IPL 2025: ಕೊನೆಗೂ ನೀವು ಚೆನ್ನಾಗಿ ಬೌಲಿಂಗ್ ಮಾಡಿದ್ರಿ: ವಿಜಯ ಮಲ್ಯ ಫುಲ್ ಖುಷ್
IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಕಪ್ ಗೆಲ್ಲದಿರಲು ಮುಖ್ಯ ಕಾರಣ ಕಳಪೆ ಬೌಲಿಂಗ್ ಪ್ರದರ್ಶನ ಎನ್ನಲಾಗುತ್ತದೆ. ಕಳೆದ 17 ಸೀಸನ್ಗಳಲ್ಲಿ ಬಲಾಢ್ಯ ಬ್ಯಾಟರ್ಗಳು ಕಣಕ್ಕಿಳಿದರೂ, ಆರ್‌ಸಿಬಿ ಬೌಲಿಂಗ್ ವಿಭಾಗದ ಮೂಲಕ ವಿಫಲವಾಗುತ್ತಿತ್ತು. ಆದರೆ ಈ ಬಾರಿಯ ಐಪಿಎಲ್ನಲ್ಲಿ ಆರ್‌ಸಿಬಿ ಬೌಲರ್ಗಳು ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ IPL 2025 ರ ಮೊದಲ ಪಂದ್ಯದಲ್ಲಿ ರಾಯಲ್ಲಾಗಿಯೇ ಗೆಲುವು ದಾಖಲಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟರ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 174 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ತಂಡ 16.4 ಓವರ್ಗಳಲ್ಲಿ 177 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಈ ಭರ್ಜರಿ ಗೆಲುವಿನ ಬೆನ್ನಲ್ಲೇ ಆರ್ಸಿಬಿಯ ಮಾಜಿ ಮಾಲೀಕರಾದ ವಿಜಯ ಮಲ್ಯ ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅದು ಸಹ ಆರ್‌ಸಿಬಿ ಬೌಲರ್ಗಳ ಪ್ರದರ್ಶನವನ್ನು ಕೊಂಡಾಡುವ ಮೂಲಕ ಎಂಬುದು ವಿಶೇಷ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ರತಿ ಸೀಸನ್ನಲ್ಲೂ ಆರ್‌ಸಿಬಿ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದರೂ, ಬೌಲಿಂಗ್ ವಿಭಾಗವು ಕಳಪೆಯಿಂದ ಕೂಡಿರುತ್ತಿತ್ತು. ಆದರೆ ಈ ಬಾರಿಯ ಮೊದಲ ಪಂದ್ಯದಲ್ಲೇ ಬಲಾಢ್ಯ ಬ್ಯಾಟರ್ಗಳ ದಂಡೇ ಹೊಂದಿರುವ ಕೆಕೆಆರ್ ತಂಡಕ್ಕೆ ಸೋಲುಣಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದ್ದಾರೆ.
ಈ ಪಂದ್ಯದ ಮೊದಲ 10 ಓವರ್ಗಳಲ್ಲಿ 107 ರನ್ ನೀಡಿದ್ದ ಆರ್‌ಸಿಬಿ ಬೌಲರ್ಗಳು, ದ್ವಿತೀಯ 10 ಓವರ್ಗಳಲ್ಲಿ ಕೇವಲ 67 ರನ್ ನೀಡಿ 6 ವಿಕೆಟ್ಗಳನ್ನು ಉರುಳಿಸಿದ್ದರು. ಈ ಮೂಲಕ ಬೃಹತ್ ಮೊತ್ತ ಪೇರಿಸುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಲೆಕ್ಕಾಚಾರವನ್ನು ಆರ್‌ಸಿಬಿ ಬೌಲರ್ಗಳು ತಲೆಕೆಳಗಾಗಿಸಿದ್ದರು.
ಈ ಗೆಲುವಿನ ಬೆನ್ನಲ್ಲೇ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿಜಯ ಮಲ್ಯ ಅವರು, ಕೆಕೆಆರ್ ವಿರುದ್ಧದ ಭರ್ಜರಿ ಗೆಲುವಿಗೆ ಆರ್‌ಸಿಬಿಗೆ ಅಭಿನಂದನೆಗಳು. ಆರ್‌ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ಬಗ್ಗೆ ಯಾವಾಗಲೂ ಮಾತನಾಡುತ್ತಿತ್ತಾರೆ. ಆದರೆ ಈ ಬಾರಿ ಆರ್‌ಸಿಬಿ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದು ಕಾಮೆಂಟೇಟರ್ಗಳು ಹೇಳುತ್ತಿರುವುದು ಕೇಳಿ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.
Congratulations to RCB for the emphatic win over KKR. Glad to hear the commentators finally say that RCB bowled well. The batting line up speaks for itself.
— Vijay Mallya (@TheVijayMallya) March 22, 2025
ಈ ಮೂಲಕ ಆರ್‌ಸಿಬಿ ತಂಡದ ಮೊದಲ ಗೆಲುವಿಗೆ ಮಲ್ಯ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅಂದಹಾಗೆ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಸ್ಥಾಪಕರು. 2008 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ಬಿಡ್ಡಿಂಗ್ನಲ್ಲಿ ಮಲ್ಯ ಅವರು ಆರ್‌ಸಿಬಿ ತಂಡವನ್ನು 455 ಕೋಟಿ ರೂ. ನೀಡಿ ಖರೀದಿಸಿದ್ದರು.
ಆದರೆ 2016 ರಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸಿ ಸಾಲದ ಸುಳಿಗೆ ಸಿಲುಕಿದ ವಿಜಯ ಮಲ್ಯ ಭಾರತದಿಂದ ಪಾಲಾಯನ ಮಾಡಿ, ಈಗ ಇಂಗ್ಲೆಂಡ್ನಲ್ಲಿ ನೆಲೆಸಿದ್ದಾರೆ. ಇದೀಗ ಆರ್‌ಸಿಬಿ ತಂಡದ ಮಾಲೀಕತ್ವವು ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಹೆಸರಿನಲ್ಲಿದ್ದರೂ, ತಂಡದ ಮಾಲಕತ್ವದ ಶೇ. 54.8 ರಷ್ಟು ಭಾಗ ಡಿಯಾಜಿಯೊ ಕಂಪೆನಿಯ ಅಧೀನದಲ್ಲಿದೆ.
ಇದನ್ನೂ ಓದಿ: IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು
ಇದಾಗ್ಯೂ ತನ್ನ ಹಳೆಯ ತಂಡದ ಗೆಲುವನ್ನು ವಿಜಯ ಮಲ್ಯ ದೂರ ಲಂಡನ್ನಲ್ಲಿ ಕೂತು ಸಂಭ್ರಮಿಸುತ್ತಿದ್ದಾರೆ. ಅದು ಸಹ ಆರ್‌ಸಿಬಿ ಬೌಲರ್ಗಳ ಪ್ರದರ್ಶನವನ್ನು ಪ್ರಶಂಸಿಸುವ ಮೂಲಕ ಎಂಬುದು ವಿಶೇಷ.