ಈ ಒಂದು ತಪ್ಪು ಸರಿಪಡಿಸದಿದ್ದರೆ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ!

T20 World Cup 2026: ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಒಟ್ಟು ಮೂರು ಪಂದ್ಯಗಳನ್ನಾಡಲಿದೆ. ಈ ಸುತ್ತಿನಲ್ಲಿ ಭಾರತ ತಂಡದ ಎದುರಾಳಿಗಳಾಗಿ ಕಣಕ್ಕಿಳಿಯಲಿರುವುದು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ. ಈ ಮೂರು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಎಂಟ್ರಿ ಕೊಡಬಹುದು.

ಈ ಒಂದು ತಪ್ಪು ಸರಿಪಡಿಸದಿದ್ದರೆ ಟೀಮ್ ಇಂಡಿಯಾಗೆ ಅಪಾಯ ಕಟ್ಟಿಟ್ಟ ಬುತ್ತಿ!
Team India

Updated on: Feb 19, 2026 | 2:09 PM

T20 World Cup 2026: ಕ್ಯಾಚಸ್ ವಿನ್ ಮ್ಯಾಚಸ್ ಎಂಬುದು ಕ್ರಿಕೆಟ್‌ನ ಅತ್ಯಂತ ಜನಪ್ರಿಯ ನಾಣ್ಣುಡಿ. ಫೀಲ್ಡಿಂಗ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ. ಈ ಹೇಳಿಕೆ ಟೀಮ್ ಇಂಡಿಯಾಗೆ ಅನ್ವಯಿಸಲಿದೆಯಾ ಎಂದು ಕೇಳಿದ್ರೆ ಸದ್ಯದ ಮಟ್ಟಿಗೆ ಇಲ್ಲ ಎನ್ನಬಹುದು. ಏಕೆಂದರೆ ಕಳೆದ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಕೈ ಬಿಟ್ಟಿರುವುದು ಬರೋಬ್ಬರಿ 9 ಕ್ಯಾಚ್​ಗಳನ್ನು. ಇದಾಗ್ಯೂ ಭಾರತ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಆದರೆ ಮುಂದಿನ ಸುತ್ತಿನಲ್ಲೂ ಇದೇ ತಪ್ಪು ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಯಾವುದೇ ಬಲಿಷ್ಠ ತಂಡವನ್ನು ಎದುರಿಸಿರಲಿಲ್ಲ. ಆದರೆ ದ್ವಿತೀಯ ಸುತ್ತಿನಲ್ಲಿ ಭಾರತದ ಎದುರಾಳಿಗಳು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.

ಅದರಲ್ಲೂ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಆಟಗಾರರಿಗೆ ಜೀವದಾನ ನೀಡಿದ್ರೆ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲರು. ಹೀಗಾಗಿ ಸೂಪರ್-8 ಸುತ್ತಿನ ಪಂದ್ಯಕ್ಕೂ ಟೀಮ್ ಇಂಡಿಯಾ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿರುವುದು ಅನಿವಾರ್ಯ.

ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಟೀಮ್ ಇಂಡಿಯಾಗೆ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಕಳೆದ ಪಂದ್ಯವೊಂದರಲ್ಲೇ ಟೀಮ್ ಇಂಡಿಯಾ ಆಟಗಾರರು ಕೈ ಬಿಟ್ಟಿರುವುದು ಬರೋಬ್ಬರಿ 4 ಕ್ಯಾಚ್​ಗಳನ್ನು ಎಂಬುದು ಇಲ್ಲಿ ಉಲ್ಲೇಖಾರ್ಹ. ಅದು ಸಹ ನೆದರ್​ಲೆಂಡ್ಸ್​ ವಿರುದ್ಧ.

ಅಂದರೆ ಯಾವುದೇ ಒತ್ತಡ ಇಲ್ಲದಿದ್ದರೂ ಟೀಮ್ ಇಂಡಿಯಾ ಆಟಗಾರರು ಕಳಪೆ ಫೀಲ್ಡಿಂಗ್​ ಪ್ರದರ್ಶಿಸುತ್ತಿದ್ದಾರೆ. ಭಾರತೀಯ ಫೀಲ್ಡರ್​ಗಳ ವೀಕ್​ನೆಸ್​ನೊಂದಿಗೆ ಎದುರಾಳಿ ಬ್ಯಾಟರ್​ಗಳು ರನ್​ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಫೀಲ್ಡಿಂಗ್​ನತ್ತ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯ. ಅದರಲ್ಲೂ ಕ್ಯಾಚಿಂಗ್ ಅಭ್ಯಾಸದಲ್ಲಿ ಹೆಚ್ಚಿನ ಹೊತ್ತು ತೊಡಗಿಸಿಕೊಳ್ಳಬೇಕಿದೆ.

ಪಂದ್ಯವಾರು ಕೈಬಿಟ್ಟ ಕ್ಯಾಚ್‌ಗಳ ವಿವರ:

  • ಪಾಕಿಸ್ತಾನ್ ವಿರುದ್ಧ: ಕುಲದೀಪ್ ಯಾದವ್ 18ನೇ ಓವರ್‌ನಲ್ಲಿ ಸುಲಭ ಕ್ಯಾಚ್ ಬಿಟ್ಟರು. ಇದರಿಂದ ಹಾರ್ದಿಕ್ ಪಾಂಡ್ಯ ಅಸಮಾಧಾನಗೊಂಡಿದ್ದರು. ಅದೇ ಓವರ್‌ನಲ್ಲಿ ತಿಲಕ್ ವರ್ಮಾ ಕೂಡ ಕ್ಯಾಚ್ ಕೈಚೆಲ್ಲಿದ್ದರು.
  • ನೆದರ್​ಲೆಂಡ್ಸ್ ವಿರುದ್ಧ: ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ನೆದರ್​ಲೆಂಡ್ಸ್ ವಿರುದ್ಧ ಕ್ಯಾಚ್ ಹಿಡಿಯುವ ಭರದಲ್ಲಿ ಡಿಕ್ಕಿಯಾಗಿದ್ದರು. ಇದಾಗ್ಯೂ ಇಬ್ಬರು ಚೆಂಡು ಹಿಡಿದಿರಲಿಲ್ಲ. ಇನ್ನು ಇದೇ ಪಂದ್ಯದಲ್ಲಿ ತಿಲಕ್ ವರ್ಮಾ ಕೂಡ ಡೀಪ್ ಕವರ್‌ನಲ್ಲಿ ಮತ್ತೊಂದು ಕ್ಯಾಚ್ ಬಿಟ್ಟಿದ್ದರು. ಹಾಗೆಯೇ ಬುಮ್ರಾ ಬೌಲಿಂಗ್‌ನಲ್ಲಿ ಅಭಿಷೇಕ್ ಶರ್ಮಾ  ಕ್ಯಾಚ್  ಕೈಚೆಲ್ಲಿದ್ದರು. ಇದರ ಜೊತೆಗೆ ವಾಷಿಂಗ್ಟನ್ ಸುಂದರ್ ಕೂಡ ಒಂದು ಕ್ಯಾಚ್ ಹಿಡಿಯುವಲ್ಲಿ ವಿಫಲರಾಗಿದ್ದರು.
  • ಯುಎಸ್​ಎ ವಿರುದ್ಧ: ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಕ್ಯಾಚ್​ಗಳನ್ನು ಕೈಚೆಲ್ಲಿದ್ದರು.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಹೀಗೆ ಟೀಮ್ ಇಂಡಿಯಾ ಆಟಗಾರರು ಕಳೆದ ನಾಲ್ಕು ಪಂದ್ಯಗಳಲ್ಲಿ ಒಟ್ಟು 9 ಕ್ಯಾಚ್​ಗಳನ್ನು ಕೈಚೆಲ್ಲಿದ್ದಾರೆ. ವಿಶೇಷ ಎಂದರೆ ಐರ್ಲೆಂಡ್ (10) ತಂಡವನ್ನು ಹೊರತುಪಡಿಸಿದರೆ ಈ ಬಾರಿ ಅತೀ ಹೆಚ್ಚು ಕ್ಯಾಚ್ ಕೈಚೆಲ್ಲಿರುವುದು ಟೀಮ್ ಇಂಡಿಯಾ. ಹೀಗಾಗಿಯೇ ಸೂಪರ್-8 ಪಂದ್ಯಗಳಿಗೂ ಮುನ್ನ ಭಾರತೀಯ ಆಟಗಾರರು ಈ ತಪ್ಪನ್ನು ಸರಿಪಡಿಸಿಕೊಳ್ಳಲೇಬೇಕು. ಏಕೆಂದರೆ ಕ್ಯಾಚಸ್ ವಿನ್ ಮ್ಯಾಚಸ್.