Virat Kohli: ವಿರಾಟ್ ಕೊಹ್ಲಿಯ 1 ಶತಕ, 11 ದಾಖಲೆಗಳು ಉಡೀಸ್!
Virat Kohli Records: ದಾಖಲೆಗಳು ಇರುವುದು ಮುರಿಯುವುದಕ್ಕೇ ಎಂಬ ಮಾತಿದೆ. ಆದರೆ ಆ ದಾಖಲೆಗಳನ್ನು ಬರೆಯುವುದೇ ವಿರಾಟ್ ಕೊಹ್ಲಿ! ಮುರಿಯವುದು ಕೂಡ ವಿರಾಟ್ ಕೊಹ್ಲಿ. ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ಸಾಗಿರುವ ಕಿಂಗ್ ಕೊಹ್ಲಿ ಒಂದೇ ಪಂದ್ಯದ ಮೂಲಕ 11 ರೆಕಾರ್ಡ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧದ ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಅತಿ ಹೆಚ್ಚು ಐಪಿಎಲ್ ಶತಕಗಳು: ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದ 9ನೇ ಶತಕ ಪೂರೈಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಜೋಸ್ ಬಟ್ಲರ್ (7) ಮತ್ತು ಕ್ರಿಸ್ ಗೇಲ್ (6) ನಂತರದ ಸ್ಥಾನಗಳಲ್ಲಿದ್ದಾರೆ.
14,000 ರನ್: ಟಿ20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಗಡಿಯನ್ನು ದಾಟಿದ ವಿಶ್ವದ 6ನೇ ಮತ್ತು ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಿಶ್ವ ದಾಖಲೆ: ಕೇವಲ 409 ಇನ್ನಿಂಗ್ಸ್‌ಗಳಲ್ಲಿ 14 ಸಾವಿರ ರನ್ ಪೂರೈಸಿ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (423 ಇನ್ನಿಂಗ್ಸ್) ಹೆಸರಿನಲ್ಲಿತ್ತು.
ಐಪಿಎಲ್ ಪಂದ್ಯಗಳ ದಾಖಲೆ: ಇದು ವಿರಾಟ್ ಕೊಹ್ಲಿ ಆಡಿದ 279ನೇ ಐಪಿಎಲ್ ಪಂದ್ಯವಾಗಿದ್ದು, ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ (ತಲಾ 278 ಪಂದ್ಯ) ಅವರ ದಾಖಲೆಯನ್ನು ಮೀರಿ ಅತಿ ಹೆಚ್ಚು ಐಪಿಎಲ್ ಪಂದ್ಯ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.
400+ ರನ್ಸ್: ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ 12 ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ.
ಪಂದ್ಯ ಶ್ರೇಷ್ಠ ದಾಖಲೆ: ಐಪಿಎಲ್‌ನಲ್ಲಿ ತಮ್ಮ 21ನೇ ಪಂದ್ಯ ಶ್ರೇಷ್ಠ (POTM) ಪ್ರಶಸ್ತಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ.
ಚೇಸ್ ಮಾಸ್ಟರ್: ಐಪಿಎಲ್‌ನ ಸೆಕೆಂಡ್ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 3ನೇ ಶತಕ ಇದಾಗಿದ್ದು, ಈ ಮೂಲಕ ಜೋಸ್ ಬಟ್ಲರ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.
10 ಟಿ20 ಶತಕ: ಒಟ್ಟಾರೆ ಟಿ20 ಮಾದರಿಯಲ್ಲಿ ಇದು ವಿರಾಟ್ ಕೊಹ್ಲಿಯ 10 ಸೆಂಚುರಿ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡಂಕಿ ಸೆಂಚುರಿ ಸಿಡಿಸಿದ ಏಕೈಕ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಅತಿ ಹೆಚ್ಚು 50+ ಸ್ಕೋರ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಐಪಿಎಲ್‌ನಲ್ಲಿ 9ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿ ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಗರಿಷ್ಠ ವೈಯಕ್ತಿಕ ಸ್ಕೋರ್: ಈ ಪಂದ್ಯದಲ್ಲಿ ಅಜೇಯ 105 ರನ್ ಬಾರಿಸಿ ರಾಯ್‌ಪುರದ ಮೈದಾನದಲ್ಲಿ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಡಕ್ ಟು ಸೆಂಚುರಿ: ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ (0) ಔಟಾದ ಬೆನ್ನಲ್ಲೇ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿದ ಐಪಿಎಲ್‌ನ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ಮುಡಿಗೇರಿಸಿಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರೂ, ಕಂಬ್ಯಾಕ್ ಮಾಡಿ ಒಂದೇ ಇನ್ನಿಂಗ್ಸ್‌ನಲ್ಲಿ ವಿಶ್ವದ ಘಟಾನುಘಟಿ ದಾಖಲೆಗಳನ್ನು ಧೂಳೀಪಟ ಮಾಡಿರುವುದು ‘ಕಿಂಗ್ ಕೊಹ್ಲಿ’ ಸಾಮರ್ಥ್ಯಕ್ಕೆ ಸಾಕ್ಷಿ. ಈ ಐತಿಹಾಸಿಕ ಶತಕ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ.