WCL 2025: ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್ ಪಂದ್ಯ ಟೈ: ಬೌಲ್ ಔಟ್ನಲ್ಲಿ ಗೆದ್ದಿದ್ದು ಯಾರು?
World Championship of Legends 2025: ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ರಣರೋಚಕ ಹೋರಾಟ ಕಂಡು ಬಂದಿದೆ. ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ 79 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ಪಂದ್ಯವನ್ನು ಟೈಗೊಳಿಸುವಲ್ಲಿ ಯಶಸ್ವಿಯಾಗಿದೆ.

ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಎಬಿ ಡಿವಿಲಿಯರ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.
ಮಳೆಯಿಂದಾಗಿ ವಿಳಂಬವಾಗಿ ಶುರುವಾದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಕ್ರಿಸ್ ಗೇಲ್ 2 ರನ್ಗಳಿಸಿ ಔಟಾದರೆ, ಡ್ವೇನ್ ಸ್ಮಿತ್ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟಾದರು. ಇದರ ನಡುವೆ ಮತ್ತೆ ಮಳೆ ಬಂದಿದ್ದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು.
ಆ ಬಳಿಕ ಮುಂದುವರೆದ ಮ್ಯಾಚ್ನಲ್ಲಿ ಲಿಂಡ್ಲ್ ಸಿಮನ್ಸ್ 28 ರನ್ ಬಾರಿಸಿದರು. ಹಾಗೆಯೇ ವಿಕೆಟ್ ಕೀಪರ್ ವಾಲ್ಟನ್ ಬ್ಯಾಟ್ನಿಂದ 27 ರನ್ಗಳು ಮೂಡಿಬಂತು. ಈ ಮೂಲಕ ನಿಗದಿತ 11 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡವು 79 ರನ್ ಕಲೆಹಾಕಿತು.
ಇತ್ತ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ತಂಡವು 11 ಓವರ್ಗಳಲ್ಲಿ 81 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಕೂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ರಿಚರ್ಡ್ ಲೆವಿ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಹಾಶಿಮ್ ಆಮ್ಲ 15 ರನ್ಗಳಿಸಿ ಔಟಾದರು. ಇನ್ನು ನಾಯಕ ಎಬಿ ಡಿವಿಲಿಯರ್ಸ್ ಕಲೆಹಾಕಿದ್ದು ಕೇವಲ 3 ರನ್ ಮಾತ್ರ.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೆಪಿ ಡುಮಿನಿ 12 ಎಸೆತಗಳಲ್ಲಿ 25 ರನ್ ಚಚ್ಚಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಸೌತ್ ಆಫ್ರಿಕಾ ತಂಡಕ್ಕೆ ಗೆಲ್ಲಲು 12 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ಫಿಡೆಲ್ ಎಡ್ವರ್ಡ್ಸ್ ಕೇವಲ 11 ರನ್ ಮಾತ್ರ ನೀಡುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾದರು.
ಬೌಲ್ ಔಟ್:
ಪಂದ್ಯವು ಟೈನಲ್ಲಿ ಕೊನೆಗೊಂಡ ಪರಿಣಾಮ ಫಲಿತಾಂಶ ನಿರ್ಣಯಕ್ಕಾಗಿ ಬೌಲ್ ಔಟ್ ಮೊರೆ ಹೋಗಲಾಯಿತು. ಸಾಮಾನ್ಯವಾಗಿ ಟಿ20 ಕ್ರಿಕೆಟ್ನಲ್ಲಿ ಪಂದ್ಯ ಟೈ ಆದರೆ ಸೂಪರ್ ಓವರ್ ಆಡಿಸಲಾಗುತ್ತದೆ. ಈ ಸೂಪರ್ ಓವರ್ ನಿಯಮ ಜಾರಿಗೂ ಬರುವ ಮುನ್ನ ಬೌಲ್ ಔಟ್ ನಿಯಮದ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತಿತ್ತು.
ಪ್ರಸ್ತುತ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಸೂಪರ್ ಓವರ್ ಬದಲಿಗೆ ಹಳೆಯ ಬೌಲ್ ಔಟ್ ನಿಯಮವನ್ನು ಬಳಸಲಾಗುತ್ತಿದೆ. ಅದರಂತೆ ಉಭಯ ತಂಡಗಳ 5 ಬೌಲರ್ಗಳು ಒಂದೊಂದು ಎಸೆತಗಳ ಮೂಲಕ ಎಷ್ಟು ಬೌಲ್ಡ್ ಮಾಡುತ್ತಾರೆ ಎಂಬುದನ್ನು ಆಧರಿಸಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಅದರಂತೆ ನಡೆದ ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಣ ಬೌಲ್ ಔಟ್ನಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಬೌಲರ್ಗಳು ಸಂಪೂರ್ಣ ವಿಫಲರಾದರೆ, ಸೌತ್ ಆಫ್ರಿಕಾ ಚಾಂಪಿಯನ್ಸ್ 2 ಬೌಲ್ಡ್ ಮಾಡಿ ಪಂದ್ಯವನ್ನು ಗೆದ್ದುಕೊಂಡರು.
Bowl-Out Decides SA vs WI Thriller 🍿
You can’t write this drama! After the match ended in a tie, South Africa Champions edge out the Windies Champions 2-0 in a tense bowl-out 🎯#WCL2025 pic.twitter.com/lemLX9R0Ac
— FanCode (@FanCode) July 19, 2025
ವೆಸ್ಟ್ ಇಂಡೀಸ್ ಚಾಂಪಿಯನ್ಸ್ ಪ್ಲೇಯಿಂಗ್ 11: ಡ್ವೇನ್ ಸ್ಮಿತ್ , ಕ್ರಿಸ್ ಗೇಲ್ (ನಾಯಕ) , ಕೀರನ್ ಪೊಲಾರ್ಡ್ , ವಿಲಿಯಂ ಪರ್ಕಿನ್ಸ್ , ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್) , ಲೆಂಡ್ಲ್ ಸಿಮನ್ಸ್ , ಡ್ವೇನ್ ಬ್ರಾವೋ , ಆಶ್ಲೇ ನರ್ಸ್ , ಶೆಲ್ಡನ್ ಕಾಟ್ರೆಲ್ , ಫಿಡೆಲ್ ಎಡ್ವರ್ಡ್ಸ್ , ಸುಲೈಮಾನ್ ಬೆನ್.
ಇದನ್ನೂ ಓದಿ: ಭಲೇ ಬಟ್ಲರ್… ವಿಶ್ವ ದಾಖಲೆ ನಿರ್ಮಿಸಿದ ಜೋಸ್ ಬಟ್ಲರ್
ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ಎಬಿ ಡಿವಿಲಿಯರ್ಸ್ (ನಾಯಕ) , ಹಾಶಿಮ್ ಆಮ್ಲಾ , ಮೊರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್) , ಜೆಜೆ ಸ್ಮಟ್ಸ್ , ಸರೆಲ್ ಎರ್ವೀ , ಕ್ರಿಸ್ ಮೋರಿಸ್ , ಜೀನ್-ಪಾಲ್ ಡುಮಿನಿ , ವೇಯ್ನ್ ಪಾರ್ನೆಲ್ , ಹಾರ್ಡಸ್ ವಿಲ್ಜೋಯೆನ್ , ಡುವಾನ್ನೆ ಒಲಿವಿಯರ್ , ಆರನ್ ಫಾಂಗಿಸೊ.
Published On - 10:54 am, Sun, 20 July 25
