Virat Kohli: ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿ: ಕಾರಣವೇನು ಗೊತ್ತಾ?
IPL 2021 Rcb: ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2021) ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ (RCB) ಕೆಕೆಆರ್ (KKR) ವಿರುದ್ದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟ ಮೂಡಿಬಂದಿತು. ಅದರ ಜೊತೆಗೆ ಪಂದ್ಯವು ಹೈಡ್ರಾಮಗಳಿಗೂ ಸಾಕ್ಷಿಯಾಯಿತು. ಅಂಪೈರ್ ನೀಡಿದ ತೀರ್ಪುಗಳ ಬಗ್ಗೆ ಕೊನೆಯ ಬಾರಿ ನಾಯಕನಾಗಿ ಮೈದಾನದಲ್ಲಿದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಂಪೈರ್ ವಿರುದ್ದ ಕೆಂಡಕಾರಿದ ಕೊಹ್ಲಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಕೊಹ್ಲಿ ಕುಪಿತಗೊಳ್ಳಲು ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.
ಕೊಹ್ಲಿ ಮೈದಾನದಲ್ಲೇ ಕೋಪಗೊಳ್ಳಲು ಮುಖ್ಯ ಕಾರಣ ಫೀಲ್ಡ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿರೇಂದರ್ ಶರ್ಮಾ. ಅವರು ನೀಡುತ್ತಿದ್ದ ತೀರ್ಪುಗಳ ವಿರುದ್ದ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಏಕೆಂದರೆ ನಿರ್ಣಾಯಕ ಪಂದ್ಯದಲ್ಲಿ ವಿರೇಂದರ್ ಶರ್ಮಾ ನೀಡಿದ ಮೂರು ತೀರ್ಪುಗಳು ತಪ್ಪಾಗಿತ್ತು. ಆ ಮೂರು ತೀರ್ಪುಗಳು ಆರ್ಸಿಬಿ ವಿರುದ್ದವೇ ಆಗಿತ್ತು ಎಂಬುದು ವಿಶೇಷ.
ಆರ್ಸಿಬಿ ಬ್ಯಾಟಿಂಗ್ ವೇಳೆ ಎರಡು ಬಾರಿ ವಿರೇಂದರ್ ಶರ್ಮಾ ತಪ್ಪು ತೀರ್ಪು ನೀಡಿದ್ದರು. ಮೊದಲು ಶಹಬಾಜ್ ಅಹ್ಮದ್ ಮತ್ತು ಹರ್ಷಲ್ ಪಟೇಲ್ ಅವರನ್ನೂ ಎಲ್ಬಿಡ್ಲ್ಯೂ ಔಟೆಂದು ಬೆರಳೆತ್ತಿದ್ದರು. ಆದರೆ ಈ ವೇಳೆ ಆಟಗಾರರು ಡಿಆರ್ಎಸ್ ಮೊರೆ ಹೋಗಿದ್ದರು. 3ನೇ ಅಂಪೈರ್ ಪರಿಶೀಲನೆ ವೇಳೆ ಫೀಲ್ಡ್ ಅಂಪೈರ್ ತೀರ್ಪು ತಪ್ಪು ಎಂಬುದು ಸ್ಪಷ್ಟವಾಗಿತ್ತು. ಆ ಬಳಿಕ ವಿರೇಂದರ್ ಶರ್ಮಾ ತಮ್ಮ ತೀರ್ಪನ್ನು ಬದಲಿಸಿದ್ದರು.
ಇದಾದ ಬಳಿಕ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಕೆಕೆಆರ್ ಇನಿಂಗ್ಸ್ ವೇಳೆ ಕೂಡ ವಿರೇಂದರ್ ಶರ್ಮಾ ತಪ್ಪು ನಿರ್ಣಯ ಪುನಾವರ್ತನೆ ಆಗಿತ್ತು. ಚಹಲ್ ಬೌಲಿಂಗ್ನಲ್ಲಿ ಕೆಕೆಆರ್ ಬ್ಯಾಟರ್ ರಾಹುಲ್ ತ್ರಿಪಾಠಿ ಎಲ್ಬಿಡಬ್ಲ್ಯೂ ಆಗಿದ್ದರು. ಚಹಲ್ ಸೇರಿದಂತೆ ಆರ್ಸಿಬಿ ಆಟಗಾರರು ಅಂಪೈರ್ಗೆ ಬಲವಾದ ಮನವಿ ಮಾಡಿದರು. ಆದರೆ, ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು. ಕೊನೆಗೆ ಆರ್ಸಿಬಿ ನಾಯಕ ಡಿಆರ್ಎಸ್ ಹೋದರು. 3ನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.
ಮೊದಲೇ ಎರಡು ತಪ್ಪು ಮಾಡಿದ್ದ ವಿರೇಂದರ್ ಶರ್ಮಾ ಬಗ್ಗೆ ಕೊಹ್ಲಿ ಕುಪಿತಗೊಂಡಿದ್ದರು. ಆದರೆ ಆರ್ಸಿಬಿ ಮನವಿಯನ್ನು ಪುರಸ್ಕರಿಸದೇ ನಾಟೌಟ್ ಎಂದಿದ್ದು ಕೊಹ್ಲಿಯ ಕೋಪವನ್ನು ನೆತ್ತಿಗೇರಿಸಿತ್ತು. ಅದರಲ್ಲೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅಂಪೈರ್ ನೀಡುತ್ತಿದ್ದ ತಪ್ಪು ನಿರ್ಧಾರ ಕ್ಯಾಪ್ಟನ್ ಕೊಹ್ಲಿಯನ್ನು ಇನ್ನಿಲ್ಲದಂತೆ ಕೆರಳಿಸಿತ್ತು. 3 ಬಾರಿ ಕೂಡ ಆರ್ಸಿಬಿ ವಿರುದ್ದ ತಪ್ಪು ತೀರ್ಪು ನೀಡಿರುವ ಬಗ್ಗೆ ಕೊಹ್ಲಿ ಮೈದಾನದಲ್ಲೇ ಅಂಪೈರ್ ವಿರೇಂದರ್ ಶರ್ಮಾಗೆ ಬೆಂಡೆತ್ತಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: KL Rahul: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ 7 ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ:ಟಿ20 ವಿಶ್ವಕಪ್ ಪಾಕ್ ತಂಡದಲ್ಲಿ ಪ್ರಮುಖ ಬದಲಾವಣೆ: 39 ವರ್ಷದ ಆಲ್ರೌಂಡರ್ ಆಯ್ಕೆ
ಇದನ್ನೂ ಓದಿ: IPL 2021: ಅಚ್ಚರಿಯಾದರೂ ಇದು ಸತ್ಯ: 1 ವಿಕೆಟ್ಗೆ 1 ಕೋಟಿ ಪಡೆದ ಕ್ರಿಸ್ ಮೋರಿಸ್..!
(Virat Kohli involved in heated exchange with umpire during RCB vs KKR match)