RCB IPL purchase: ಮದ್ಯ ಪ್ರಚಾರಕ್ಕಾಗಿ ಆರ್‌ಸಿಬಿ ಫ್ರಾಂಚೈಸ್ ಖರೀದಿಸಿದ ವಿಜಯ್ ಮಲ್ಯ
Vijay Mallya Reveals IPL RCB Purchase Story: ವಿಜಯ್ ಮಲ್ಯ ಅವರು ಆರ್‌ಸಿಬಿಯನ್ನು ಖರೀದಿಸಿದ ಕಥೆಯನ್ನು ಬಹಿರಂಗಪಡಿಸಿದ್ದಾರೆ. ಲಲಿತ್ ಮೋದಿಯವರ ಸಲಹೆಯ ಮೇರೆಗೆ ಅವರು ತಂಡವನ್ನು ಖರೀದಿಸಿದ್ದು, ಅವರ ವಿಸ್ಕಿ ಬ್ರಾಂಡ್‌ಗೆ ಪ್ರಚಾರಕ್ಕಾಗಿ ಈ ಖರೀದಿ ಮಾಡಿದ್ದು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ಖರೀದಿಸಿದ್ದು ಹಾಗೂ ರಾಹುಲ್ ದ್ರಾವಿಡ್, ಜಾಕ್ವೆಸ್ ಕಾಲಿಸ್ ಮುಂತಾದ ಆಟಗಾರರನ್ನು ಆಯ್ಕೆ ಮಾಡಿದ್ದು ಅವರಿಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ.

2025 ರ ಐಪಿಎಲ್ (IPL 2025) ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (PBKS vs RCB) ಪ್ರಶಸ್ತಿ ಗೆಲ್ಲುವ ಕನಸನ್ನು ನನಸಾಗಿಸಿಕೊಂಡಿತು. 2008 ರಿಂದ ಈ ಕ್ಷಣಕ್ಕಾಗಿ ಕಾಯುತ್ತಿದ್ದ ಆರ್‌ಸಿಬಿ ಜೂನ್ 3 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ತನ್ನ ಕನಸನ್ನು ನನಸು ಮಾಡಿಕೊಂಡಿತು. ಆರ್ಸಿಬಿಯ ಈ ಯಶಸ್ಸಿಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ (Vijay Mallya) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿನಂದನೆ ಕೂಡ ಸಲ್ಲಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲ್ಯ, ಯಾರ ಸಲಹೆಯ ಮೇರೆಗೆ ಆರ್‌ಸಿಬಿಯನ್ನು ಖರೀದಿಸಿದ್ದು ಹಾಗೂ ಯಾತಕ್ಕಾಗಿ ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸಿದ್ದು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಮುಂಬೈ ಸ್ವಲ್ಪದರಲ್ಲೇ ಕೈತಪ್ಪಿತು
ಪಾಡ್‌ಕ್ಯಾಸ್ಟ್‌ನಲ್ಲಿ ಆರ್‌ಸಿಬಿ ಖರೀದಿಯ ಹಿಂದೆ ಇದ್ದ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಮಾಜಿ ಮಾಲೀಕ ವಿಜಯ್ ಮಲ್ಯ, ‘ಐಪಿಎಲ್ ಆರಂಭದಲ್ಲಿ ತಂಡಗಳನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿರುವಾಗ, ಲಲಿತ್ ಮೋದಿ ನನ್ನ ಬಳಿಗೆ ಬಂದು ತಂಡವನ್ನು ಖರೀದಿಸಲು ಕೇಳಿಕೊಂಡರು. ಲಲಿತ್ ಮೋದಿಯವರ ಮಾತುಗಳಿಂದ ಪ್ರಭಾವಿತನಾಗಿ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಖರೀದಿಸಲು ನಿರ್ಧರಿಸಿದೆ. ನಾನು ಆರ್‌ಸಿಬಿಯನ್ನು ಸುಮಾರು 111.6 ಮಿಲಿಯನ್ (ಸುಮಾರು ರೂ. 476 ಕೋಟಿ) ಗೆ ಖರೀದಿಸಿದೆ. ಇದು ಆ ಸಮಯದಲ್ಲಿ ಎರಡನೇ ಅತ್ಯಂತ ದುಬಾರಿ ಬಿಡ್ ಆಗಿತ್ತು.
ಮೊದಲು ನಾನು ಮುಂಬೈ ಇಂಡಿಯನ್ಸ್ ಸೇರಿದಂತೆ ಒಟ್ಟು ಮೂರು ಫ್ರಾಂಚೈಸಿಗಳಿಗೆ ಬಿಡ್ ಮಾಡಿದ್ದೆ. ಆದಾಗ್ಯೂ, ಮುಖೇಶ್ ಅಂಬಾನಿ ಅತಿ ಹೆಚ್ಚು ಬೆಲೆಗೆ ಬಿಡ್ ಮಾಡಿದ್ದರಿಂದ ಮುಂಬೈ ತಂಡವನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ನಾನು ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸುವ ಹಿಂದಿನ ಏಕೈಕ ಉದ್ದೇಶವೆಂದರೆ ನನ್ನ ವಿಸ್ಕಿ ಬ್ರ್ಯಾಂಡ್ ‘ರಾಯಲ್ ಚಾಲೆಂಜ್’ ಅನ್ನು ಪ್ರಚಾರ ಮಾಡುವುದು ಆಗಿತ್ತು. ಅದಕ್ಕಾಗಿಯೇ ನಾನು ಫ್ರಾಂಚೈಸಿಯನ್ನು ಖರೀದಿಸಿದೆ ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ ಎಂದಿದ್ದಾರೆ.
ನನಗೆ ಹೆಮ್ಮೆಯ ಕ್ಷಣವಾಗಿತ್ತು
ಇದೇ ವೇಳೆ ವಿರಾಟ್ ಕೊಹ್ಲಿಯನ್ನು ಖರೀದಿಸುವ ಬಗ್ಗೆಯೂ ಮಾತನಾಡಿದ ಮಲ್ಯ, ಕೊಹ್ಲಿಯನ್ನು ಅವರ ರಾಜ್ಯ ತಂಡವಾದ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸುವ ನಿರೀಕ್ಷೆಯಿತ್ತು. ಆದರೆ ದೆಹಲಿ ಫ್ರಾಂಚೈಸಿ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಿತು. ಹೀಗಾಗಿ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಸಿಕ್ಕರು. ನಾನು ಆರ್‌ಸಿಬಿಯನ್ನು ಶಕ್ತಿಶಾಲಿಯನ್ನಾಗಿ ಮಾಡಬಲ್ಲ ಆಟಗಾರರನ್ನು ಆಯ್ಕೆ ಮಾಡಿದ್ದೇನೆ. ಅಂಡರ್ -19 ವಿಶ್ವಕಪ್ ತಂಡದ ಯುವ ಆಟಗಾರ ವಿರಾಟ್ ಕೊಹ್ಲಿಯನ್ನು ಖರೀದಿಸುವುದು ನನಗೆ ಹೆಮ್ಮೆಯ ಕ್ಷಣವಾಗಿತ್ತು. ಈ ಆಟಗಾರ ವಿಶೇಷ ಎಂಬ ಭಾವನೆ ನನ್ನೊಳಗೆ ಇತ್ತು. ಹಾಗಾಗಿ ನಾನು ಅವರಿಗಾಗಿ ಬಿಡ್ ಮಾಡಿದೆ. ಆಯ್ಕೆ ಪ್ರಕ್ರಿಯೆಗೆ ಸ್ವಲ್ಪ ಮೊದಲು ಅವರು ಅಂಡರ್ -19 ವಿಶ್ವಕಪ್ ಆಡುತ್ತಿದ್ದರು ಮತ್ತು ನಾನು ಅವರ ಬಗ್ಗೆ ತುಂಬಾ ಪ್ರಭಾವಿತನಾಗಿದ್ದೆ. ಹಾಗಾಗಿ, ನಾನು ಅವರನ್ನು ಆಯ್ಕೆ ಮಾಡಿದೆ. 18 ವರ್ಷಗಳ ನಂತರವೂ ಅವರು ಅದೇ ತಂಡದಲ್ಲಿದ್ದಾರೆ ಎಂಬುದು ಅದ್ಭುತವಾಗಿದೆ.
ಆರ್‌ಸಿಬಿಗೆ ಶುಭ ಹಾರೈಸಿದ ವಿಜಯ್ ಮಲ್ಯ.. ಸರ್ ಭಾರತಕ್ಕೆ ಬನ್ನಿ ಎಂದ SBI; ವೈರಲ್ ಫೋಟೋ ಅಸಲಿಯತ್ತೇನು?
ಸ್ಟಾರ್ ಆಟಗಾರರನ್ನು ಖರೀದಿಸಿದೆವು
ರಾಹುಲ್ ದ್ರಾವಿಡ್ ಅವರನ್ನು ನಮ್ಮ ಐಕಾನ್ ಆಟಗಾರನಾಗಿ ಆಯ್ಕೆ ಮಾಡಲಾಯಿತು. ಅವರು ಬೆಂಗಳೂರಿನ ಹೆಮ್ಮೆಯಾಗಿರುವುದರಿಂದ ಇದರಲ್ಲಿ ಎರಡನೇ ಯೋಚನೆ ಇರಲಿಲ್ಲ. ನಾವು ಜಾಕ್ವೆಸ್ ಕಾಲಿಸ್, ಅನಿಲ್ ಕುಂಬ್ಳೆ ಮತ್ತು ಜಹೀರ್ ಖಾನ್ ಅವರಂತಹ ಜಾಗತಿಕ ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡೆವು. ನನಗೆ ಸ್ಥಳೀಯ ನಾಯಕರು ಮತ್ತು ಅಂತರರಾಷ್ಟ್ರೀಯ ಪ್ರತಿಭೆಯ ಮಿಶ್ರಣ ಬೇಕಿತ್ತು. ಐಪಿಎಲ್ ಟ್ರೋಫಿಯನ್ನು ಬೆಂಗಳೂರಿಗೆ ತರುವುದು ನನ್ನ ಕನಸಾಗಿತ್ತು ಮತ್ತು ಆ ಗುರಿಯೊಂದಿಗೆ ನಾನು ತಂಡವನ್ನು ನಿರ್ಮಿಸಿದೆ ಎಂದು ಮಲ್ಯ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
