VHT ಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಪಟ್ಟಿ ಇಲ್ಲಿದೆ
Vijay Hazare Trophy 2026: ವಿಜಯ ಹಝಾರೆ ಟೂರ್ನಿ ಎಂದರೆ ದೇಶೀಯ ಏಕದಿನ ಪಂದ್ಯಾವಳಿ. ಈ ಟೂರ್ನಿಯಲ್ಲಿ ಬರೋಬ್ಬರಿ 32 ತಂಡಗಳು ಕಣಕ್ಕಿಳಿಯುತ್ತವೆ. ಡಿಸೆಂಬರ್ 24 ರಿಂದ ಶುರುವಾಗಿರುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಕೂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅದರಲ್ಲೂ ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಕೂಡ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ವಿಜಯ ಹಝಾರೆ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಕೆಲ ಆಟಗಾರರು ಜನವರಿಯಲ್ಲಿ ನಡೆಯಲಿರುವ ದ್ವಿತೀಯ ಸುತ್ತಿನಲ್ಲೂ ಕಣಕ್ಕಿಳಿಯಲಿದ್ದಾರೆ. ಅದರಲ್ಲೂ ಭಾರತ ಏಕದಿನ ತಂಡದ ಆಟಗಾರರು ಜನವರಿ ಮೊದಲ ವಾರದಲ್ಲಿ ದೇಶೀಯ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ.
ಅದರಂತೆ ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿರುವ ಶುಭ್ಮನ್ ಗಿಲ್ ಜನವರಿ 3 ಮತ್ತು 6 ರಂದು ಪಂಜಾಬ್ ಪರ ಪಂದ್ಯಗಳನ್ನು ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಶುಭ್ಮನ್ ಗಿಲ್ ಸಿಕ್ಕಿಂ ಹಾಗೂ ಗೋವಾ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದಾರೆ.
ಜನವರಿ 6 ಮತ್ತು 8 ರಂದು ನಡೆಯಲಿರುವ ಪಂದ್ಯಗಳಲ್ಲಿ ಸರ್ವಿಸಸ್ ಮತ್ತು ಗುಜರಾತ್ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯುವುದಾಗಿ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್‌ಸಿಎ)ಗೆ ತಿಳಿಸಿದ್ದಾರೆ.
ಕೆಎಲ್ ರಾಹುಲ್ ಜನವರಿ ಮೊದಲ ವಾರದಲ್ಲಿ ಕರ್ನಾಟಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕರ್ನಾಟಕ ತಂಡವುಜನವರಿ 3 ಮತ್ತು 6 ರಂದು ಅಹಮದಾಬಾದ್‌ನಲ್ಲಿ ತ್ರಿಪುರ ಮತ್ತು ರಾಜಸ್ಥಾನ್ ವಿರುದ್ಧ ಕಣಕ್ಕಿಳಿಯಲಿವೆ. ಈ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಏತನ್ಮಧ್ಯೆ, ಯಶಸ್ವಿ ಜೈಸ್ವಾಲ್ ಜೈಪುರ ತಲುಪಿದ್ದಾರೆ. ಅದರಂತೆ ಬುಧವಾರ (ಡಿಸೆಂಬರ್ 31) ಗೋವಾ ವಿರುದ್ಧ ಮುಂಬೈ ಪರ ಕಣಕ್ಕಿಳಿಯುವ ನಿರೀಕ್ಷೆಯಿದೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ತಿಳಿಸಿದೆ.
ಇನ್ನು ಎರಡು ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, ಜನವರಿ 6 ರಂದು ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಆದರೆ ಮುಂಬೈ ಪರ ಮೊದಲೆರಡು ಮ್ಯಾಚ್ಗಳನ್ನಾಡಿದ್ದ ರೋಹಿತ್ ಶರ್ಮಾ ಜನವರಿ ಮೊದಲ ವಾರದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ತಿಳಿದು ಬಂದಿದೆ.
ಈ ಎಲ್ಲಾ ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಆಟಗಾರರು ಭಾರತ ಏಕದಿನ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಂದರೆ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧದ ಸರಣಿಗಾಗಿ ಜನವರಿ 7-8 ರಂದು ಬರೋಡಾದಲ್ಲಿ ಸೇರುವ ನಿರೀಕ್ಷೆಯಿದೆ. ಹೀಗಾಗಿ ಭಾರತ ಏಕದಿನ ತಂಡದಲ್ಲಿರುವ ಆಟಗಾರರು ಜನವರಿ ಮೊದಲ ವಾರದ ಬಳಿಕ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲ.
ಇದನ್ನೂ ಓದಿ: ಟಿ20 ವಿಶ್ವಕಪ್ಗೆ 3 ತಂಡಗಳು ಪ್ರಕಟ
ಜನವರಿ ಮೊದಲ ವಾರದಲ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
- ವಿರಾಟ್ ಕೊಹ್ಲಿ (ದೆಹಲಿ)
- ಕೆಎಲ್ ರಾಹುಲ್ (ಕರ್ನಾಟಕ)
- ಶುಭ್ಮನ್ ಗಿಲ್ (ಪಂಜಾಬ್)
- ಯಶಸ್ವಿ ಜೈಸ್ವಾಲ್ (ಮುಂಬೈ)
- ರವೀಂದ್ರ ಜಡೇಜಾ (ಗುಜರಾತ್)
- ಸೂರ್ಯಕುಮಾರ್ ಯಾದವ್ (ಮುಂಬೈ)
