IPL 2025: ಐಪಿಎಲ್ ಸೀಸನ್-18 ಆರಂಭದಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅಘಾತ ಎದುರಾಗಿದೆ. ಅದು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭರ್ಜರಿ ಜಯದೊಂದಿಗೆ. ಆರ್ಸಿಬಿ ತಂಡವನ್ನು ತವರಿನಲ್ಲಿ ಸುಲಭವವಾಗಿ ಮಣಿಸುವ ವಿಶ್ವಾಸದಲ್ಲಿದ್ದ ಕೆಕೆಆರ್ ತಂಡಕ್ಕೆ 7 ವಿಕೆಟ್ಗಳ ಸೋಲುಣಿಸುವಲ್ಲಿ ರಾಯಲ್ ಪಡೆ ಯಶಸ್ವಿಯಾಗಿದೆ. ಈ ಗೆಲುವಿನ ರೂವಾರಿಗಳಲ್ಲಿ ಫಿಲ್ ಸಾಲ್ಟ್ ಕೂಡ ಒಬ್ಬರು.
ಏಕೆಂದರೆ 175 ರನ್ಗಳ ಗುರಿ ಪಡೆದ ಆರ್ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ವಿಸ್ಪೋಟಕ ಆರಂಭ ಒದಗಿಸಿದ್ದರು. ಅದರಲ್ಲೂ ಮಿಸ್ಟರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ವಿರುದ್ಧವೇ ಅಬ್ಬರಿಸುವ ಮೂಲಕ ಕೆಕೆಆರ್ ಬೌಲರ್ಗಳ ಜಂಘಾಬಲವನ್ನೇ ಉಡುಗಿಸಿದ್ದರು.
ಅಲ್ಲದೆ ಈ ಪಂದ್ಯದಲ್ಲಿ ಫಿಲ್ ಸಾಲ್ಟ್ 31 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 56 ರನ್ ಸಿಡಿಸಿದ್ದರು. ಈ ಮೂಲಕ ಬೃಹತ್ ಮೊತ್ತದ ಚೇಸಿಂಗ್ಗೆ ಸಾಲ್ಟ್ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆ ಬಳಿಕ ಇದೇ ಹಾದಿಯಲ್ಲಿ ಸಾಗಿದ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಬಾರಿಸಿ 16.2 ಓವರ್ಗಳಲ್ಲಿ ತಂಡಕ್ಕೆ ಜಯ ತಂದುಕೊಟ್ಟರು.
ಈ ಗೆಲುವಿನ ಬಳಿಕ ಮಾತನಾಡಿದ ಫಿಲ್ ಸಾಲ್ಟ್ಗೆ ತಮ್ಮ ಹಳೆಯ ಫ್ರಾಂಚೈಸಿ ಕೊಲ್ಕತ್ತಾ ನೈಟ್ ರೈಡರ್ಸ್ ಬಗ್ಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಸಾಲ್ಟ್, ನನಗೆ ಕೆಕೆಆರ್ ಆಟಗಾರರ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರು ಏನು ಮಾಡಬಲ್ಲರು ಎಂಬುದು ಸಹ ಗೊತ್ತಿತ್ತು. ಹೀಗಾಗಿ ನಾನು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದೆ ಎಂದು ಫಿಲ್ ಸಾಲ್ಟ್ ಹೇಳಿದ್ದಾರೆ.
ಕಳೆದ ಬಾರಿ ನಾನು ಕೆಕೆಆರ್ ತಂಡದಲ್ಲಿದ್ದರೂ, ಈ ಲೀಗ್ನಲ್ಲಿ ಯಾವುದೇ ಸ್ನೇಹಿತರಿಲ್ಲ. ಅದೆಲ್ಲಾ ಇಲ್ಲಿ ಲೆಕ್ಕಕ್ಕೇ ಬರುವುದಿಲ್ಲ ಎನ್ನುವ ಮೂಲಕ ಫಿಲ್ ಸಾಲ್ಟ್ ಐಪಿಎಲ್ 2024 ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೈ ಬಿಟ್ಟ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ
ಅಂದಹಾಗೆ ಫಿಲ್ ಸಾಲ್ಟ್ ಕಳೆದ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ 12 ಪಂದ್ಯಗಳಲ್ಲಿ ಇನಿಂಗ್ಸ್ ಆರಂಭಿಸಿದ್ದರು. ಈ ವೇಳೆ 4 ಅರ್ಧಶತಕಗಳೊಂದಿಗೆ ಒಟ್ಟು 435 ರನ್ ಬಾರಿಸಿ ಅಬ್ಬರಿಸಿದ್ದರು. ಇದಾಗ್ಯೂ ಅವರನ್ನು ಈ ಬಾರಿ ಕೆಕೆಆರ್ ಉಳಿಸಿಕೊಂಡಿರಲಿಲ್ಲ. ಇತ್ತ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಸಾಲ್ಟ್ ಅವರನ್ನು ಆರ್ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಕೆಕೆಆರ್ ವಿರುದ್ಧವೇ ಅಬ್ಬರಿಸುವ ಮೂಲಕ ಫಿಲ್ ಸಾಲ್ಟ್ ನೈಟ್ ರೈಡರ್ಸ್ ಪಡೆಗೆ ಬಿಸಿ ಮುಟ್ಟಿಸಿದ್ದಾರೆ.