VHT 2025-26: ತಮಿಳುನಾಡು ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯ ದಾಖಲಿಸಿದ ಕರ್ನಾಟಕ
Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 281 ರನ್ ಗಳಿಸಿತು. ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರು. ಕರ್ನಾಟಕ ತಂಡದ ನಾಯಕ ಮಯಾಂಕ್, ಶ್ರೀಜಿತ್, ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕದ ನೆರವಿನಿಂದ 17 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿ, ಸತತ ಮೂರನೇ ಜಯ ಸಾಧಿಸಿತು.

ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ತನ್ನ ಮೂರನೇ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಿದ್ದ ಕರ್ನಾಟಕ ತಂಡ (Tamil Nadu vs Karnataka) ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಅಹಮದಾಬಾದ್ನಲ್ಲಿರುವ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 50ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 281 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇದು ಟೂರ್ನಿಯಲ್ಲಿ ಕರ್ನಾಟಕ ತಂಡದ 3ನೇ ಜಯವಾಗಿದ್ದು, ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲೂ ಕರ್ನಾಟಕ ಜಯಭೇರಿ ಬಾರಿಸಿತ್ತು.
ತಮಿಳುನಾಡಿಗೆ ನಾಯಕನ ಆಸರೆ
ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ಪರ ನಾಯಕ ಎನ್ ಜಗದೀಸನ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಜಗದೀಸನ್ 67 ರನ್ಗಳ ಇನ್ನಿಂಗ್ಸ್ ಆಡಿದರೆ, ನಾಯಕನಿಗೆ ಸಾಥ್ ನೀಡಿದ ಪ್ರದೋಷ್ ಪಾಲ್ ಕೂಡ 57 ರನ್ಗಳ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಆಟದಿಂದಾಗಿ ತಂಡದ ಮೊತ್ತ 100 ರನ್ಗಳ ಗಡಿ ದಾಟಿತು.
4 ವಿಕೆಟ್ ಉರುಳಿಸಿದ ಅಭಿಲಾಶ್
ಉಳಿದಂತೆ 6 ನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಅಲಿ 31 ರನ್ಗಳ ಇನ್ನಿಂಗ್ಸ್ ಆಡಿದರೆ, ಸಾಯಿ ಕಿಶೋರ್ ಕೂಡ 38 ರನ್ಗಳ ಕಾಣಿಕೆ ನೀಡಿದರು. ಇಂದ್ರಜಿತ್ 28 ರನ್ಗಳಿಗೆ ಸುಸ್ತಾದರೆ, ಆರಂಭಿಕ ಅಥೀಶ್ ಇನ್ನಿಂಗ್ಸ್ 14 ರನ್ಗಳಿಗೆ ಅಂತ್ಯವಾಯಿತು. ಹೀಗಾಗಿ ತಂಡ 49.5 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರೆ, ವಿದ್ಯಾದರ್ ಪಾಟೀಲ್ ಹಾಗೂ ಶ್ರೇಯಸ್ ಆಚಾರ್ ತಲಾ 2 ವಿಕೆಟ್ ಪಡೆದರು.
ಮಯಾಂಕ್ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೂ ಸಾಧಾರಣ ಆರಂಭ ಸಿಕ್ಕಿತು. ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಉತ್ತಮ ಆರಂಭ ಪಡೆದುಕೊಂಡರು. ಆದಾಗ್ಯೂ ಪಡಿಕ್ಕಲ್ ಇನ್ನಿಂಗ್ಸ್ 22 ರನ್ಗಳಿಗೆ ಅಂತ್ಯವಾಯಿತು. ಅನುಭವಿ ಕರುಣ್ ಕೂಡ 17 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸ್ಮರಣ್ ಆಟವೂ 15 ರನ್ಗಳಿಗೆ ಅಂತ್ಯವಾಯಿತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ನಾಯಕ ಮಯಾಂಕ್ 58 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು ಒತ್ತಡದಿಂದ ಹೊರತೆಗೆದರು.
ಶ್ರೀಜಿತ್, ಶ್ರೇಯಸ್ ಜೊತೆಯಾಟ
ನಾಯಕನ ಬಳಿಕ ಜೊತೆಯಾದ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಶ್ರೀಜಿತ್ 77 ರನ್ಗಳ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಗೋಪಾಲ್ 55 ರನ್ಗಳ ಕಾಣಿಕೆ ನೀಡಿದರು. ಉಳಿದ ಕೆಲಸ ಮಾಡಿದ ಅಭಿನವ್ ಮನೋಹರ್ ಅಜೇಯ 20 ರನ್ ಹಾಗೂ ವಿದ್ಯಾದರ್ ಅಜೇಯ 17 ರನ್ ಬಾರಿಸಿ ತಂಡವನ್ನು ಸತತ ಮೂರನೇ ಗೆಲುವಿನತ್ತ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Mon, 29 December 25
