ಅಂಡರ್-19 ವಿಶ್ವಕಪ್ನಲ್ಲಿ (U19 World Cup 2024) ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಅಮೆರಿಕವನ್ನು ಎದುರಿಸಿದ್ದ ಭಾರತ ಯುವ ಪಡೆ (India U-19 vs USA U-19) ಬರೋಬ್ಬರಿ 201 ರನ್ಗಳ ಬೃಹತ್ ಜಯ ಸಾಧಿಸಿದೆ. ಇದರೊಂದಿಗೆ ಲೀಗ್ ಸುತ್ತಿನಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಭಾರತ ತಂಡ ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ. ಲೀಗ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾ ಪಡೆಯನ್ನು ಮಣಸಿದ್ದ ಉದಯ್ ಪಡೆ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ ಇದೇ 201 ರನ್ಗಳಿಂದ ಗೆಲುವು ಸಾಧಿಸಿತ್ತು. ಇದೀಗ ಲೀಗ್ನ ಕೊನೆಯ ಪಂದ್ಯದಲ್ಲೂ ಯುಎಸ್ಎ ವಿರುದ್ಧ 201 ರನ್ಗಳ ಗೆಲುವು ದಾಖಲಿಸಿ, ತನ್ನ ಗುಂಪಿನಿಂದ ಅಗ್ರ ತಂಡವಾಗಿ ಸೂಪರ್ ಸಿಕ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಅರ್ಶಿನ್ ಕುಲಕರ್ಣಿ 110 ಎಸೆತಗಳಲ್ಲಿ ಶತಕ ಪೂರೈಸಿದರು. ಮೊದಲು ನಿಧಾನಗತಿಯ ಬ್ಯಾಟಿಂಗ್ ಮಾಡಿದ ಅರ್ಶಿನ್, 70 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 118 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 110 ರನ್ ಕಲೆಹಾಕಿದರು. ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 7 ಮತ್ತು 32 ರನ್ಗಳ ಇನ್ನಿಂಗ್ಸ್ಗಳನ್ನು ಆಡಿದ್ದ ಅರ್ಶಿನ್ ಈ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ತಮ್ಮ ಫಾರ್ಮ್ ಅನ್ನು ಮರಳಿ ಪಡೆದಿದ್ದಾರೆ.
U19 World Cup 2024: ಬಾಂಗ್ಲಾ ತಂಡವನ್ನು 84 ರನ್ಗಳಿಂದ ಮಣಿಸಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದ ಭಾರತ..!
ಶತಕದ ಜೊತೆಗೆ ಅರ್ಶಿನ್ ಕುಲಕರ್ಣಿ ಎರಡನೇ ವಿಕೆಟ್ಗೆ ಮುಶೀರ್ ಖಾನ್ ಜೊತೆ 155 ರನ್ ಜೊತೆಯಾಟ ನಡೆಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮುಶೀರ್ ಮತ್ತೊಮ್ಮೆ ಅಪ್ರತಿಮ ಇನ್ನಿಂಗ್ಸ್ ಆಡಿ, 76 ಎಸೆತಗಳಲ್ಲಿ 73 ರನ್ ಗಳಿಸಿ ಔಟಾದರು. ನಾಯಕ ಉದಯ್ ಸಾಹರನ್ 35 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಕೆಳ ಕ್ರಮಾಂಕದಲ್ಲಿ ಪ್ರಿಯಾಂಶು ಮೊಲಿಯಾ 19 ಎಸೆತಗಳಲ್ಲಿ 27 ರನ್, ಸಚಿನ್ ದಾಸ್ 20 ರನ್ ಕೊಡುಗೆ ನೀಡಿದರು. ಹೀಗಾಗಿ ತಂಡ 326 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಅಮೆರಿಕ ಪರ ಅತಿಂದ್ರ ಸುಬ್ರಮಣ್ಯಂ 2 ವಿಕೆಟ್ ಪಡೆದರು.
326 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಅಮೇರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊದಲ ನಾಲ್ವರು ಬ್ಯಾಟರ್ಗಳು ಕ್ರಮವಾಗಿ 2, 0, 18, 8 ರನ್ಗಳಿಗೆ ಪೆವಿಲಿಯನ್ ಸೇರಿಕೊಳ್ಳುವ ಮೂಲಕ ಆರಂಭದಲ್ಲೇ ತಂಡವನ್ನು ಸೋಲಿನ ದವಡೆಗೆ ತಳ್ಳಿದರು. ತಂಡದ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಉತ್ಕರ್ಷ್ ಶ್ರೀವಾಸ್ತವ ಅತ್ಯಧಿಕ 40 ರನ್ ಕಲೆಹಾಕಿದರು. ಅಂತಿಮವಾಗಿ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ