ಅಣ್ತಮ್ಮನ ಸಿಡಿಲಬ್ಬರ… ದಾಖಲೆಯ ಮೊತ್ತ ಪೇರಿಸಿದ ಮುಂಬೈ

Vijay Hazare Trophy Elite 2025-26: ವಿಜಯ ಹಝಾರೆ ಟೂರ್ನಿಯಲ್ಲಿ ಸರ್ಫರಾಝ್ ಖಾನ್ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಮುಂಬೈ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 14 ಭರ್ಜರಿ ಸಿಕ್ಸರ್​ಗಳೊಂದಿಗೆ 157 ರನ್​ ಚಚ್ಚಿದ್ದಾರೆ. ಈ ಶತಕದೊಂದಿಗೆ ಮುಂಬೈ ತಂಡವು ಗೋವಾ ವಿರುದ್ಧ ದಾಖಲೆಯ ಮೊತ್ತ ಪೇರಿಸಿದೆ.

ಅಣ್ತಮ್ಮನ ಸಿಡಿಲಬ್ಬರ... ದಾಖಲೆಯ ಮೊತ್ತ ಪೇರಿಸಿದ ಮುಂಬೈ
Sarfaraz Khan And Musheer Khan

Updated on: Dec 31, 2025 | 12:59 PM

ವಿಜಯ ಹಝಾರೆ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಮುಂಬೈ ತಂಡದ ಸರ್ಫರಾಝ್ ಖಾನ್ ಹಾಗೂ ಮುಶೀರ್ ಖಾನ್ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಜೈಪುರದ ಜೈಪುರಿಯ ವಿದ್ಯಾಲಯ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗೋವಾ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಗೋವಾ ತಂಡದ ನಾಯಕ ದೀಪ್​ರಾಜ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡಕ್ಕೆ ಯಶಸ್ವಿ ಜೈಸ್ವಾಲ್ (46) ಉತ್ತಮ ಆರಂಭ ಒದಗಿಸಿದ್ದರು. ಜೈಸ್ವಾಲ್ ತಂಡಕ್ಕೆ ಆಸರೆಯಾಗಿ ನಿಂತ ಮುಶೀರ್ ಖಾನ್ 66 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 60 ರನ್ ಬಾರಿಸಿದರು.

ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಗೋವಾ ಬೌಲರ್​ಗಳ ಬೆಂಡೆತ್ತಿದ ಸರ್ಫರಾಝ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್​ಗಳನ್ನು ಬಾರಿಸಿದರು. ಈ ಮೂಲಕ ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿದರು.

ಶತಕದ ಬಳಿಕ ಕೂಡ ಸಿಡಿಲಬ್ಬರದ ಮುಂದುವರೆಸಿದ ಸರ್ಫರಾಝ್ ಖಾನ್ 14 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ಕೇವಲ 75 ಎಸೆತಗಳಲ್ಲಿ 157 ರನ್​ ಚಚ್ಚಿದರು.

ಇತ್ತ ಸರ್ಫರಾಝ್-ಮುಶೀರ್ ಖಾನ್ ಸಹೋದರರ ಜುಗಲ್​ಬಂಧಿಯೊಂದಿಗೆ 40 ಓವರ್​ಗಳಲ್ಲೇ ಮುಂಬೈ ತಂಡದ ಸ್ಕೋರ್​ 300ರ ಗಡಿದಾಟಿತು. ಆ ಬಳಿಕ ಬಂದ ನಾಯಕ ಶಾರ್ದೂಲ್ ಠಾಕೂರ್ 8 ಎಸೆತಗಳಲ್ಲಿ 27 ರನ್ ಚಚ್ಚಿದರು.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಹಾರ್ದಿಕ್ ತಮೋರೆ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 53 ರನ್ ಬಾರಿಸಿದರು. ಈ ಮೂಲಕ ಮುಂಬೈ ತಂಡವು 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 444 ರನ್ ಕಲೆಹಾಕಿದೆ. ಇದು ವಿಜಯ ಹಝಾರೆ ಟೂರ್ನಿಯಲ್ಲಿ ದಾಖಲಾದ ನಾಲ್ಕನೇ ಗರಿಷ್ಠ ಸ್ಕೋರ್ ಎಂಬುದು ವಿಶೇಷ.

ಮುಂಬೈ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಅಂಗ್​ಕ್ರಿಶ್ ರಘುವಂಶಿ, ಸಿದ್ಧೇಶ್ ಲಾಡ್, ಮುಶೀರ್ ಖಾನ್, ಸರ್ಫರಾಝ್ ಖಾನ್, ಹಾರ್ದಿಕ್ ತಮೋರೆ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ಶಾರ್ದೂಲ್ ಠಾಕೂರ್ (ನಾಯಕ), ತನುಷ್ ಕೋಟ್ಯಾನ್, ಸಿಲ್ವೆಸ್ಟರ್ ಡಿಸೋಝ, ತುಷಾರ್ ದೇಶಪಾಂಡೆ.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ 3 ತಂಡಗಳು ಪ್ರಕಟ

ಗೋವಾ (ಪ್ಲೇಯಿಂಗ್ XI): ಸ್ನೇಹಲ್ ಕೌತಾಂಕರ್, ಕಶ್ಯಪ್ ಬಖಾಲೆ, ಅಭಿನವ್ ತೇಜ್ರಾನಾ, ಸುಯಶ್ ಪ್ರಭುದೇಸಾಯಿ, ಲಲಿತ್ ಯಾದವ್, ದರ್ಶನ್ ಮಿಸಾಲ್, ದೀಪರಾಜ್ ಗಾಂವ್ಕರ್ (ನಾಯಕ), ರಾಜಶೇಖರ್ ಹರಿಕಾಂತ್ (ವಿಕೆಟ್ ಕೀಪರ್), ಅರ್ಜುನ್ ತೆಂಡೂಲ್ಕರ್, ಶುಭಂ ತಾರಿ, ವಾಸುಕಿ ಕೌಶಿಕ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us