
IPL 2026: ಐಪಿಎಲ್ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ನಡೆದ ಆನ್-ಫೀಲ್ಡ್ ಜಟಾಪಟಿ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಟ್ರಾವಿಸ್ ಹೆಡ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ತಾನು ಬೌಲಿಂಗ್ ಮಾಡಿದ ಫೋಟೋದೊಂದಿಗೆ ಎಂಬುದು ವಿಶೇಷ.
ಈ ಮ್ಯಾಚ್ನಲ್ಲಿ ಟ್ರಾವಿಸ್ ಹೆಡ್ ಒಂದು ಓವರ್ ಎಸೆದಿದ್ದರು. ಅಲ್ಲದೆ ಕೇವಲ 7 ರನ್ ನೀಡಿ ರಜತ್ ಪಾಟಿದಾರ್ ವಿಕೆಟ್ ಅನ್ನು ಪಡೆದಿದ್ದರು. ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೆಡ್ “Keep the body guessing” ಎಂಬ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ.
ಎದುರಾಳಿ ಆಟಗಾರ ಅಥವಾ ಬ್ಯಾಟರ್ ಮುಂದಿನ ನಡೆ ಏನು ಎಂಬುದನ್ನು ಊಹಿಸಲು ಸಾಧ್ಯವಾಗದಂತೆ ಗೊಂದಲದಲ್ಲಿ ಇಡುವುದನ್ನು ಈ ವಾಕ್ಯ ಸೂಚಿಸುತ್ತದೆ.
ವಿರಾಟ್ ಕೊಹ್ಲಿ ಅವರು ಹೆಡ್‌ಗೆ “ಬಂದು ಬೌಲಿಂಗ್ ಮಾಡು” ಎಂದು ಸವಾಲು ಹಾಕಿದ್ದರು. ಆದರೆ, ಬ್ಯಾಟರ್ ಆಗಿರುವ ಹೆಡ್ ಹಠಾತ್ ಆಗಿ ಬೌಲಿಂಗ್ ಮಾಡಿ ವಿಕೆಟ್ ಪಡೆದರು.
ಅಂದರೆ, “ನಾನು ಮುಂದೆ ಏನು ಮಾಡುತ್ತೇನೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ಎಲ್ಲರನ್ನೂ ನಾನು ಗೊಂದಲದಲ್ಲಿ ಇಡುತ್ತೇನೆ” ಎಂಬ ಮಾರ್ಮಿಕ ಅರ್ಥದಲ್ಲಿ ಟ್ರಾವಿಸ್ ಹೆಡ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ ಮಾಡಿ ತೋರಿಸು ಎಂದ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 200 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್ಆರ್ಹೆಚ್ 55 ರನ್ಗಳ ಭರ್ಜರಿ ಜಯ ಸಾಧಿಸಿದೆ.
Published On - 2:04 pm, Sat, 23 May 26