೀಳಿಸಿದರು.
IND vs NAM Live Streaming: ಭಾರತಕ್ಕೆ ನಮೀಬಿಯಾ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ?
ಸ್ಪಿನ್ ತ್ರಿಮೂರ್ತಿಗಳ ಮಾರಕ ದಾಳಿ
ರೋಸ್ಟನ್ ಚೇಸ್ (2/29), ಅಕೇಲ್ ಹೊಸೇನ್ (1/32), ಮತ್ತು ಗುಡ್ಕೇಶ್ ಮೋತಿ (3/33) ಒಟ್ಟು 12 ಓವರ್‌ಗಳು ಅಂದರೆ 72 ಎಸೆತಗಳನ್ನು ಎಸೆದ ಈ ಜೋಡಿ 94 ರನ್ ನೀಡಿ ಪ್ರಮುಖ ಆರು ವಿಕೆಟ್‌ಗಳನ್ನು ಕಬಳಿಸಿತು. ವಿಕೆಟ್‌ಗಳಲ್ಲಿ ಸಿಂಹಪಾಲು ಪಡೆದ ಗುಡ್ಕೇಶ್, ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್ ಮತ್ತು ನಾಯಕ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡಿದರೆ, ಚೇಸ್ ಅನುಭವಿ ಓಪನರ್ ಬಟ್ಲರ್ ಮತ್ತು ಸ್ಫೋಟಕ ಫಿನಿಷರ್ ವಿಲ್ ಜ್ಯಾಕ್ಸ್ ಅವರನ್ನು ಔಟ್ ಮಾಡಿದರು. ತಂಡದ ಪರ ಕೊನೆಯಲ್ಲಿ ಏಕಾಂಗಿ ಹೋರಾಟ ನೀಡಿದ ಸ್ಯಾಮ್ ಕರನ್ ಅಜೇಯ 43 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Wed, 11 February 26
