ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿದ ನೇಪಾಳ
U19 Asia Cup 2024: ಪಾಕಿಸ್ತಾನ್ ಅಂಡರ್-19 ಮಹಿಳಾ ತಂಡವು ತನ್ನ ಮೊದಲ ಮ್ಯಾಚ್ನಲ್ಲಿ ಭಾರತದ ವಿರುದ್ಧ ಪರಾಜಯಗೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ್ ತಂಡವನ್ನು ಕೇವಲ 67 ರನ್ಗಳಿಗೆ ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಅಲ್ಲದೆ 7.5 ಓವರ್ಗಳಲ್ಲಿ 68 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದೀಗ ನೇಪಾಳ ಕೂಡ ಪಾಕ್ ವಿರುದ್ಧ ಗೆಲುವು ದಾಖಲಿಸಿದೆ.
ಮಲೇಷ್ಯಾದ ಕೌಲಲಂಪುರ್ನಲ್ಲಿ ನಡೆಯುತ್ತುರುವ ಅಂಡರ್-19 ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ನೇಪಾಳ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಮಹಿಳಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಪರ ಆರಂಭಿಕ ಆಟಗಾರ್ತಿ ಕೋಮಲ್ ಖಾನ್ 38 ರನ್ ಬಾರಿಸಿದರು.
ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹಮ್ ಅನೀಸ್ 29 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ಮಹಿಳಾ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 104 ರನ್ ಕಲೆಹಾಕಿದೆ.
105 ರನ್ಗಳ ಗುರಿ ಬೆನ್ನಲ್ಲೇ ನೇಪಾಳ ಮಹಿಳಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿ ಸನಾ ಪ್ರವೀಣ್ 10 ರನ್ಗಳಿಸಿ ಔಟಾದರೆ, ಸಾಬಿತ್ರಿ ಧಮಿ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಪುಜಾ ಮಹತೊ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ರಕ್ಷಣಾತ್ಮಕ ಆಟದೊಂದಿಗೆ ರನ್ ಕಲೆಹಾಕುತ್ತಾ ಸಾಗಿದ ಪೂಜಾ 47 ಎಸೆತಗಳಲ್ಲಿ 3 ಫೋರ್ಗಳೊಂದಿಗೆ ಅಜೇಯ 47 ರನ್ ಬಾರಿಸಿದರು.
ಈ ಮೂಲಕ 19 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ನೇಪಾಳ ತಂಡವು 105 ರನ್ ಬಾರಿಸಿ 6 ವಿಕೆಟ್ಗಳ ಜಯ ಸಾಧಿಸಿದೆ. ಇದು ಪೂರ್ಣ ಸದಸ್ಯ ರಾಷ್ಟ್ರ ವಿರುದ್ಧದ ನೇಪಾಳ ತಂಡದ ಮೊದಲ ಗೆಲುವು ಎಂಬುದು ವಿಶೇಷ. ಈ ಮೂಲಕ ಅಂಡರ್-19 ನೇಪಾಳ ಮಹಿಳಾ ತಂಡವು ಐತಿಹಾಸಿಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಪಾಕ್ ಪಡೆಗೆ ಬ್ಯಾಕ್ ಟು ಬ್ಯಾಕ್ ಸೋಲು:
ಪಾಕಿಸ್ತಾನ್ ಅಂಡರ್-19 ಮಹಿಳಾ ತಂಡವು ತನ್ನ ಮೊದಲ ಮ್ಯಾಚ್ನಲ್ಲಿ ಭಾರತದ ವಿರುದ್ಧ ಪರಾಜಯಗೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ್ ತಂಡವನ್ನು ಕೇವಲ 67 ರನ್ಗಳಿಗೆ ನಿಯಂತ್ರಿಸುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಅಲ್ಲದೆ 7.5 ಓವರ್ಗಳಲ್ಲಿ 68 ರನ್ ಬಾರಿಸಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಎರಡನೇ ಪಂದ್ಯದಲ್ಲಿ ಪಾಕ್ ಪಡೆ ನೇಪಾಳ ವಿರುದ್ಧ ಮುಗ್ಗರಿಸಿದೆ.