Team India: 13 ದಿನಗಳಲ್ಲಿ 6 ಪಂದ್ಯ: ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್
T20 World Cup 2022: ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಶುರುವಾಗಲಿದೆ. ಇತ್ತ ಟೀಮ್ ಇಂಡಿಯಾ ಸರಣಿ ಮುಗಿಯುವುದು ಅಕ್ಟೋಬರ್ 11 ರಂದು.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup 2022) ಟೀಮ್ ಇಂಡಿಯಾ (Team India) ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ವಿಶ್ವಕಪ್ ಅನ್ನೇ ಮುಂದಿಟ್ಟುಕೊಂಡು ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಅದರಲ್ಲೂ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರಿಗೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ನಾಯಕ ವಿರಾಟ್ ಕೊಹ್ಲಿ ಸ್ಥಾನದಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗೆ ಕಳೆದ ಒಂದು ವರ್ಷದಿಂದ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿಯನ್ನು ಆರಂಭಿಸಿತ್ತು. ಈ ಮೂಲಕ 2013 ರ ಬಳಿಕ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿದೆ.
ಇದಕ್ಕಾಗಿ ಇದೀಗ ಬಿಸಿಸಿಐ ಮತ್ತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿರುವುದು ವಿಶೇಷ. ಅಂದರೆ ಟಿ20 ವಿಶ್ವಕಪ್ಗೂ ಮುನ್ನ ಭಾರತ ಎರಡು ಪ್ರಮುಖ ಸರಣಿಗಳನ್ನು ಆಡಲಿದೆ. ಈ ಎರಡೂ ಸರಣಿಗಳು ವಿಶ್ವದ ಅತ್ಯುತ್ತಮ ವೇಗಿಗಳನ್ನು ಒಳಗೊಂಡ ಬಲಿಷ್ಠ ತಂಡಗಳ ವಿರುದ್ದ ಎಂಬುದು ವಿಶೇಷ. ಅಂದರೆ ಈ ಬಾರಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.
ಕಾಂಗರೂನಾಡಿನ ಪಿಚ್ಗಳು ವೇಗಕ್ಕೆ ಹೆಸರುವಾಸಿ. ಇದನ್ನೇ ಮುಂದಿಟ್ಟುಕೊಂಡು ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೂ ಮುನ್ನ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಟಿ20 ಸರಣಿ ಆಡಲು ಪ್ಲ್ಯಾನ್ ರೂಪಿಸಿದೆ. ಈ ಎರಡೂ ತಂಡಗಳಲ್ಲಿ ಅತ್ಯುತ್ತಮ ವೇಗಿಗಳಿದ್ದಾರೆ. ಹೀಗಾಗಿಯೇ ಟಿ20 ವಿಶ್ವಕಪ್ ಆರಂಭಕ್ಕೂ ಕೆಲ ದಿನಗಳ ಮುಂಚಿತವಾಗಿ ಈ ಎರಡು ತಂಡಗಳ ವಿರುದ್ದ ಟಿ20 ಸರಣಿ ಆಡಲು ಟೀಮ್ ಇಂಡಿಯಾ ಮುಂದಾಗಿದೆ.
ಈ ಸರಣಿಗಳು ಸೆಪ್ಟೆಂಬರ್ನಲ್ಲಿ ಶುರುವಾಗಲಿದೆ. ಮೊದಲು ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಭಾರತದಲ್ಲೇ ನಡೆಯಲಿರುವ ಈ ಸರಣಿಯ ಪಂದ್ಯಗಳು ಸೆಪ್ಟೆಂಬರ್ 20, 23 ಮತ್ತು 25 ರಂದು ಕ್ರಮವಾಗಿ ಮೊಹಾಲಿ, ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ಆಡಲಾಗುತ್ತದೆ.
ಇದಾದ ಬಳಿಕ ಸೌತ್ ಆಫ್ರಿಕಾ ವಿರುದ್ದದ ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಯು ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದೆ. ಈ ಪಂದ್ಯಗಳು ಸೆಪ್ಟೆಂಬರ್ 28 ರಂದು ತಿರುವನಂತಪುರಂ, ಅಕ್ಟೋಬರ್ 2 ರಂದು ಗುವಾಹಟಿ ಮತ್ತು ಅಕ್ಟೋಬರ್ 4 ರಂದು ಇಂದೋರ್‌ನಲ್ಲಿ ನಡೆಯಲಿವೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಾಗುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ದ ಕೇವಲ 13 ದಿನಗಳಲ್ಲಿ 6 ಟಿ20 ಪಂದ್ಯಗಳನ್ನು ಆಡಲಿರುವುದು. ಅತ್ತ ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಶುರುವಾಗಲಿದೆ. ಇತ್ತ ಟೀಮ್ ಇಂಡಿಯಾ ಸರಣಿ ಮುಗಿಯುವುದು ಅಕ್ಟೋಬರ್ 11 ರಂದು.
ಅಂದರೆ 2 ವಾರಗಳ ಒಳಗೆ ಎರಡು ಬಲಿಷ್ಠ ತಂಡಗಳನ್ನು ಎದುರಿಸಿದ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ತೆರಳಲಿದೆ. ಈ ಮೂಲಕ ಆಸೀಸ್ ಪಿಚ್ನಲ್ಲಿ ವೇಗವನ್ನು ಮತ್ತು ಬೌನ್ಸರ್ ಎಸೆತಗಳನ್ನು ಎದುರಿಸಲು ಟೀಮ್ ಇಂಡಿಯಾ ತವರಿನಲ್ಲೇ ಮಾಸ್ಟರ್ ಪ್ಲ್ಯಾನ್ ರೂಪಿಸಲಿದೆ.
ಇದಕ್ಕಾಗಿಯೇ ಟಿ20 ವಿಶ್ವಕಪ್ಗೂ ಮುನ್ನ ಕೇವಲ 13 ದಿನಗಳಲ್ಲಿ ಟೀಮ್ ಇಂಡಿಯಾ 6 ಟಿ20 ಪಂದ್ಯಗಳನ್ನು ಆಡುತ್ತಿರುವುದು. ಅದು ಕೂಡ ಎರಡು ಅತ್ಯುತ್ತಮ ವೇಗಿಗಳನ್ನು ಹೊಂದಿರುವ ಬಲಿಷ್ಠ ತಂಡಗಳ ವಿರುದ್ಧ ಎಂಬುದು ಇಲ್ಲಿ ವಿಶೇಷ. ಈ ಮೂಲಕ ಟಿ20 ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾ ಭರ್ಜರಿ ಪ್ಲ್ಯಾನ್ಗಳನ್ನು ರೂಪಿಸಿದ್ದು, ಇದು ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆಯಾ ಅಥವಾ ಈ ಸರಣಿಗಳ ಫಲಿತಾಂಶ ಟೀಮ್ ಇಂಡಿಯಾ ಪಾಲಿಗೆ ಮುಳುವಾಗಲಿದೆಯಾ ಕಾದು ನೋಡಬೇಕಿದೆ.