
ಲೀಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಎರಡನೇ ಇನ್ನಿಂಗ್ಸ್‌ನಲ್ಲಿ 364 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ ಗೆಲುವಿಗೆ 371 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ. ತಂಡದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಕೆಎಲ್ ರಾಹುಲ್ (KL Rahul) ಮತ್ತು ಉಪನಾಯಕ ರಿಷಭ್ ಪಂತ್ (Rishabh Pant) ಶತಕ ಬಾರಿಸುವ ಮೂಲಕ ತಂಡವನ್ನು 370 ರನ್‌ಗಳಿಗೆ ಕೊಂಡೊಯ್ದರು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಮತ್ತು ರಾಹುಲ್ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆದಾಗ್ಯೂ, ಪಂತ್ ಮತ್ತು ರಾಹುಲ್ ವಿಕೆಟ್ ಒಪ್ಪಿಸಿದ ನಂತರ ಭಾರತದ ಇನ್ನಿಂಗ್ಸ್ ಕುಂಟುತ್ತಾ ಸಾಗಿದಲ್ಲದೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
90 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ತಂಡವು ನಾಯಕ ಶುಭಮನ್ ಗಿಲ್ ಬೇಗನೆ ವಿಕೆಟ್ ಒಪ್ಪಿಸಿದರು. ಇದರ ನಂತರ, ಪಂತ್ ಮತ್ತು ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್ಗಾಗಿ ಕಾಯುವಂತೆ ಮಾಡಿದರು. ಚಹಾ ವಿರಾಮಕ್ಕೂ ಮೊದಲು 118 ರನ್ ಬಾರಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಇದರ ನಂತರ, ರಾಹುಲ್ ಇನ್ನಿಂಗ್ಸ್ ನಿಭಾಯಿಸಿದರಾದರೂ ಅವರು ಕೂಡ 137 ರನ್ ಬಾರಿಸಿ ಔಟಾದರು. ರಾಹುಲ್ ಪೆವಿಲಿಯನ್‌ಗೆ ಹಿಂತಿರುಗಿದ ತಕ್ಷಣ, ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡಲು ಪ್ರಾರಂಭಿಸಿದರು.
ಮೇಲೆ ಹೇಳಿದಂತೆ ದಿನದ ಮೊದಲ ಎರಡು ಸೆಷನ್ಗಳಲ್ಲಿ ರಾಹುಲ್ ಮತ್ತು ಪಂತ್ ಜೋಡಿ ಇಂಗ್ಲೆಂಡ್ ಬೌಲರ್‌ಗಳ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಆದರೆ ಚಹಾ ವಿರಾಮದ ನಂತರ, ರಾಹುಲ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಿತು. 84 ನೇ ಓವರ್‌ನಲ್ಲಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಟೀಂ ಇಂಡಿಯಾದ ಸ್ಕೋರ್ 333 ರನ್‌ಗಳಾಗಿತ್ತು. ಇದರ ನಂತರ, ತಂಡದ ಸ್ಕೋರ್‌ಗೆ ಕೇವಲ 2 ರನ್‌ಗಳನ್ನು ಸೇರಿಸುವುದರೊಳಗೆ ಕರುಣ್ ನಾಯರ್ ಕೂಡ ಔಟಾದರು. ನಂತರ ಶಾರ್ದೂಲ್ ಠಾಕೂರ್ ಕೂಡ 349 ರನ್‌ಗಳಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅದೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 364 ರನ್‌ಗಳಿಗೆ ಆಲೌಟ್ ಆಯಿತು. ಅಂದರೆ, ಭಾರತ ಕೇವಲ 31 ರನ್‌ಗಳಿಗೆ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ
ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಇದೇ ರೀತಿಯ ಪ್ರದರ್ಶನ ಕಂಡುಬಂದಿತು. ಒಂದು ಹಂತದಲ್ಲಿ ಭಾರತ 3 ವಿಕೆಟ್‌ಗಳ ನಷ್ಟಕ್ಕೆ 430 ರನ್ ಗಳಿಸಿತ್ತು. ಆದರೆ ಸ್ಕೋರ್ 471 ತಲುಪುವ ಹೊತ್ತಿಗೆ ಇಡೀ ತಂಡ ಆಲೌಟ್ ಆಗಿತ್ತು. ಅಂದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 41 ರನ್‌ಗಳ ಒಳಗೆ ತನ್ನ 7 ವಿಕೆಟ್‌ಗಳನ್ನು ಕಳೆದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Mon, 23 June 25