AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 World Cup 2026: ಬಾಂಗ್ಲಾವನ್ನು ಬಗ್ಗುಬಡಿದು ಸತತ 2ನೇ ಗೆಲುವು ದಾಖಲಿಸಿದ ಭಾರತ

U19 World Cup 2026: ಭಾರತ ಅಂಡರ್-19 ತಂಡ 2026ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ 10 ರನ್‌ಗಳಿಂದ ಸೋಲಿಸಿ ಸತತ ಎರಡನೇ ಗೆಲುವು ದಾಖಲಿಸಿದೆ. ವೈಭವ್ ಸೂರ್ಯವಂಶಿ, ಅಭಿಗ್ಯಾನ್ ಕುಂಡು ಅರ್ಧಶತಕಗಳು ಹಾಗೂ ವಿಹಾನ್ ಮಲ್ಹೋತ್ರಾ ಮಾರಕ ಬೌಲಿಂಗ್ ಪ್ರದರ್ಶನದಿಂದ ಭಾರತ ಗೆಲುವು ಸಾಧಿಸಿತು. ಮಳೆ ಅಡ್ಡಿಪಡಿಸಿದರೂ, ಯುವ ಪಡೆ ಗೆಲುವಿನ ಓಟ ಮುಂದುವರೆಸಿದೆ.

U19 World Cup 2026: ಬಾಂಗ್ಲಾವನ್ನು ಬಗ್ಗುಬಡಿದು ಸತತ 2ನೇ ಗೆಲುವು ದಾಖಲಿಸಿದ ಭಾರತ
Ind Vs Ban
ಪೃಥ್ವಿಶಂಕರ
|

Updated on:Jan 17, 2026 | 10:43 PM

Share

ಅಂಡರ್-19 ವಿಶ್ವಕಪ್ 2026 (U19 World Cup 2026) ಅನ್ನು ಗೆಲುವಿನೊಂದಿಗೆ ಆರಂಭಿಸಿದ್ದ ಭಾರತ ಯುವ ಪಡೆ ಇದೀಗ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿದ್ದ ಆಯುಷ್ ಪಡೆ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದಿದೆ. ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಸಾಕಷ್ಟು ಬಾರಿ ಅಡ್ಡಿಪಡಿಸಿತು. ಅಂತಿಮವಾಗಿ ಈ ಮಳೆ ಪೀಡಿತ ಪಂದ್ಯವನ್ನು ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ 10 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಭಾರತದ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಅವರ ನಿರ್ಣಾಯಕ ಇನ್ನಿಂಗ್ಸ್ ಜೊತೆಗೆ ಬೌಲರ್‌ಗಳ ಸಾಂಘೀಕ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಸೂರ್ಯವಂಶಿ, ಕುಂಡು ಅರ್ಧಶತಕ

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ಮಳೆಯಿಂದಾಗಿ, ಪಂದ್ಯವನ್ನು ತಲಾ 49 ಓವರ್‌ಗಳಿಗೆ ಇಳಿಸಲಾಯಿತು. ಭಾರತವು ಆರಂಭದಲ್ಲಿಯೇ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ತಂಡದ ನಾಯಕ ಆಯುಷ್ ಮ್ಹಾತ್ರೆ, ವೇದಾಂತ್ ತ್ರಿವೇದಿ ಮತ್ತು ವಿಹಾನ್ ಮಲ್ಹೋತ್ರಾ ಬೇಗನೆ ಪೆವಿಲಿಯನ್ ಸೇರಿಕೊಂಡರು. ಆ ನಂತರ ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಉತ್ತಮ ಜೊತೆಯಾಟವನ್ನಾಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಸೂರ್ಯವಂಶಿ 67 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 72 ರನ್ ಗಳಿಸಿ ಔಟಾದರು.

ಅಭಿಗ್ಯಾನ್ ಕುಂಡು ಕೂಡ 112 ಎಸೆತಗಳಲ್ಲಿ 80 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಕುಂಡು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಕನಿಷ್ಕ್ ಚೌಹಾಣ್ ಕೂಡ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡವು 48.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 238 ರನ್‌ ಗಳಿಸಿತು. ಬಾಂಗ್ಲಾದೇಶ ಪರ ಅಲ್ ಫಹಾದ್ ಅದ್ಭುತ ಬೌಲಿಂಗ್ ಮಾಡಿ ಐದು ವಿಕೆಟ್‌ಗಳನ್ನು ಪಡೆದರು.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ವಿಹಾನ್ ಮಲ್ಹೋತ್ರಾ ಮಾರಕ ದಾಳಿ

ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಪಡೆಯಿತು. ಒಂದು ಹಂತದಲ್ಲಿ 17.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 90 ರನ್‌ಗಳಿಸಿತ್ತು. ಆದಾಗ್ಯೂ, ನಂತರ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಪಂದ್ಯ ಪುನರಾರಂಭವಾದಾಗ, ಬಾಂಗ್ಲಾದೇಶಕ್ಕೆ 29 ಓವರ್‌ಗಳಲ್ಲಿ 165 ರನ್‌ಗಳ ಗುರಿಯನ್ನು ನೀಡಲಾಯಿತು. ಆದಾಗ್ಯೂ, ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 28.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಮಾಡಿತು. ವಿಹಾನ್ ಮಲ್ಹೋತ್ರಾ 4 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಖಿಲನ್ ಪಟೇಲ್ ಕೂಡ 2 ವಿಕೆಟ್ ಪಡೆದರು. ದೀಪೇಶ್ ದೇವೇಂದ್ರನ್, ಹೆನಿಲ್ ಪಟೇಲ್ ಮತ್ತು ಕನಿಷ್ಕ್ ಚೌಹಾಣ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Sat, 17 January 26