Virat kohli: 50 ವರ್ಷಗಳ ಬಳಿಕ ಭರ್ಜರಿ ಗೆಲುವು: ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ
India vs England 4th Test: ಈ ಬೃಹತ್ ಗುರಿ ನೋಡಿ ಬಹುತೇಕರು ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಅಂದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಬೌಲರುಗಳ ಸಾಂಘಿಕ ಪ್ರದರ್ಶನ ಮತ್ತೊಮ್ಮೆ ತಂಡವನ್ನು ಗೆಲುವಿನತ್ತ ಕೊಂಡೊಯಿತು.

India vs England 4th Test: ಓವಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಇಂಗ್ಲೆಂಡ್ (England) ತಂಡವನ್ನು ಬಗ್ಗು ಬಡಿದಿದೆ. ಇದರೊಂದಿಗೆ 50 ವರ್ಷಗಳ ಬಳಿಕ ಭಾರತ (India) ತಂಡವು ಓವಲ್ (Oval) ಮೈದಾನದಲ್ಲಿ ಗೆಲುವಿನ ರುಚಿ ನೋಡಿದೆ. ಈ ಮೈದಾನದಲ್ಲಿ ಕೊನೆಯ ಬಾರಿ ಭಾರತ ಗೆದ್ದಿದ್ದು 1971 ರಲ್ಲಿ. ಆ ಬಳಿಕ ಮತ್ಯಾವತ್ತೂ ಇಂಗ್ಲೆಂಡ್ ತಂಡವು ಓವಲ್ನಲ್ಲಿ ಟೀಮ್ ಇಂಡಿಯಾ ವಿರುದ್ದ ಮಂಡಿಯೂರಿರಲಿಲ್ಲ. ಇದೀಗ ಕೊಹ್ಲಿ ಪಡೆ 157 ರನ್ಗಳ ಭರ್ಜರಿ ಜಯ ದಾಖಲಿಸಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಾಲ್ಕನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 191 ರನ್ಗಳಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತ್ತು. ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 290 ರನ್ಗಳಿಸುವ ಮೂಲಕ 99 ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಇನ್ನು ಮೂರನೇ ಹಾಗೂ ನಾಲ್ಕನೇ ದಿನದಾಟದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 466 ರನ್ ಬಾರಿಸಿ ಇಂಗ್ಲೆಂಡ್ಗೆ 368 ರನ್ಗಳ ಗುರಿ ನೀಡಿತು.
ಈ ಬೃಹತ್ ಗುರಿ ನೋಡಿ ಬಹುತೇಕರು ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಅಂದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ಬೌಲರುಗಳ ಸಾಂಘಿಕ ಪ್ರದರ್ಶನ ಮತ್ತೊಮ್ಮೆ ತಂಡವನ್ನು ಗೆಲುವಿನತ್ತ ಕೊಂಡೊಯಿತು. ಲಾರ್ಡ್ಸ್ ಮೈದಾನದ ಗೆಲುವನ್ನು ನೆನಪಿಸುವಂತೆ ಓವಲ್ನಲ್ಲಿ ಬೌಲಿಂಗ್ ದಾಳಿ ನಡೆಸಿದ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಕೇವಲ 210 ರನ್ಗಳಿಗೆ ಆಲೌಟ್ ಮಾಡಿ 157 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಇಂಗ್ಲೆಂಡ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡರು. ಏಕೆಂದರೆ 1986 ರ ಬಳಿಕ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಅಲ್ಲದೆ ಒಟ್ಟಾರೆ ಇಂಗ್ಲೆಂಡ್‌ನಲ್ಲಿ ಮೂರು ಟೆಸ್ಟ್ ಪಂದ್ಯ ಗೆದ್ದ ನಾಯಕ ಎಂಬ ಹೆಗ್ಗಳಿಕೆ ಇದೀಗ ಕೊಹ್ಲಿ ಪಾಲಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ 3 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 2018ರಲ್ಲಿ ಒಂದು ಪಂದ್ಯ ಗೆದ್ದಿದ್ದ ಕೊಹ್ಲಿ ಇದೀಗ 2 ಪಂದ್ಯಗಳ ಗೆಲುವಿನ ಮೂಲಕ ಒಟ್ಟು ಗೆಲುವಿನ ಸಂಖ್ಯೆಯನ್ನು ಮೂರಕ್ಕೇರಿಸಿದ್ದಾರೆ. ಈ ಹಿಂದೆ ಕಪಿಲ್ ದೇವ್ 2 ಟೆಸ್ಟ್ ಗೆದ್ದಿರುವುದು ಶ್ರೇಷ್ಠ ಸಾಧನೆಯಾಗಿತ್ತು. ಇದಲ್ಲದೇ ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಅಜಿತ್ ವಾಡೇಕರ್ ತಲಾ ಒಂದು ಟೆಸ್ಟ್ ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ.
ಇನ್ನು 2007 ರ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಸರಣಿಯಲ್ಲಿ ಸೋಲನುಭವಿಸದೆ ಹಿಂತಿರುಗಲಿದೆ. 2007 ರ ನಂತರ ಆಡಿದ ಕೊನೆಯ ಮೂರು ಸರಣಿಯಲ್ಲಿ ಭಾರತ ತಂಡವನ್ನು ಸೋಲಿಭವಿಸಿತ್ತು. 2007 ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಸೋತಿತ್ತು. 2014 ಧೋನಿ ನಾಯಕತ್ವದಲ್ಲಿ 3-1 ಅಂತರದಿಂದ ಹಾಗೂ 2018 ರಲ್ಲಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಐದು ಪಂದ್ಯಗಳ ಸರಣಿಯನ್ನು 1-4 ಕೈಚೆಲ್ಲಿಕೊಂಡಿತು. ಇದೀಗ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿರುವ ಭಾರತ ಮ್ಯಾಂಚೆಸ್ಟರ್‌ನಲ್ಲಿ ಸೆಪ್ಟೆಂಬರ್ 10 ರಿಂದ ಶುರುವಾಗಲಿರುವ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಸರಣಿ ಗೆಲ್ಲಬಹುದು. ಒಂದು ವೇಳೆ ಸೋತರೂ ಸರಣಿ ಸಮವಾಗಲಿದೆ.
ಇದನ್ನೂ ಓದಿ: IPL 2021: ಈ ಸಲ ಕಪ್ ನಮ್ದೆ ಎಂದ RCB ತಂಡದ ಬಿಗ್ ಫ್ಯಾನ್
ಇದನ್ನೂ ಓದಿ: ಒಂದೇ ಒಂದು ರನ್ ನೀಡಲಿಲ್ಲ: 10 ಓವರ್ ಮೇಡನ್ ಮಾಡಿ ದಾಖಲೆ ಬರೆದ ಸ್ಪಿನ್ನರ್
ಇದನ್ನೂ ಓದಿ: ಮೊಬೈಲ್ ಬಳಕೆದಾರರ ಗಮನಕ್ಕೆ: ಇನ್ಮುಂದೆ ಈ ಫೋನ್ಗಳಲ್ಲಿ ವಾಟ್ಸ್ಆ್ಯಪ್ ಕಾರ್ಯ ನಿರ್ವಹಿಸುವುದಿಲ್ಲ
(Virat kohli Most successful Indian captain in england)
Published On - 10:19 pm, Mon, 6 September 21
