ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಖಾತೆ ತೆರೆದಿದೆ. ಅದು ಕೂಡ ಟೀಮ್ ಇಂಡಿಯಾದ ವನಿತೆಯರ ಭರ್ಜರಿ ಗೆಲುವಿನೊಂದಿಗೆ! ಏಷ್ಯನ್ ಗೇಮ್ಸ್ ಮಹಿಳಾ ಟಿ20 ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 147 ರನ್‌ಗಳ ಅಮೋಘ ಜಯ ಸಾಧಿಸಿ ಚಿನ್ನದ ಪದಕವನ್ನು ಗೆದ್ದಿದೆ.

ಏಷ್ಯನ್ ಗೇಮ್ಸ್​: ಚಿನ್ನದ ಪದಕ ಗೆದ್ದ ಟೀಮ್ ಇಂಡಿಯಾ
Team India
Image Credit source: BCCI

Updated on: Sep 22, 2026 | 2:10 PM

ಜಪಾನ್‌ನ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಷ್ಯನ್ ಗೇಮ್ಸ್ 2026ರ ಮಹಿಳಾ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಅಮೋಘ ಜಯ ಸಾಧಿಸಿದೆ. ಈ ಜಯದೊಂದಿಗೆ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಸ್ಫೋಟಕ ಆರಂಭ ಒದಗಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 11.2 ಓವರ್‌ಗಳಲ್ಲಿ 99 ರನ್‌ಗಳ ಭರ್ಜರಿ ಜೊತೆಯಾಟ ಪ್ರದರ್ಶಿಸಿತು. ಶಫಾಲಿ ವರ್ಮಾ 29 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಒಳಗೊಂಡ 48 ರನ್ ಗಳಿಸಿ ಕೇವಲ 2 ರನ್‌ಗಳಿಂದ ಅರ್ಧಶತಕ ವಂಚಿತರಾಗಿ ಔಟಾದರು.

ಸ್ಮೃತಿ ಸಿಡಿಲಬ್ಬರ:

ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಉಪನಾಯಕಿ ಸ್ಮೃತಿ ಮಂಧಾನ, ಕೇವಲ 45 ಎಸೆತಗಳಲ್ಲಿ 7 ಬೃಹತ್ ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ 79 ರನ್ ಚಚ್ಚಿ ಔಟಾದರು. ಮಂಧಾನ ಔಟಾದ ಬಳಿಕ ಕ್ರೀಸ್‌ಗೆ ಬಂದ ವಿಕೆಟ್‌ಕೀಪರ್ ಬ್ಯಾಟರ್ ರಿಚಾ ಘೋಷ್ ಮೈದಾನದಲ್ಲಿ ಅಕ್ಷರಶಃ ರುದ್ರತಾಂಡವವಾಡಿದರು.

ಕೇವಲ 22 ಎಸೆತಗಳನ್ನು ಎದುರಿಸಿದ ರಿಚಾ, 6 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 49 ರನ್* ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 19 ರನ್‌ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 216 ರನ್​ ಕಲೆಹಾಕಿತು.

217 ರನ್​ಗಳ ಗುರಿ:

ಚಿನ್ನದ ಪದಕಕ್ಕಾಗಿ 20 ಓವರ್​ಗಳಲ್ಲಿ 217 ರನ್​ಗಳ ಗುರಿ ಪಡೆದ ಶ್ರೀಲಂಕಾ ತಂಡವು 15.4 ಓವರ್​ಗಳಲ್ಲಿ ಕೇವಲ 69 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 147 ರನ್​ಗಳ ಅಮೋಘ ಗೆಲುವು ದಾಖಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅತ್ತ ಸೋತಿರುವ ಶ್ರೀಲಂಕಾ ತಂಡವು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಹಾಗೆಯೇ ಬಾಂಗ್ಲಾದೇಶ್ ವಿರುದ್ಧ ಗೆದ್ದಿರುವ ಪಾಕಿಸ್ತಾನ್ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಗುಣಲನ್ ಕಮಲಿನಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಶ್ರೀ ಚರಣಿ, ನಂದನಿ ಶರ್ಮಾ, ಕ್ರಾಂತಿ ಗೌಡ್.

ಇದನ್ನೂ ಓದಿ: 0.2 ಸೆಕೆಂಡ್ಸ್ ಅಂತರದಲ್ಲಿ ಫೈನಲ್ ಮಿಸ್ ಮಾಡಿಕೊಂಡ ನಟ ಮಾಧವನ್ ಪುತ್ರ!

ಶ್ರೀಲಂಕಾ ಪ್ಲೇಯಿಂಗ್ XI: ಇಮೇಶಾ ದುಲಾನಿ, ಚಾಮರಿ ಅಥಾಪತ್ತು (ನಾಯಕಿ), ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಕವಿಶಾ ದಿಲ್ಹಾರಿ, ಹನ್ಸಿಮಾ ಕರುಣಾರತ್ನೆ, ಕೌಶಾನಿ ನುತ್ಯಂಗನಾ(ಪ), ಮಿಥಾಲಿ ಅಯೋಧ್ಯಾ, ಕಾವ್ಯಾ ಕವಿಂದಿ, ಚಾಮುಡಿ ಪ್ರಬೋದಾ, ಸುಗಂದಿಕಾ ಕುಮಾರಿ.

 

Loading...
Unable to load recommendations.
Follow Us