ಕ್ರಿಸ್ ಅಸಹಾಯಕತೆಯ ಕಥೆ: ಗೇಲ್​ ಜೀವನವನ್ನೇ ಬದಲಿಸಿದ ಆ ಒಂದು ಕರೆ!

ಕ್ರಿಸ್ ಗೇಲ್ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಎಂಟ್ರಿ ಕೊಟ್ಟಿದ್ದು 2009 ರಲ್ಲಿ. ಕೊಲ್ಕತ್ತಾ ನೈಟ್ ರೈಡರ್ಸ್ ಪರ 2 ವರ್ಷ ಆಡಿದ್ದ ಕ್ರಿಸ್ ಗೇಲ್ 2011 ರ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಇದಾದ ಬಳಿಕ ಅವರಿಗೆ ಐಪಿಎಲ್​ನಲ್ಲಿ ಚಾನ್ಸ್ ಸಿಕ್ಕಿದ್ದು ಹೇಗೆ? ಎಂಬುದನ್ನು ಇಂಡಿಯನ್ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಲಲಿತ್ ಮೋದಿ ಅವರ ಹೇಳಿಕೆಯಂತೆ ಗೇಲ್ ಆಯ್ಕೆಯ ಹಿಂದಿನ ತೆರೆಮರೆಯ ರಹಸ್ಯ ಈ ಕೆಳಗಿನಂತಿದೆ...

ಕ್ರಿಸ್ ಅಸಹಾಯಕತೆಯ ಕಥೆ: ಗೇಲ್​ ಜೀವನವನ್ನೇ ಬದಲಿಸಿದ ಆ ಒಂದು ಕರೆ!
Chris Gayle

Updated on: Apr 18, 2026 | 11:44 AM

ಕ್ರಿಕೆಟ್ ಜಗತ್ತಿನ ‘ಯೂನಿವರ್ಸ್ ಬಾಸ್’ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್, ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರು. ಆದರೆ, ಇದೇ ಗೇಲ್ ಐಪಿಎಲ್ 2011ರ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಹೀಗೆ ಅನ್​ಸೋಲ್ಡ್ ಆಗಿ ತೆರೆಮರೆಗೆ ಸರಿದಿದ್ದ ಕೆರಿಬಿಯನ್ ದೈತ್ಯನಿಗೆ ಮತ್ತೊಂದು ಅವಕಾಶ ಕಲ್ಪಿಸಿದ್ದು ಮತ್ಯಾರೂ ಅಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್ ಮೋದಿ.

ಐಪಿಎಲ್ 2010 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಗೇಲ್ ಕಲೆಹಾಕಿದ್ದು ಕೇವಲ 292 ರನ್​ಗಳು ಮಾತ್ರ. ಹೀಗಾಗಿ ಕೆಕೆಆರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಇತ್ತ 2011ರ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡ ಗೇಲ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.

ಜೀವನ ಬದಲಿಸಿದ ಒಂದು ಕಾಲ್:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಕೈ ತಪ್ಪುತ್ತಿದ್ದಂತೆ ಕ್ರಿಸ್ ಗೇಲ್ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಅವರಿಗೆ ಕರೆ ಮಾಡಿದ್ದಾರೆ. ಅಲ್ಲದೆ ನನ್ನನ್ನೇಕೆ ಯಾರು ಖರೀದಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಲಲಿತ್ ಮೋದಿ ನೀಡಿದ ಉತ್ತರ ಪರ್ಫಾಮೆನ್ಸ್. ನೀನು ಚೆನ್ನಾಗಿ ಆಡಿಲ್ಲ, ಅದಕ್ಕೆ ಯಾರೂ ಖರೀದಿಸಿಲ್ಲ ಎಂಬ ಉತ್ತರ ನೀಡಿದ್ದಾರೆ.

ಇದರಿಂದ ವಿಚಲಿತರಾದ ಕ್ರಿಸ್ ಗೇಲ್, ನನಗೆ ಅವಕಾಶ ಮಾಡಿಕೊಡಿ. ನನ್ನ ಮೇಲೆ ಸಾಕಷ್ಟು ಸಾಲವಿದೆ. ಆ ಸಾಲಗಳನ್ನು ಪಾವತಿಸಲು ನನಗೆ ಹಣದ ಅಗತ್ಯವಿದೆ. ಏನಾದರು ಮಾಡಿ ಒಂದು ಚಾನ್ಸ್ ಕೊಡಿಸುವಂತೆ ಲಲಿತ್ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ಕರೆ ಮಾಡಿದ ಲಲಿತ್ ಮೋದಿ:

ಕ್ರಿಸ್ ಗೇಲ್ ಅವರ ಸಂಕಷ್ಟ ಕೇಳಿ ಲಲಿತ್ ಮೋದಿ ಅವರು ಮೂರ್ನಾಲ್ಕ ಫ್ರಾಂಚೈಸಿಗಳನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲದೆ ಅವರಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಎಲ್ಲಾ ಫ್ರಾಂಚೈಸಿಗಳು ಗೇಲ್ ಅವರನ್ನು ತಂಡಕ್ಕೆ ನಿರಾಕರಿಸಿದ್ದವು. ಅತ್ತ ವಿಂಡೀಸ್ ದಾಂಡಿಗನ ಖರೀದಿಗೆ ನಿರಾಕರಣೆ ವ್ಯಕ್ತವಾಗುತ್ತಲೇ ಲಲಿತ್ ಮೋದಿ, ಆರ್​ಸಿಬಿ ಮಾಲೀಕ ವಿಜಯ್ ಮಲ್ಯ ಅವರಿಗೆ ಕರೆ ಮಾಡಿದ್ದಾರೆ.

ಆರ್‌ಸಿಬಿಗೆ ಎಂಟ್ರಿ ಕೊಟ್ಟ ‘ಬಾಸ್’:

ಲಲಿತ್ ಮೋದಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಂದಿನ ಮಾಲೀಕ ವಿಜಯ್ ಮಲ್ಯ ಅವರಿಗೆ ಕರೆ ಮಾಡಿ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.

ಅದೇ ಸಮಯದಲ್ಲಿ ಆರ್‌ಸಿಬಿ ತಂಡದ ವೇಗಿ ಡಿರ್ಕ್ ನ್ಯಾನಸ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಅವರ ಬದಲಿಗೆ ಗೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮಲ್ಯ ಒಪ್ಪಿಕೊಂಡರು. ಆದರೆ ಮಲ್ಯ ಅವರು ಅದಕ್ಕೊಂದು ಷರತ್ತು ಕೂಡ ಹಾಕಿದ್ದರು. ಅದೇನೆಂದರೆ…

“ಕ್ರಿಸ್ ಗೇಲ್ ಚೆನ್ನಾಗಿ ಆಡಿದರೆ ಮಾತ್ರ ನಾನು ಹಣ ನೀಡುತ್ತೇನೆ”. ಇದಕ್ಕೆ ಒಪ್ಪಿದರೆ ನಾನು ತಂಡಕ್ಕೆ ಸೇರಿಸಿಕೊಳ್ಳುತ್ತೇನೆ ಎಂದು ವಿಜಯ ಮಲ್ಯ ಹೇಳಿದ್ದರು. ಇದಕ್ಕೆ ಲಲಿತ್ ಮೋದಿ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಕ್ರಿಸ್ ಗೇಲ್​ಗೆ ಷರತ್ತಿನ ಬಗ್ಗೆ ತಿಳಿಸಿದ್ದಾರೆ. ಅದರಂತೆ ಕ್ರಿಸ್ ಗೇಲ್​ ಆರ್​ಸಿಬಿಗೆ ಎಂಟ್ರಿ ಕೊಟ್ಟಿದ್ದರು.

ಇತಿಹಾಸ ಸೃಷ್ಟಿಸಿದ ಗೇಲ್:

ಆರ್​ಸಿಬಿ ತಂಡಕ್ಕೆ ಸೇರಿದ ಮೊದಲ ಪಂದ್ಯದಲ್ಲೇ ಗೇಲ್ ತಮ್ಮ ಹಳೆಯ ತಂಡವಾದ ಕೆಕೆಆರ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಅಲ್ಲಿಂದ ಮುಂದೆ ಗೇಲ್ ಹಿಂದಿರುಗಿ ನೋಡಲೇ ಇಲ್ಲ. ಆ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಗೆದ್ದಿದ್ದಲ್ಲದೆ, ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡರು.

ಅಂದರೆ ಆರ್​ಸಿಬಿ ಪರ ಆಡಿದ ಮೊದಲ ಸೀಸನ್​ನಲ್ಲೇ ಕ್ರಿಸ್ ಗೇಲ್ ಬರೋಬ್ಬರಿ 608 ರನ್ ಕಲೆಹಾಕಿ ವಿಜಯ ಮಲ್ಯ ಅವರ ಮನ ಗೆದ್ದರು. ಇದಾದ ಬಳಿಕ ಗೇಲ್ ಹಿಂತಿರುಗಿ ನೋಡಿಲ್ಲ.

ಕಾಡಿ ಬೇಡಿ ಪಡೆದ ಅವಕಾಶವನ್ನು ಬಳಸಿಕೊಂಡ ಕ್ರಿಸ್ ಗೇಲ್ 7 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸಿದರು. ಈ ವೇಳೆ 85 ಪಂದ್ಯಗಳನ್ನಾಡಿದ ಯೂನಿವರ್ಸ್ ಬಾಸ್ 5 ಶತಕಗಳೊಂದಿಗೆ ಒಟ್ಟು 3,420 ರನ್ ಗಳಿಸಿದರು.

ಇದರ ನಡುವೆ, ಅಂದರೆ ಐಪಿಎಲ್ 2016 ಮತ್ತು 2017ರ ಸೀಸನ್‌ಗಳಲ್ಲಿ ಗೇಲ್ ಅವರ ಬ್ಯಾಟಿಂಗ್ ಫಾರ್ಮ್ ಕುಸಿಯಿತು. 2017ರ ಸೀಸನ್‌ನಲ್ಲಿ ಅವರು 9 ಇನ್ನಿಂಗ್ಸ್‌ಗಳಿಂದ ಕಲೆಹಾಕಿದ್ದು ಕೇವಲ 200 ರನ್ ಮಾತ್ರ.

ಅಲ್ಲದೆ 2018ರ ಹರಾಜಿನ ವೇಳೆಗೆ ಗೇಲ್ ಅವರಿಗೆ 38 ವರ್ಷ ವಯಸ್ಸಾಗಿತ್ತು. ಆರ್​ಸಿಬಿ ಫ್ರಾಂಚೈಸಿಯು ದೀರ್ಘಕಾಲದ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರ ಮೇಲೆ ಹೂಡಿಕೆ ಮಾಡಲು ಬಯಸಿತ್ತು. ಹೀಗಾಗಿ ಕ್ರಿಸ್ ಗೇಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ರಿಲೀಸ್ ಮಾಡಿತು.

ಇದಾದ ಬಳಿಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಕ್ರಿಸ್ ಗೇಲ್ ಒಟ್ಟು 4 ವರ್ಷಗಳ ಕಾಲ (2018 ರಿಂದ 2021 ರವರೆಗೆ) ಆಡಿದರು. ಆನಂತರ ಅವರು ಐಪಿಎಲ್​ಗೆ ಹೆಸರು ನೀಡಿರಲಿಲ್ಲ. ಇದರೊಂದಿಗೆ ಐಪಿಎಲ್​ನಲ್ಲಿ ಕ್ರಿಸ್ ಗೇಲ್ ಯುಗಾಂತ್ಯವಾಯಿತು.

ಇದನ್ನೂ ಓದಿ: ಕ್ರಿಸ್ ಗೇಲ್​ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ

ಹೀಗೆ, 2011ರಲ್ಲಿ ಸಾಲದ ಸುಳಿಗೆ ಸಿಲುಕಿ ಬಿಲ್‌ಗಳನ್ನು ಪಾವತಿಸಲು ಕಷ್ಟಪಡುತ್ತಿದ್ದ ಕ್ರಿಸ್ ಗೇಲ್, ಸತತ 13 ವರ್ಷಗಳ ಕಾಲ ಐಪಿಎಲ್ ಅಖಾಡದಲ್ಲಿ ಮಿಂಚಿ ಇಂದು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಂದು ಲಲಿತ್ ಮೋದಿಗೆ ಮಾಡಿದ ಆ ಒಂದು ಫೋನ್ ಕರೆ ಮತ್ತು ಆರ್‌ಸಿಬಿ ನೀಡಿದ ಆ ಒಂದು ಅವಕಾಶ ಕ್ರಿಸ್ ಗೇಲ್ ಅವರ ಬದುಕನ್ನೇ ಬದಲಿಸಿದ್ದು ವಿಶೇಷ.

 

Follow Us