IND vs ENG: ವಿರಾಟ್ ಕೊಹ್ಲಿ vs ಜೇಮ್ಸ್ ಅ್ಯಂಡರ್ಸನ್ ನಡುವೆ ನೇರ ಪೈಪೋಟಿ
Virat Kohli vs James Anderson: ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಜೇಮ್ಸ್ ಅ್ಯಂಡರ್ಸನ್ ಅವರ 710 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ 305 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಅ್ಯಂಡರ್ಸನ್ ವಿರುದ್ಧ ಕೊಹ್ಲಿ 43.57 ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ಜನವರಿ 25 ರಿಂದ ಶುರುವಾಗಲಿರುವ ಈ 5 ಪಂದ್ಯಗಳ ಸರಣಿಯಲ್ಲಿ ರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ವಿರಾಟ್ ಕೊಹ್ಲಿ (Virat Kohli) ಹಾಗೂ ಜೇಮ್ಸ್ ಅ್ಯಂಡರ್ಸನ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ. ಏಕೆಂದರೆ ಟೆಸ್ಟ್ ಕ್ರಿಕೆಟ್ನಲ್ಲಿ ಇಬ್ಬರೂ ಸಮಬಲ ಹೊಂದಿದ್ದಾರೆ. ಇತ್ತ ವಿರಾಟ್ ಕೊಹ್ಲಿ 9000 ಟೆಸ್ಟ್ ರನ್ಗಳ ಹೊಸ್ತಿಲಲ್ಲಿದ್ದರೆ, ಅತ್ತ ಅ್ಯಂಡರ್ಸನ್ 700 ವಿಕೆಟ್ಗಳ ಸನಿಹದಲ್ಲಿದ್ದಾರೆ. ಹೀಗಾಗಿಯೇ ಈ ಬಾರಿಯ ಟೆಸ್ಟ್ ಸರಣಿಯು ವಿರಾಟ್ ಕೊಹ್ಲಿ vs ಜೇಮ್ಸ್ ಅ್ಯಂಡರ್ಸನ್ ಪೈಪೋಟಿಯಾಗಿ ಮಾರ್ಪಡುವ ಸಾಧ್ಯತೆಯಿದೆ.
ಇಬ್ಬರಲ್ಲಿ ಯಾರದ್ದು ಮೇಲುಗೈ?
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಜೇಮ್ಸ್ ಅ್ಯಂಡರ್ಸನ್ ಅವರ 710 ಎಸೆತಗಳನ್ನು ಎದುರಿಸಿದ್ದಾರೆ. ಈ ವೇಳೆ 305 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಅ್ಯಂಡರ್ಸನ್ ವಿರುದ್ಧ ಕೊಹ್ಲಿ 43.57 ರ ಸರಾಸರಿಯಲ್ಲಿ ರನ್ಗಳಿಸಿದ್ದಾರೆ.
ಅತ್ತ ವಿರಾಟ್ ಕೊಹ್ಲಿಯನ್ನು ಒಟ್ಟು 7 ಬಾರಿ ಔಟ್ ಮಾಡುವಲ್ಲಿ ಜೇಮ್ಸ್ ಅ್ಯಂಡರ್ಸನ್ ಕೂಡ ಯಶಸ್ವಿಯಾಗಿದ್ದಾರೆ. ಇಲ್ಲಿ ಮೇಲ್ನೋಟಕ್ಕೆ ಇಬ್ಬರು ಸಮಬಲ ಹೊಂದಿದ್ದಾರೆ ಎಂದೆನಿಸಬಹುದು. ಆದರೆ ಜೇಮ್ಸ್ ಅ್ಯಂಡರ್ಸನ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಇರುವುದು ವಿರಾಟ್ ಕೊಹ್ಲಿ ಹೆಸರಿನಲ್ಲಿ ಎಂಬುದು ಉಲ್ಲೇಖಾರ್ಹ.
ಅಂದರೆ ವಿಶ್ವದ ಅಗ್ರ ಬ್ಯಾಟರ್ಗಳನ್ನು ತಮ್ಮ ವೊಬಲ್-ಸ್ವಿಂಗ್ ಅಸ್ತ್ರದೊಂದಿಗೆ ಕಾಡಿರುವ ಜೇಮ್ಸ್ ಅ್ಯಂಡರ್ಸನ್ ಅವರನ್ನು ವಿರಾಟ್ ಕೊಹ್ಲಿ ಕೆಚ್ಚೆದೆಯಿಂದಲೇ ಎದುರಿಸಿದ್ದಾರೆ. ಹೀಗಾಗಿಯೇ ಜಿಮ್ಮಿ ವಿರುದ್ಧ ಕಿಂಗ್ ಕೊಹ್ಲಿ ಮೇಲುಗೈ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಇದಾಗ್ಯೂ ಈ ಬಾರಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಟೆಸ್ಟ್ ಸರಣಿಗೆ ಉಭಯ ತಂಡಗಳ ಹೀಗಿವೆ:
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.
ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
- ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
- ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
- ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
- ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)