ಭಾರತ ತಂಡದಲ್ಲಿ ಎಲ್ಲವೂ ಸರಿಯಿಲ್ಲವೇ? ಈ ಪ್ರಶ್ನೆ ಮತ್ತೆ ಮುನ್ನಲೆಗೆ ಬಂದಿದೆ. ಅದು ಕೂಡ ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿನ ಕಳಪೆ ಪ್ರದರ್ಶನದ ಬಗ್ಗೆ ಚರ್ಚಿಸಲು ಜನವರಿ 11 ರಂದು ಬಿಸಿಸಿಐ ಪರಿಶೀಲನಾ ಸಭೆ ನಡೆಸಿತ್ತು. ಈ ಸಭೆಯಲ್ಲಿ ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಮತ್ತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಭಾಗವಹಿಸಿದ್ದರು.
ಈ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಇದೇ ವೇಳೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹಿರಿಯ ಆಟಗಾರರ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಯಾಗಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆಯೇ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯಾಗಿತ್ತು. ಅದರಲ್ಲೂ ಡ್ರೆಸ್ಸಿಂಗ್ ರೂಮ್ ವಿಚಾರಗಳು ಹೊರಬರುತ್ತಿದ್ದಂತೆ, ಭಾರತ ತಂಡದಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಬಹಿರಂಗವಾಗಿತ್ತು.
ಇದೀಗ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾದ ಹಿರಿಯ ಆಟಗಾರರು ಅಭ್ಯಾಸ ವಿಷಯದಲ್ಲಿ ಮತ್ತು ಹೋಟೆಲ್‌ಗೆ ಸಂಬಂಧಿಸಿದಂತೆ ಕೆಲವು ವಿಶೇಷ ಬೇಡಿಕೆಗಳನ್ನು ಮುಂದಿಟ್ಟಿದ್ದರು ಎಂಬ ವಿಚಾರ ಬಹಿರಂಗವಾಗಿದೆ.
ಹೀಗಾಗಿ ಟೀಮ್ ಇಂಡಿಯಾದಲ್ಲಿನ ಸೂಪರ್‌ಸ್ಟಾರ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕೆಂದು ಗೌತಮ್ ಗಂಭೀರ್ ಆಗ್ರಹಿಸಿದ್ದಾರೆ. ಇದರಿಂದ ಇತರೆ ಆಟಗಾರರಿಗೂ ಸಮಸ್ಯೆಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಟೀಮ್ ಇಂಡಿಯಾ ಕೋಚ್ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಒಂದೆಡೆ ಗೌತಮ್ ಗಂಭೀರ್, ಟೀಮ್ ಇಂಡಿಯಾದಲ್ಲಿನ ವಿಚಾರ ಮುಂದಿಟ್ಟರೆ, ಮತ್ತೊಂದೆಡೆ ಆಯ್ಕೆಗಾರರು ಕೂಡ ಗಂಭೀರ್ಗೆ ಕ್ಲಾಸ್ ತೆಗೆದಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಗಂಭೀರ್ ಬಯಸಿದ ತಂಡವನ್ನು ನೀಡಲಾಗಿದೆ.
ಇದಾಗ್ಯೂ ಟೀಮ್ ಇಂಡಿಯಾ ಈ ಎರಡು ಸರಣಿಗಳಲ್ಲೂ ವಿಫಲವಾಗಿದೆ. ಹೀಗಾಗಿ ಆಯ್ಕೆಗೆ ಸಂಬಂಧಿತ ವಿಷಯಗಳಿಂದ ದೂರ ಉಳಿಯಬೇಕೆಂದು ಗೌತಮ್ ಗಂಭೀರ್ಗೆ ಆಯ್ಕೆ ಸಮಿತಿ ಸೂಚಿಸಿದೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಗೌತಮ್ ಗಂಭೀರ್ ತಮ್ಮ ಮ್ಯಾನೇಜರ್ ಗೌರವ್ ಅರೋರಾ ಅವರನ್ನು ಟೀಮ್ ಇಂಡಿಯಾ ಜತೆ ಕರೆದುಕೊಂಡು ಹೋಗುತ್ತಿರುವುದಕ್ಕೆ ಆಯ್ಕೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಅಡಿಲೇಡ್ ಟೆಸ್ಟ್ ಪಂದ್ಯದ ವೇಳೆ ಅರೋರಾ ಅವರು ಬಿಸಿಸಿಐನ ವಿಐಪಿ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನೇ ಪ್ರಸ್ತಾಪಿಸಿ ಆಯ್ಕೆ ಸಮಿತಿ ಅಧಿಕಾರಿಗಳು ಗೌತಮ್ ಗಂಭೀರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: 7 ವರ್ಷಗಳ ಬಳಿಕ ರಣಜಿ ಪಂದ್ಯವಾಡಲು ಸಜ್ಜಾದ ಟೀಮ್ ಇಂಡಿಯಾ ಆಟಗಾರ
ಒಟ್ಟಿನಲ್ಲಿ ಎರಡು ಹೀನಾಯ ಸೋಲುಗಳ ಬೆನ್ನಲ್ಲೇ ಬಿಸಿಸಿಐ ಎಚ್ಚೆತ್ತುಕೊಂಡಿದ್ದು, ಈ ಮೂಲಕ ಆಟಗಾರರಿಗೆ ಹಾಗೂ ಕೋಚ್ಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.