
ವಿಜಯ್ ಹಜಾರೆ ಟೂರ್ನಿಯ (Vijay Hazare Trophy 2021) ಎರಡನೇ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ವಿರುದ್ದ ತಮಿಳುನಾಡು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ತಮಿಳುನಾಡು ತಂಡ ಸೆಮಿಫೈನಲ್ಗೇರಿದೆ. ಇತ್ತ ನಿರ್ಣಾಯಕ ಹಂತದಲ್ಲಿ ಮುಗ್ಗರಿಸುವ ಮೂಲಕ ಕರ್ನಾಟಕ ತಂಡ ವಿಜಯ್ ಹಜಾರೆ ಟೂರ್ನಿಯಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡರು. ಆದರೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ತಮಿಳುನಾಡು ಭರ್ಜರಿ ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರ ಎನ್ ಜಗದೀಸನ್ (102) ಆಕರ್ಷಕ ಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಇನ್ನೊಂದೆಡೆ ಯುವ ಆಟಗಾರ ಸಾಯಿ ಕಿಶೋರ್ (61) ಕೂಡ ಅರ್ಧಶತಕ ಬಾರಿಸಿ ಜಗದೀಸನ್ಗೆ ಸಾಥ್ ನೀಡಿದರು.
ಜಗದೀಸನ್ ಹಾಗೂ ಸಾಯಿ ಕಿಶೋರ್ ಅವರ ಅತ್ಯುತ್ತಮ ಜೊತೆಯಾಟದ ಪರಿಣಾಮ ತಮಿಳುನಾಡು ತಂಡವು 35 ಓವರ್ಗಳಲ್ಲಿ 220 ರನ್ಗಳ ಗಡಿದಾಟಿತು. ಈ ಹಂತದಲ್ಲಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಕೂಡ 37 ಎಸೆತಗಳಲ್ಲಿ 44 ರನ್ ಬಾರಿಸಿದರು. 45 ಓವರ್ ವೇಳೆ 290 ರ ಗಡಿ ತಲುಪಿದ್ದ ತಮಿಳುನಾಡು ಮೊತ್ತವನ್ನು 350 ರ ಗಡಿದಾಟಿಸಿದ್ದು ಶಾರೂಖ್ ಖಾನ್.
ಕರ್ನಾಟಕ ಬೌಲರುಗಳ ಮುಂದೆ ಪರಾಕ್ರಮ ಮೆರೆದ ಶಾರೂಖ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. 202 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಶಾರೂಖ್ ಬರೋಬ್ಬರಿ 6 ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಯುವ ದಾಂಡಿಗನ ಬ್ಯಾಟ್‌ನಿಂದ 7 ಫೋರ್ಗಳು ಕೂಡ ಮೂಡಿ ಬಂದಿತ್ತು. 44ನೇ ಓವರ್ ವೇಳೆ 14 ಎಸೆತಗಳಲ್ಲಿ 17 ರನ್ ಗಳಿಸಿದ್ದ ಶಾರೂಖ್ ಆ ಬಳಿಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದು ವಿಶೇಷ. ಈ ಮೂಲಕ ತಮಿಳುನಾಡು ಕೊನೆಯ 24 ಎಸೆತಗಳಲ್ಲಿ 64 ರನ್ ಗಳಿಸಿತು. ಈ 64 ರನ್ಗಳ ಪೈಕಿ 59 ರನ್‌ಗಳು ಶಾರುಖ್ ಖಾನ್ ಅವರ ಬ್ಯಾಟ್‌ನಿಂದ ಮೂಡಿಬಂದಿದ್ದವು.
ಅದರಂತೆ ಕೇವಲ 39 ಎಸೆತಗಳಲ್ಲಿ 79 ರನ್ ಸಿಡಿಸುವ ಮೂಲಕ 300ರ ಅಸುಪಾಸಿನಲ್ಲಿರಬೇಕಾದ ಸ್ಕೋರ್ ಅನ್ನು ಅಂತಿಮ ಓವರ್ಗಳ ವೇಳೆಗೆ ಶಾರೂಖ್ ಖಾನ್ 350 ರ ಗಡಿದಾಟಿಸಿದರು. ಶಾರೂಖ್ರ ಅಜೇಯ 79 ರನ್ಗಳ ನೆರವಿನಿಂದ ತಮಿಳುನಾಡು ತಂಡವು ಕರ್ನಾಟಕ ವಿರುದ್ದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಕಲೆಹಾಕಿತು.
355 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು 24 ರನ್ಗಳಿಸಿ ರೋಹನ್ ಕದಮ್ ಕೂಡ ಔಟಾದರು. ಇದರ ಬೆನ್ನಲ್ಲೇ ಸಿದ್ದಾರ್ಥ್ (29) ಹಾಗೂ ಮನೀಷ್ ಪಾಂಡೆ (9) ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ ಅಭಿನವ್ ಮನೋಹರ್ ಹಾಗೂ ಶರತ್ ಒಂದಷ್ಟು ಹೊತ್ತು ಕ್ರೀಸ್ ಕಚ್ಚಿ ನಿಂತರು. ಇದಾಗ್ಯೂ 34 ರನ್ಗಳಿಸಿ ಮನೋಹರ್ ಹೊರ ನಡೆದರೆ ಇದರ ಬೆನ್ನಲ್ಲೇ ಶರತ್ (43) ಕೂಡ ಔಟಾದರು.
ಆ ಬಳಿಕ ಪ್ರವೀಣ್ ದುಬೆ 26 ರನ್ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರರಿಂದ ಎರಡಂಕಿ ಮೂಡಿ ಬಂದಿರಲಿಲ್ಲ. ಪರಿಣಾಮ 39 ಓವರ್ಗಳಲ್ಲಿ ಕರ್ನಾಟಕ ತಂಡವು 203 ರನ್ಗಳಿ ಸರ್ವಪತನ ಕಂಡಿತು. ಇದರೊಂದಿಗೆ ತಮಿಳುನಾಡು ತಂಡವು 151 ರನ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿತು. ತಮಿಳುನಾಡು ಪರ ಸಿಲಂಬರಸನ್ 4 ವಿಕೆಟ್ ಕಬಳಿಸಿದರೆ, ವಾಷಿಂಗ್ಟನ್ ಸುಂದರ್ 3 ವಿಕೆಟ್ ಪಡೆದರು.
ಇದನ್ನೂ ಓದಿ: PKL 2021: ಪ್ರೋ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್ ತಂಡದ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: IPL 2022: ಬರೋಬ್ಬರಿ 13 ನಾಯಕರನ್ನು ಬದಲಿಸಿದ ಐಪಿಎಲ್ ತಂಡ ಯಾವುದು ಗೊತ್ತಾ?
ಇದನ್ನೂ ಓದಿ: India vs south africa: ಟೀಮ್ ಇಂಡಿಯಾದಲ್ಲಿ ದ್ರಾವಿಡ್ ಇರುವುದೇ ದಕ್ಷಿಣ ಆಫ್ರಿಕಾದ ದೊಡ್ಡ ಚಿಂತೆ
(Vijay Hazare Trophy 2021-22 :Karnataka lost againist Tamil Nadu)
Published On - 4:37 pm, Tue, 21 December 21