KL Rahul Century: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್
India A vs England Lions: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ, ಭಾರತ A ಮತ್ತು ಇಂಗ್ಲೆಂಡ್ ಲಯನ್ಸ್ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಸರಣಿ ಜೋರಾಗಿ ಸಾಗುತ್ತಿದೆ. ಎರಡನೇ ಪಂದ್ಯದಲ್ಲಿ, ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಶತಕ ಸಿಡಿಸಿ ಭಾರತ A ತಂಡಕ್ಕೆ ಬಲ ತುಂಬಿದ್ದಾರೆ. ಮೊದಲ ಪಂದ್ಯ ಡ್ರಾ ಆಗಿದ್ದರೂ, ಈ ಪಂದ್ಯದ ಫಲಿತಾಂಶ ಕುತೂಹಲಕಾರಿಯಾಗಿದೆ.

ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಈ ತಿಂಗಳ ಅಂತ್ಯದಿಂದ ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾವನ್ನು ಸಹ ಘೋಷಿಸಲಾಗಿದ್ದು, ಶುಭ್ಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ ತಂಡ ಕೂಡ ಇಂಗ್ಲೆಂಡ್ ತಲುಪಿದೆ. ಈ ಸರಣಿ ಆರಂಭಕ್ಕೂ ಮುನ್ನ ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ (India A vs England Lions) ತಂಡಗಳ ನಡುವೆ ಅನಧಿಕೃತ ಟೆಸ್ಟ್ ಸರಣಿ ನಡೆಯುತ್ತಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಅಮೋಘ ಪ್ರದರ್ಶನ ನೀಡಿದರಾದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಇದೀಗ ಉಭಯ ತಂಡಗಳ ನಡುವೆ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ಎ ಪರ ಕನ್ನಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ 13 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ ತಮ್ಮ ಶತಕ ಪೂರೈಸಿದರು. ಐಪಿಎಲ್ ಮುಗಿಸಿಕೊಂಡು ಇಂಗ್ಲೆಂಡ್‌ಗೆ ಹೋಗಿರುವ ಕೆಎಲ್ ರಾಹುಲ್ ಅವರ ಈ ಶತಕ ತುಂಬಾ ವಿಶೇಷವಾಗಿದೆ, ಅಲ್ಲಿ ಪರಿಸ್ಥಿತಿಗಳು ಸಂಪೂರ್ಣವಾಗಿ ಭಿನ್ನವಾಗಿವೆ. 151 ಎಸೆತಗಳಲ್ಲಿ ಶತಕ ಬಾರಿಸಿದ ರಾಹುಲ್ಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ನೇ ಶತಕವಾಗಿದೆ.
ಉತ್ತಮ ಜೊತೆಯಾಟ ಕಟ್ಟಿದ ರಾಹುಲ್
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಯಶಸ್ವಿ ಜೈಸ್ವಾಲ್ ಕೇವಲ 17 ರನ್‌ಗಳಿಗೆ ಔಟಾದರೆ, ಅಭಿಮನ್ಯು ಈಶ್ವರನ್ ಕೂಡ ಕೇವಲ 11 ರನ್‌ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಬೇಗನೇ ಬ್ಯಾಟಿಂಗ್ಗೆ ಬಂದ ಕೆ.ಎಲ್. ರಾಹುಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಕರುಣ್ ನಾಯರ್ ಜೊತೆಗೂಡಿ ತಂಡದ ಸ್ಕೋರ್ ಅನ್ನು 126 ರನ್‌ಗಳಿಗೆ ತಲುಪಿಸಿದರು. ಕರುಣ್ ನಾಯರ್ 40 ರನ್‌ಗಳ ವೈಯಕ್ತಿಕ ಸ್ಕೋರ್‌ಗೆ ವಿಕೆಟ್ ಕಳೆದುಕೊಂಡರು. ಇದರ ನಂತರ, ರಾಹುಲ್ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರೊಂದಿಗೆ ಅದ್ಭುತ ಶತಕದ ಪಾಲುದಾರಿಕೆಯನ್ನು ಮಾಡಿ ಇಂಗ್ಲೆಂಡ್ ಲಯನ್ಸ್ ತಂಡವನ್ನು ಹಿನ್ನಡೆಗೆ ತಳ್ಳಿದರು. ರಾಹುಲ್ ಶತಕ ಸಿಡಿಸಿ ಮಿಂಚಿದರೆ, ಜುರೆಲ್ ಅರ್ಧಶತಕ ಗಳಿಸಿದರು.
IND vs ENG: ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ಇಬ್ಬರು ಲೆಜೆಂಡರಿ ಆಟಗಾರರ ಹೆಸರಿಡಲು ನಿರ್ಧಾರ
ಕೆಎಲ್ ರಾಹುಲ್ ಮೇಲೆ ಭರವಸೆ
ಕೆಎಲ್ ರಾಹುಲ್ ಅವರ ಈ ಶತಕ ಅನಧಿಕೃತ ಟೆಸ್ಟ್‌ನಲ್ಲಿ ಗಳಿಸಿದ್ದರೂ, ಇಂಗ್ಲೆಂಡ್ ಪ್ರವಾಸವನ್ನು ಪರಿಗಣಿಸಿ ಈ ಇನ್ನಿಂಗ್ಸ್ ಬಹಳ ಮುಖ್ಯವಾಗಿದೆ. ವಿರಾಟ್ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವುದರಿಂದ ರಾಹುಲ್ ಅವರ ಫಾರ್ಮ್ ತಂಡಕ್ಕೆ ಅತ್ಯಗತ್ಯವಾಗಿದೆ. ಟೀಂ ಇಂಡಿಯಾ ಮೊದಲಿನಂತೆ ಅನುಭವಿ ಬ್ಯಾಟ್ಸ್‌ಮನ್‌ಗಳಿಂದ ಕೂಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೆಎಲ್ ರಾಹುಲ್ ಫಾರ್ಮ್ ಕಂಡುಕೊಂಡಿರುವುದು ತಂಡಕ್ಕೆ ಆನೆ ಬಲ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Fri, 6 June 25
