ಕೇವಲ 37 ಎಸೆತಗಳಲ್ಲಿ ಶತಕ: 2 ಎಸೆತಗಳಿಂದ ಎಬಿಡಿ ಕೈತಪ್ಪಿದ ಭರ್ಜರಿ ದಾಖಲೆ!

ಎಬಿಡಿ ಅವರ ಬ್ಯಾಟಿಂಗ್ ಖದರ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಕೇವಲ ಹೆಚ್ಚುವರಿ 2 ಎಸೆತಗಳಿಂದಾಗಿ ಟೂರ್ನಿಯ ಇತಿಹಾಸದ ಸಾರ್ವಕಾಲಿಕ ದಾಖಲೆಯೊಂದು ಅವರ ಕೈತಪ್ಪಿ ಹೋಗಿದೆ!

ಕೇವಲ 37 ಎಸೆತಗಳಲ್ಲಿ ಶತಕ: 2 ಎಸೆತಗಳಿಂದ ಎಬಿಡಿ ಕೈತಪ್ಪಿದ ಭರ್ಜರಿ ದಾಖಲೆ!
Ab De Villiers
Image Credit source: WCL

Updated on: Oct 10, 2026 | 12:52 PM

‘ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರ ಸಿಡಿಲಬ್ಬರ ಇಂದಿಗೂ ಮುಂದುವರಿದಿದೆ. ಈ ಬಾರಿ ಅವರು ಅಬ್ಬರಿಸಿದ್ದು ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ. ಅದು ಸಹ ಕೇವಲ 37 ಎಸೆತಗಳಲ್ಲಿ 11 ಸಿಕ್ಸರ್​ಗಳೊಂದಿಗೆ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ವಿಶೇಷ. ಶಾರ್ಜಾದ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 9ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಹಾಗೂ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತು.

210 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಬಿ ಡಿವಿಲಿಯರ್ಸ್ ಅಕ್ಷರಶಃ ಅಬ್ಬರಿಸಿದರು. ಆಸ್ಟ್ರೇಲಿಯಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಎಬಿಡಿ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಡಿವಿಲಿಯರ್ಸ್​ ಬ್ಯಾಟ್​ನಿಂದ ಕೇವಲ 37 ಎಸೆತಗಳಲ್ಲಿ ಸ್ಫೋಟಕ ಶತಕ ಮೂಡಿಬಂತು.

ಕೈ ತಪ್ಪಿದ ಭರ್ಜರಿ ದಾಖಲೆ:

ಈ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದರೂ, ಹೆಚ್ಚುವರಿ 2 ಎಸೆತಗಳ ಕಾರಣದಿಂದಾಗಿ ಆ ಭರ್ಜರಿ ದಾಖಲೆಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿಕೊಂಡರು. ಅಂದರೆ, ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿ ಇತಿಹಾಸದಲ್ಲೇ ಅತ್ಯಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಸಾರ್ವಕಾಲಿಕ  ದಾಖಲೆ ಎಬಿಡಿಗೆ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಪ್ರಸ್ತುತ ಈ ಐತಿಹಾಸಿಕ ದಾಖಲೆಯು ಆಸ್ಟ್ರೇಲಿಯಾದ ಬ್ಯಾಟರ್ ಬೆನ್ ಡಂಕ್ ಹೆಸರಿನಲ್ಲಿದೆ.

2024ರ ವಿಶ್ವ ಚಾಂಪಿಯನ್‌ಷಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಪರ ಕಣಕ್ಕಿಳಿದಿದ್ದ ಬೆನ್ ಡಂಕ್  ವೆಸ್ಟ್ ಇಂಡೀಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈ ಮೂಲಕ WCL ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.

ಬೆನ್ ಡಂಕ್ ಹೆಸರಿನಲ್ಲಿದ್ದ ಈ ಮಹತ್ತರ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶ ಎಬಿ ಡಿವಿಲಿಯರ್ಸ್‌ಗೆ ಇತ್ತಾದರೂ, ಹೆಚ್ಚುವರಿ ಎರಡು ಎಸೆತಗಳನ್ನು ತೆಗೆದುಕೊಂಡ ಕಾರಣ, ಅಂದರೆ ಒಟ್ಟು 37 ಎಸೆತಗಳ ಮೂಲಕ ಶತಕ ಪೂರೈಸಿ ಆ ಭರ್ಜರಿ ದಾಖಲೆಯನ್ನು ತನ್ನದಾಗಿಸಿಕೊಳ್ಳುವ ಅವಕಾಶವನ್ನು ಕೂದಲೆಳೆ ಅಂತರದಲ್ಲಿ ಕೈಚೆಲ್ಲಿಕೊಂಡರು.

ಸೌತ್ ಆಫ್ರಿಕಾಗೆ ಭರ್ಜರಿ ಜಯ:

ಈ ಪಂದ್ಯದಲ್ಲಿ ಒಟ್ಟು 40 ಎಸೆತಗಳನ್ನು ಎದುರಿಸಿದ ಎಬಿ ಡಿವಿಲಿಯರ್ಸ್​ 11 ಸಿಕ್ಸರ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 111 ಬಾರಿಸಿದರು. ಈ ಭರ್ಜರಿ ಸೆಂಚುರಿ ನೆರವಿನೊಂದಿಗೆ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಆಸ್ಟ್ರೇಲಿಯಾ ಚಾಂಪಿಯನ್ಸ್ ನೀಡಿದ 210 ರನ್​ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲೇ ಚೇಸ್ ಮಾಡಿ 8 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (ನಾಯಕ) , ಉಸ್ಮಾನ್ ಖ್ವಾಜಾ , ಡಾರ್ಸಿ ಶಾರ್ಟ್ ,
ಜೋ ಬರ್ನ್ಸ್ , ಕ್ಯಾಲಮ್ ಫರ್ಗುಸನ್ , ಬೆನ್ ಡಂಕ್ (ವಿಕೆಟ್ ಕೀಪರ್ ), ಜೊನಾಥನ್ ವೆಲ್ಸ್ , ಬೆನ್ ಲಾಫ್ಲಿನ್ , ಕೇನ್ ರಿಚರ್ಡ್ಸನ್ ,
ಬೆನ್ ಹಿಲ್ಫೆನ್‌ಹೌಸ್ , ಫವಾದ್ ಅಹ್ಮದ್.

ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್​ಗೆ ಮತ್ತೊಂದು ಆಘಾತ!

ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಿಚರ್ಡ್ ಲೆವಿ , ಫಾಫ್ ಡು ಪ್ಲೆಸಿಸ್ , ಎಬಿ ಡಿವಿಲಿಯರ್ಸ್ (ನಾಯಕ) , ಸರೆಲ್ ಎರ್ವೀ , ಮೋರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್) , ಜೆಪಿ ಡುಮಿನಿ , ವೇಯ್ನ್ ಪಾರ್ನೆಲ್ , ಹಾರ್ಡಸ್ ವಿಲ್ಜೋಯೆನ್ , ಮಾರ್ಚಂಟ್ ಡಿ ಲ್ಯಾಂಗ್ , ಇಮ್ರಾನ್ ತಾಹಿರ್ , ಆರನ್ ಫಾಂಗಿಸೊ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us