ಅಭಿಮಾನವಲ್ಲ, ಇದು ಅಭಿಮಾನಿಗಳ ವಿಕೃತಿ: ಟ್ರಾವಿಸ್ ಹೆಡ್ ಪತ್ನಿಯ ಅಳಲು!

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್‌ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರಾಟ್ ಕೊಹ್ಲಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಟ್ರಾವಿಸ್ ಹೆಡ್ ನಡುವೆ ನಡೆದ ಮಾತಿನ ಚಕಮಕಿ ನಡೆದಿತ್ತು. ಮೈದಾನದಲ್ಲಿ ಆರಂಭವಾದ ಆಟಗಾರರ ನಡುವಿನ ವೈಯಕ್ತಿಕ ಪೈಪೋಟಿ ಮತ್ತು ಪಂದ್ಯದ ಬಳಿಕ ಕೊಹ್ಲಿ ಹಸ್ತಲಾಘವ ನಿರಾಕರಿಸಿದ ಘಟನೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ರೂಪ ಪಡೆದುಕೊಂಡಿದೆ.

ಅಭಿಮಾನವಲ್ಲ, ಇದು ಅಭಿಮಾನಿಗಳ ವಿಕೃತಿ: ಟ್ರಾವಿಸ್ ಹೆಡ್ ಪತ್ನಿಯ ಅಳಲು!
Virat Kohli Travis Head Jessica Head
Image Credit source: IPL/adelaidenow.com

Updated on: May 25, 2026 | 2:16 PM

“ಕ್ರೀಡೆಯಲ್ಲಿ ಭಾವನೆ ಮತ್ತು ಉದ್ವೇಗ ಇರುವುದು ಸಹಜ. ಆದರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಅವರ ಕುಟುಂಬಗಳು ಇರುತ್ತವೆ ಎಂಬುದನ್ನು ಮರೆಯಬಾರದು.” ಇದು ಐಪಿಎಲ್ 2026ರ ಆನ್‌ಲೈನ್ ಕಿರುಕುಳಕ್ಕೆ ಬೇಸತ್ತು ಆಸ್ಟ್ರೇಲಿಯಾದ ಕ್ರಿಕೆಟರ್ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ (Jessica Head) ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ.

ಘಟನೆಯ ಹಿನ್ನೆಲೆ ಏನು?

ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಆದರೆ, ಕ್ರೀಡಾಂಗಣದೊಳಗಿನ ಈ ಸ್ಲೆಡ್ಜಿಂಗ್ ಮತ್ತು ಪೈಪೋಟಿ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹೊಸ  ರೂಪ ಪಡೆದುಕೊಂಡಿದೆ. ಕೆಲವು ಅತಿರೇಕದ ಅಭಿಮಾನಿಗಳು ಟ್ರಾವಿಸ್ ಹೆಡ್ ಮಾತ್ರವಲ್ಲದೆ ಅವರ ಪತ್ನಿ ಜೆಸ್ಸಿಕಾ, ಅವರ ಸ್ನೇಹಿತರು ಮತ್ತು ಕುಟುಂಬದವರ ಖಾತೆಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.

ಜೆಸ್ಸಿಕಾ ಹೆಡ್ ಆಕ್ರೋಶ:

ಈ ಇಡೀ ಘಟನೆಯಿಂದ ತೀವ್ರ ಬೇಸರಗೊಂಡಿರುವ ಜೆಸ್ಸಿಕಾ ಹೆಡ್, “ವಿಶ್ವಕಪ್ ಮುಗಿದ ನಂತರ ನಡೆದ ದೌರ್ಜನ್ಯ ಮತ್ತೊಮ್ಮೆ ಮರುಕಳಿಸಿದಂತೆ ಭಾಸವಾಗುತ್ತಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ತುಂಬಿಹೋಗಿವೆ. ನನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ,” ಎಂದು ನೋವು ತೋಡಿಕೊಂಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಈ ಘಟನೆಯಾದರೂ ಜನರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಸ್ವಲ್ಪ ದಯೆ ಮತ್ತು ಗೌರವವನ್ನು ಮೂಡಿಸಲಿ ಎಂದು ನಾನು ಭಾವಿಸುತ್ತೇನೆ,” ಎಂದು ಆಶಿಸಿದ್ದಾರೆ.

ಇದು ಮೊದಲ ಬಾರಿಯೇನಲ್ಲ!

ಜೆಸ್ಸಿಕಾ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತೆ, ಇದು ಅವರಿಗೆ ಮೊದಲ ಕಹಿ ಅನುಭವವೇನಲ್ಲ. 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಶತಕ ಬಾರಿಸಿ ಭಾರತದ ವಿರುದ್ಧ ಆಸ್ಟ್ರೇಲಿಯಾವನ್ನು ಗೆಲ್ಲಿಸಿದ್ದರು. ಆ ಪಂದ್ಯ ಮುಗಿದ ತಕ್ಷಣವೂ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಒಂದು ಸಣ್ಣ ವರ್ಗ ಜೆಸ್ಸಿಕಾ ಮತ್ತು ಅವರ ಪುಟಾಣಿ ಮಗಳ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ನುಗ್ಗಿ ಅತ್ಯಂತ ನಿಂದನಾತ್ಮಕ ಸಂದೇಶಗಳನ್ನು ಹಾಗೂ ಜೀವ ಬೆದರಿಕೆಗಳನ್ನು ಹಾಕಿದ್ದರು.

ಇದನ್ನೂ ಓದಿ: IPL 2026: ಐಪಿಎಲ್ ಇತಿಹಾಸದಲ್ಲೇ ಈ ರೀತಿಯ ಪ್ಲೇಆಫ್ ಇದೇ ಮೊದಲು..!

 ‘ಅಂಧಾಭಿಮಾನ’ವಾಗದಿರಲಿ!

“ಆಟಗಳು ಕೇವಲ ಗೆಲುವು-ಸೋಲುಗಳ ಪ್ರದರ್ಶನವಲ್ಲ. ಅವು ಮಾನವೀಯತೆ, ಶಿಸ್ತು ಮತ್ತು ಪರಸ್ಪರ ಗೌರವವನ್ನು ಕಲಿಸುವ ವೇದಿಕೆಗಳು. ಮೈದಾನದ ಪೈಪೋಟಿ ಮೈದಾನದಲ್ಲೇ ಕೊನೆಗೊಳ್ಳಬೇಕು. ಆಟಗಾರರ ಕುಟುಂಬಗಳನ್ನು, ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಿಯಾಗಿಸಿ ಆನ್‌ಲೈನ್‌ನಲ್ಲಿ ವಿಷ ಕಾರುವ ವಿಕೃತ ಮನಸ್ಥಿತಿಗೆ ಈಗಲೇ ಬ್ರೇಕ್ ಬೀಳಬೇಕಿದೆ. ಕ್ರೀಡೆಯ ಮೇಲಿರುವ ನಮ್ಮ ‘ಅಭಿಮಾನ’ ಇನ್ನೊಬ್ಬರ ನೆಮ್ಮದಿಯನ್ನು ಕದಡುವ ‘ಅಂಧಾಭಿಮಾನ’ವಾಗದಿರಲಿ. ಜೆಸ್ಸಿಕಾ ಹೆಡ್ ಅವರ ಮಾತುಗಳು ಕೇವಲ ಒಂದು ಅಳಲಲ್ಲ; ಅದು ಪ್ರತಿಯೊಬ್ಬ ಕ್ರೀಡಾಪ್ರೇಮಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಎಚ್ಚರಿಕೆಯ ಗಂಟೆ.”

 

Published On - 1:52 pm, Mon, 25 May 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us