Vijay Hazare Trophy 2021: ವಿಜೆಡಿ ನಿಯಮದ ಮೂಲಕ ಬರೋಡಾ ವಿರುದ್ದ ಗೆದ್ದು ಬೀಗಿದ ಕರ್ನಾಟಕ

Vijay Hazare Trophy 2021: ವಿಜೆಡಿ ನಿಯಮದ ಮೂಲಕ ಬರೋಡಾ ವಿರುದ್ದ ಗೆದ್ದು ಬೀಗಿದ ಕರ್ನಾಟಕ
Karnataka team

Vijay Hazare Trophy 2021-22: ಕರ್ನಾಟಕ ಪರ ಕೆಸಿ ಕಾರ್ಯಪ್ಪ 10 ಓವರ್​ನಲ್ಲಿ ಕೇವಲ 28 ರನ್​ ನೀಡಿ 3 ವಿಕೆಟ್ ಪಡೆದರೆ, ವಿ. ವೈಶಾಖ್ 3 ವಿಕೆಟ್ ಕಬಳಿಸಿ ಮಿಂಚಿದರು. ಹಾಗೆಯೇ ಪ್ರವೀಣ್ ದುಬೆ 2 ವಿಕೆಟ್ ಪಡೆದು ಗಮನ ಸೆಳೆದರು.

TV9kannada Web Team

| Edited By: Zahir PY

Dec 12, 2021 | 5:25 PM

ವಿಜಯ್ ಹಜಾರೆ ಟೂರ್ನಿಯಲ್ಲಿನ ನಾಲ್ಕನೇ ಪಂದ್ಯದಲ್ಲೂ ಕರ್ನಾಟಕ ಜಯ ಸಾಧಿಸಿದೆ. ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆದ ಬರೋಡಾ ವಿರುದ್ದದ ಪಂದ್ಯದಲ್ಲಿ ಕರ್ನಾಟಕ ತಂಡವು 6 ವಿಕೆಟ್​ಗಳ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಟಕ ನಾಯಕ ಮನೀಷ್ ಪಾಂಡೆ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಉತ್ತಮ ದಾಳಿ ಸಂಘಟಿಸಿದ ಕರ್ನಾಟಕ ತಂಡವು ಆರಂಭದಲ್ಲೇ ಬರೋಡಾ ರನ್​ ಗತಿಯನ್ನು ನಿಯಂತ್ರಿಸಿದರು.

ಅದರಲ್ಲೂ ವಿ. ವೈಶಾಖ್ ಅವರ ವೇಗಕ್ಕೆ ಹಾಗೂ ಕೆಸಿ ಕಾರ್ಯಪ್ಪ ಅವರ ಸ್ಪಿನ್ ಮೋಡಿ ಮುಂದೆ ಬರೋಡಾ ಬ್ಯಾಟರ್​ಗಳು ಪರದಾಡಿದರು. ಅದರಂತೆ 48.3 ಓವರ್​ನಲ್ಲಿ ಬರೋಡಾ ತಂಡವು ಕೇವಲ 176 ರನ್​ಗಳಿಗೆ ಸರ್ವಪತನ ಕಂಡಿತು. ಕರ್ನಾಟಕ ಪರ ಕೆಸಿ ಕಾರ್ಯಪ್ಪ 10 ಓವರ್​ನಲ್ಲಿ ಕೇವಲ 28 ರನ್​ ನೀಡಿ 3 ವಿಕೆಟ್ ಪಡೆದರೆ, ವಿ. ವೈಶಾಖ್ 3 ವಿಕೆಟ್ ಕಬಳಿಸಿ ಮಿಂಚಿದರು. ಹಾಗೆಯೇ ಪ್ರವೀಣ್ ದುಬೆ 2 ವಿಕೆಟ್ ಪಡೆದು ಗಮನ ಸೆಳೆದರು.

ಇನ್ನು 177 ರನ್​ಗಳ ಸಾಧಾರಣ ಸವಾಲು ಬೆನ್ನತ್ತಿದ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ರೋಹನ್ ಕದಮ್ ಕೇವಲ 14 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ರವಿಕುಮಾರ್ ಸಮರ್ಥ್ 35 ರನ್ ಬಾರಿಸಿದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ಆರಂಭಿಕರಿಬ್ಬರೂ ಔಟಾದ ಬೆನ್ನಲ್ಲೇ ಮನೀಷ್ ಪಾಂಡೆ (19) ಹಾಗೂ ಕರುಣ್ ನಾಯರ್ (0) ರನೌಟ್ ಆಗಿ ಹೊರನಡೆದರು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಕೃಷ್ಣಮೂರ್ತಿ ಸಿದ್ಧಾರ್ಥ್ ತಂಡಕ್ಕೆ ಆಸರೆಯಾದರು. ಶ್ರೀನಿವಾಸ್ ಶರತ್ ಜೊತೆಗೂಡಿ ತಂಡವನ್ನು ಆಘಾತದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.

ತಂಡದ ಮೊತ್ತ 4 ವಿಕೆಟ್ ನಷ್ಟಕ್ಕೆ 150 ರನ್​ ಆಗಿದ್ದ ವೇಳೆ ಮಳೆಯಿಂದಾಗಿ ಅಡಚಣೆಯುಂಟಾಯಿತು. ಈ ಹಂತದಲ್ಲಿ ಕರ್ನಾಟಕ ತಂಡಕ್ಕೆ 62 ಎಸೆತಗಳಲ್ಲಿ 27 ರನ್​ಗಳ ಅವಶ್ಯಕತೆಯಿತ್ತು. ಆದರೆ ಮಳೆ ನಿಲ್ಲದ ಕಾರಣ ಅಂತಿಮವಾಗಿ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವು 6 ವಿಕೆಟ್​ಗಳ ಜಯ ಸಾಧಿಸಿತು. ಕರ್ನಾಟಕ ಪರ ಸಿದ್ದಾರ್ಥ್ ಅಜೇಯ 46 ರನ್​ಗಳಿಸಿದರೆ, ಶರತ್ 21 ರನ್​ಗಳಿಸಿ ಅಜೇಯರಾಗಿ ಉಳಿದರು.

ಏನಿದು ವಿಜೆಡಿ ನಿಯಮ?

ಕ್ರಿಕೆಟ್​ನಲ್ಲಿ ಡೆಕ್​ವರ್ಥ್ ಲೂಯಿಸ್ ನಿಯಮದಂತೆ ಇದೀಗ ವಿ. ಜಯದೇವನ್ (ವಿಜೆಡಿ) ಸೂತ್ರಗಳನ್ನು ಬಳಸಲಾಗುತ್ತದೆ. ಅಂದರೆ ಈ ಹಿಂದಿನ ಡೆಕ್​ವರ್ಥ್ ಲೂಯಿಸ್ ನಿಯಮಕ್ಕಿಂತ, ವಿಜೆಡಿ ನಿಯಮವು ಫಲಿತಾಂಶ ನಿರ್ಧಾರದಲ್ಲಿ ಉತ್ತಮ ವಿಧಾನವಾಗಿದ್ದು, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್​ ಪಂದ್ಯಗಳಿಗೆ ಅಡಚಣೆಯಾದರೆ ಫಲಿತಾಂಶಗಳ ನಿರ್ಧಾರಗಳಲ್ಲಿ ವಿಜೆಡಿ ನಿಯಮವನ್ನು ಹೆಚ್ಚಾಗಿ ಬಳಸಲಾಗುತ್ತಿದೆ.

ಇದನ್ನೂ ಓದಿ: World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

ಇದನ್ನೂ ಓದಿ: IPL 20222: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

ಇದನ್ನೂ ಓದಿ: Virat Kohli: ಭಾರತ ತಂಡ ಕಂಡ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ…ಆದರೂ

Follow us on

Most Read Stories

Click on your DTH Provider to Add TV9 Kannada