
ಐಪಿಎಲ್ 2025 (IPL 2025) ರ ಸಂಭ್ರಮ ಇದೀಗ ಕೊನೆಗೊಂಡಿದ್ದು, ಅಂತರರಾಷ್ಟ್ರೀಯ ಸರಣಿಗಳು ಆರಂಭವಾಗುತ್ತಿವೆ. ಅದರಂತೆ ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ ಟೆಸ್ಟ್ ಸರಣಿ ಕೂಡ ಆರಂಭವಾಗಲಿದೆ. ಜೂನ್ 20 ರಿಂದ ಉಭಯ ದೇಶಗಳ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ಪ್ರಾರಂಭವಾಗಲಿದೆ. ಕಳೆದೊಂದು ದಶಕದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ದಂತಕಥೆಗಳು ಇಲ್ಲದ ಕಾರಣ ಅಭಿಮಾನಿಗಳು ಈ ಸರಣಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಸರಣಿಯು ಹೊಸ ಯುಗದ ಆರಂಭವಾದಂತಾಗುತ್ತದೆ. ಆದರೆ ಅದಕ್ಕೂ ಮುನ್ನ ಈ ಸರಣಿಯ ಹೆಸರು ಬದಲಾಗುತ್ತಿದ್ದು, ಉಭಯ ದೇಶಗಳ ಇಬ್ಬರು ಲೆಜೆಂಡರಿ ಆಟಗಾರರ ಹೆಸರನ್ನು ಇಡಲು ನಿರ್ಧರಿಸಲಾಗಿದೆ.
ಜೂನ್ 20 ರಂದು ಆರಂಭವಾಗಲಿರುವ ಈ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ ಒಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಟೆಸ್ಟ್ ಸರಣಿಗೆ ಈಗ ಎರಡೂ ದೇಶಗಳ ಇಬ್ಬರು ಶ್ರೇಷ್ಠ ಆಟಗಾರರ ಹೆಸರಿಡಲಾಗುವುದು ಎಂದು ಬಿಬಿಸಿ ಸ್ಪೋರ್ಟ್ ವರದಿ ಬಹಿರಂಗಪಡಿಸಿದೆ. ಈ ಟೆಸ್ಟ್ ಸರಣಿಯಲ್ಲಿ ವಿಜೇತರಿಗೆ ನೀಡಲಾಗುವ ಟ್ರೋಫಿಗೆ ಮಾಜಿ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ದಂತಕಥೆ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ಹೆಸರನ್ನು ಇಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎಂದು ವರದಿ ಹೇಳುತ್ತದೆ.
ಸರಣಿಯ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿದ್ದು, ಆ ಸಮಯದಲ್ಲಿ ಈ ಟ್ರೋಫಿಯನ್ನುಅನಾವರಣ ಮಾಡಬಹುದು. ಆದಾಗ್ಯೂ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್ನೂ ಇದನ್ನು ಘೋಷಿಸಿಲ್ಲ ಆದರೆ ಮುಂದಿನ ಕೆಲವು ದಿನಗಳಲ್ಲಿ ಅದನ್ನು ಅಧಿಕೃತಗೊಳಿಸಲಿದೆ. ಟ್ರೋಫಿ ಅನಾವರಣ ಸಮಯದಲ್ಲಿ ಸಚಿನ್ ಮತ್ತು ಆಂಡರ್ಸನ್ ಉಪಸ್ಥಿತರಿರುತ್ತಾರೆ ಎಂದು ನಿರೀಕ್ಷಿಸಬಹುದು. ಅಲ್ಲದೆ, ಈ ಇಬ್ಬರು ದಂತಕಥೆಗಳಿಂದ ಸರಣಿಯನ್ನು ಗೆಲ್ಲುವ ತಂಡಕ್ಕೆ ಟ್ರೋಫಿಯನ್ನು ನೀಡಲಾಗುವುದು ಎಂತಲೂ ಹೇಳಲಾಗುತ್ತಿದೆ.
IND vs ENG: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್
ಆದಾಗ್ಯೂ, ಈ ಟ್ರೋಫಿಯನ್ನು ಎರಡೂ ದೇಶಗಳಲ್ಲಿ ನಡೆಯುವ ಸರಣಿಗಳಲ್ಲಿ ಬಳಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ಪ್ರವಾಸಕ್ಕೂ ಮೊದಲು, ಇಂಗ್ಲೆಂಡ್‌ನಲ್ಲಿ ಎರಡೂ ತಂಡಗಳ ನಡುವೆ ಆಡಲಾಗುವ ಟೆಸ್ಟ್ ಸರಣಿಯನ್ನು ಪಟೌಡಿ ಟ್ರೋಫಿ ಎಂದು ಕರೆಯಲಾಗುತಿತ್ತು. ಈ ಟ್ರೋಫಿಯನ್ನು ಸಹ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯೇ ಪ್ರಾರಂಭಿಸಿತು. ಆದಾಗ್ಯೂ, ಇಸಿಬಿ ಕೆಲವು ತಿಂಗಳ ಹಿಂದೆ ಪಟೌಡಿ ಕುಟುಂಬಕ್ಕೆ ಈ ಟ್ರೋಫಿಯನ್ನು ಮುಂದುವರಿಸುವುದಿಲ್ಲ ಎಂದು ತಿಳಿಸಿದ್ದು, ಇದರ ನಂತರವೇ, ಈಗ ಈ ಟ್ರೋಫಿಗೆ ಇಬ್ಬರು ಲೆಜೆಂಡರಿ ಆಟಗಾರರ ಹೆಸರನ್ನು ಇಡಲಾಗುತ್ತದೆ.ಈಗ ಇಸಿಬಿ ಮತ್ತು ಬಿಸಿಸಿಐ ಒಟ್ಟಾಗಿ ಈ ಸಂಪೂರ್ಣ ಸರಣಿಗೆ ಒಂದೇ ಟ್ರೋಫಿಯ ಹೆಸರಿನಲ್ಲಿ ಹೆಸರಿಸುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ