ಹೀನಾಯ ಸೋಲು… ಸೋತು ಸುಣ್ಣವಾದ ಟೀಮ್ ಇಂಡಿಯಾ

ಮೌಂಗ್ ಕಾಕ್​ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದೆ. ಮೊದಲ ಮ್ಯಾಚ್​ನಲ್ಲಿ ಪಾಕಿಸ್ತಾನ್ ವಿರುದ್ಧ 4 ವಿಕೆಟ್​ಗಳಿಂದ ಪರಾಜಯಗೊಂಡಿದ್ದ ಟೀಮ್ ಇಂಡಿಯಾ ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡದ ವಿರುದ್ಧ ಕೂಡ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. 

ಹೀನಾಯ ಸೋಲು... ಸೋತು ಸುಣ್ಣವಾದ ಟೀಮ್ ಇಂಡಿಯಾ
Ind Vs Uae
Image Credit source: HKS

Updated on: Oct 31, 2026 | 9:54 AM

ಹಾಂಗ್​ ಕಾಂಗ್​ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಮುಗ್ಗರಿಸಿದೆ. ಈ ಬಾರಿ ಸೋತಿರುವುದು ಯುನೈಟೆಡ್ ಅರಬ್ ಎಮಿರೇಟ್ಸ್​  ತಂಡದ ವಿರುದ್ಧ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಪರಾಜಯಗೊಂಡಿದ್ದ ಭಾರತ ತಂಡ ಇದೀಗ ಯುಎಇ ವಿರುದ್ಧ ಕೂಡ ಸೋಲೊಪ್ಪಿಕೊಂಡಿದೆ.

ಮೌಂಗ್ ಕಾಕ್‌ನ ಮಿಷನ್ ರೋಡ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡದ ನಾಯಕ ಖಾಲಿದ್ ಶಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕನಾಗಿ ಕಣಕ್ಕಿಳಿದ ನಿತೀಶ್ ರಾಣಾ ಕೇವಲ 6 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ರಾಹುಲ್ ತೆವಾಟಿಯಾ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಶಶಾಂಕ್ ಸಿಂಗ್ (1) ಕೂಡ ವಿಕೆಟ್ ಕೈಚೆಲ್ಲಿದರು.

ಇದಾಗ್ಯೂ ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ರಾಹುಲ್ ತ್ರಿಪಾಠಿ 7 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 1 ಫೋರ್​ನೊಂದಿಗೆ 24 ರನ್​ ಚಚ್ಚಿದರು. ಇನ್ನು ನಾಯಕ ಕೃನಾಲ್ ಪಾಂಡ್ಯ 15 ರನ್​ಗಳ ಕೊಡುಗೆ ನೀಡಿದರು.

ಇವರೆಲ್ಲರ ನಡುವೆ ಎಲ್ಲರ ಗಮನ ಸೆಳೆದದ್ದು ಟಿ. ನಟರಾಜನ್. ಟೀಮ್ ಇಂಡಿಯಾ ಪರ ಕೊನೆಯ ಬ್ಯಾಟರ್ ಆಗಿ ಕಣಕ್ಕಿಳಿದ ನಟರಾಜನ್ 14 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ 38 ರನ್ ಬಾರಿಸಿದರು. ಅಂದರೆ ಟೀಮ್ ಇಂಡಿಯಾ ಪರ ಗರಿಷ್ಠ ಸ್ಕೋರ್ ಗಳಿಸಿದ್ದು ನಟರಾಜನ್ (38).

ನಟರಾಜನ್ ಅವರ 38 ರನ್​ಗಳ ಅಮೂಲ್ಯ ಕೊಡುಗೆಯೊಂದಿಗೆ ಟೀಮ್ ಇಂಡಿಯಾ ನಿಗದಿತ 6 ಓವರ್​ಗಳಲ್ಲಿ 94 ರನ್​ಗಳಿಸಿ ಆಲೌಟ್ ಆಯಿತು.

ಅಮೋಘ ಜಯ:

95 ರನ್​ಗಳ ಗುರಿ ಬೆನ್ನತ್ತಿದ ಯುಎಇ ಪರ ಖಾಲಿದ್ ಶಾ ಹಾಗೂ ಅನ್ಶ್ ಟಂಡನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಅಬ್ಬರಿಸಿದ ಈ ಜೋಡಿಯು 2.3 ಓವರ್​ಗಳಲ್ಲಿ ತಂಡದ ಮೊತ್ತವನ್ನು 50 ರ ಗಡಿದಾಟಿಸಿದರು.

ಆ ಬಳಿಕ ಕೂಡ ಸಿಡಿಲಬ್ಬರದ ಮುಂದುವರೆಸಿದ ಖಾಲಿದ್ ಶಾ 14 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ ಅಜೇಯ 52 ರನ್ ಬಾರಿಸಿದರು. ಮತ್ತೊಂದೆಡೆ ಅನ್ಶ್ ಟಂಡನ್ 12 ಎಸೆತಗಳಲ್ಲಿ 5 ಸಿಕ್ಸರ್​ಗಳೊಂದಿಗೆ ಅಜೇಯ 39 ರನ್ ಚಚ್ಚಿದರು. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಯುಎಇ ತಂಡವು ವಿಕೆಟ್ ನಷ್ಟವಿಲ್ಲದೇ 4.2 ಓವರ್​ಗಳಲ್ಲಿ 97 ರನ್ ಬಾರಿಸಿ 6 ವಿಕೆಟ್​ಗಳ ಅಮೋಘ ಜಯ ಸಾಧಿಸಿತು.

ಯುಎಇ ತಂಡ: ಖಾಲಿದ್ ಶಾ (ನಾಯಕ) , ಅನ್ಶ್ ಟಂಡನ್ , ಮುಹಮ್ಮದ್ ಝುಹೈಬ್ , ಮುಹಮ್ಮದ್ ಫಾರೂಕ್ , ಮೊಹಮ್ಮದ್ ಫರಾಝುದ್ದೀನ್ , ಝಾಹಿದ್ ಅಲಿ, ಮರೂಫ್ ಮರ್ಚೆಂಟ್.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ರೋಹಿತ್ ಶರ್ಮಾ ನಾಯಕ?

ಭಾರತ ತಂಡ: ಕೃನಾಲ್ ಪಾಂಡ್ಯ (ನಾಯಕ),  ರಾಹುಲ್ ತ್ರಿಪಾಠಿ (ವಿಕೆಟ್ ಕೀಪರ್) , ನಿತೀಶ್ ರಾಣಾ , ಶಶಾಂಕ್ ಸಿಂಗ್ ,
ರಾಹುಲ್ ತೆವಾಟಿಯಾ , ಟಿ ನಟರಾಜನ್, ಕುಲ್ವಂತ್ ಖೇಜ್ರೋಲಿಯಾ.

Published On - 9:51 am, Sat, 31 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us