ಭಾರತದ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್ಗೆ ಮತ್ತೊಂದು ಆಘಾತ!
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯು ಅಕ್ಟೋಬರ್ 22 ರಿಂದ ಶುರುವಾಗಲಿದೆ. ಕಿವೀಸ್ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳು ಜರುಗಲಿವೆ. ಈ ಸರಣಿಯಿಂದ ಈಗಾಗಲೇ ನ್ಯೂಝಿಲೆಂಡ್ ತಂಡದ ನಾಲ್ಕು ಪ್ರಮುಖ ಆಟಗಾರರು ಹೊರಗುಳಿದಿದ್ದಾರೆ.

ಮುಂಬರುವ ಭಾರತ ವಿರುದ್ಧದ ಸರಣಿಗೂ ಮುನ್ನ ನ್ಯೂಝಿಲೆಂಡ್ ಕ್ರಿಕೆಟ್ ತಂಡಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಯುವ ವೇಗದ ಬೌಲರ್ ವಿಲಿಯಂ ಒ’ರೂರ್ಕ್ ಅವರು ಗಾಯದ ಸಮಸ್ಯೆಯ ಕಾರಣ ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಶನಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ, ಮುಂದಿನ ಸರಣಿಗೆ ಒ’ರೂರ್ಕ್ ಅವರ ಅನುಪಸ್ಥಿತಿಯನ್ನು ಖಚಿತಪಡಿಸಿದೆ.
ಗಾಯದ ಸಮಸ್ಯೆ !
25 ವರ್ಷದ ಒ’ರೂರ್ಕ್ ಕಳೆದ ಕೆಲವು ಸಮಯದಿಂದ ಎಡಗಾಲಿನ ಹ್ಯಾಮ್‌ಸ್ಟ್ರಿಂಗ್ ಮತ್ತು ಕಾಫ್ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೂನ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್ ತೊಂದರೆಗೆ ಒಳಗಾಗಿದ್ದ ಅವರು, ಬಳಿಕ ಆಗಸ್ಟ್‌ನಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಕಾಫ್ ಇಂಜುರಿಗೆ ತುತ್ತಾಗಿದ್ದರು
ಡಿಸೆಂಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರಮುಖ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮುನ್ನೆಚ್ಚರಿಕೆ ಕ್ರಮವಾಗಿ ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿ ಸಂಪೂರ್ಣ ಫಿಟ್ನೆಸ್ ಸಾಧಿಸಲು ಸೂಚಿಸಲಾಗಿದೆ.
“ಭಾರತದಂತಹ ಪ್ರಮುಖ ತಂಡದ ವಿರುದ್ಧದ ತವರು ಸರಣಿಯನ್ನು ಒ’ರೂರ್ಕ್ ಮಿಸ್ ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಅವರು ಏಕದಿನ ಮತ್ತು ಟೆಸ್ಟ್ ಸರಣಿ ಎರಡರಲ್ಲೂ ಪ್ರಮುಖ ಪಾತ್ರ ವಹಿಸಬೇಕಿತ್ತು. ಆದರೆ ಮುಂದಿನ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅವರ ಬೌಲಿಂಗ್ ವರ್ಕ್‌ಲೋಡ್ ಅನ್ನು ಸುರಕ್ಷಿತವಾಗಿ ಮರುನಿರ್ಮಾಣ ಮಾಡಲು ಈ ಕಠಿಣ ನಿರ್ಧಾರ ಕೈಗೊಂಡಿದ್ದೇವೆ ನ್ಯೂಝಿಲೆಂಡ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್ ತಿಳಿಸಿದ್ದಾರೆ.
ಸರಣಿಯ ಮೇಲಾಗುವ ಪ್ರಭಾವ:
ವಿಲ್ ಒ’ರೂರ್ಕ್ ಭಾರತ ವಿರುದ್ಧದ ಟಿ20 ಸರಣಿಯ ಭಾಗವಾಗಿರಲಿಲ್ಲ. ಆದರೆ, ನವೆಂಬರ್ 1 ರಿಂದ ಆರಂಭವಾಗಲಿರುವ 5 ಪಂದ್ಯಗಳ ಏಕದಿನ ಸರಣಿ ಹಾಗೂ ನವೆಂಬರ್ 19 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ ಪಡೆಯ ಬೌಲಿಂಗ್ ಜವಾಬ್ದಾರಿ ಹೊರಬೇಕಿತ್ತು. ಇದೀಗ ಅವರ ಅನುಪಸ್ಥಿತಿ ನ್ಯೂಝಿಲೆಂಡ್ ಬೌಲಿಂಗ್ ವಿಭಾಗದ ಬಲವನ್ನು ಕುಗ್ಗಿಸಿದೆ.
ಗಾಯಾಳುಗಳ ಚಿಂತೆ:
ಭಾರತ ಪ್ರವಾಸದ ಸರಣಿಯು ಅಕ್ಟೋಬರ್ 22 ರಿಂದ ಟಿ20 ಪಂದ್ಯಗಳೊಂದಿಗೆ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್ ತಂಡಕ್ಕೆ ಗಾಯದ ಸಮಸ್ಯೆ ಹೊಸ ತಲೆನೋವಾಗಿ ಪರಿಣಮಿಸಿದೆ.
- ಸ್ಟಾರ್ ಬ್ಯಾಟರ್ ಮಾರ್ಕ್ ಚಾಪ್ಮನ್ ಮತ್ತು ಬೌಲರ್ ಜಾಕ್ ಫೌಲ್ಕಸ್ ಈಗಾಗಲೇ ಗಾಯಗೊಂಡು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
- ಈ ಇಬ್ಬರು ಸ್ಟಾರ್ ಆಟಗಾರರ ಬದಲಿಗೆ ಟಿ20 ತಂಡಕ್ಕೆ ಜೋಶ್ ಕ್ಲಾರ್ಕ್ಸನ್ ಮತ್ತು ಬ್ಲೇರ್ ಟಿಕ್ನರ್ ಅವರನ್ನು ಆಯ್ಕೆ ಮಾಡಲಾಗಿದೆ.
- ನ್ಯಝಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ರಚಿನ್ ರವೀಂದ್ರ ಹೆಗಲ ಮೂಳೆ ಜರುಗಿದ ಕಾರಣ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
- ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ಕಣಕ್ಕಿಳಿಯಬೇಕಿದ್ದ ವಿಲಿಯಂ ಒ’ರೂರ್ಕ್ ಇದೀಗ ಗಾಯದ ಸಮಸ್ಯೆಯ ಕಾರಣ ಸಂಪೂರ್ಣ ಸರಣಿಯಿಂದ ಹೊರಗುಳಿಯಬೇಕಾಗಿ ಬಂದಿದೆ.
ಭಾರತ vs ನ್ಯೂಝಿಲೆಂಡ್ ಟಿ20 ಸರಣಿಗೆ ತಂಡಗಳು:
ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಜೋಶ್ ಕ್ಲಾರ್ಕ್ಸನ್, ಡೆವೊನ್ ಕಾನ್ವೆ, ಜೇಕಬ್ ಡಫಿ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಬೆವನ್ ಜೇಕಬ್ಸ್, ಕೈಲ್ ಜೇಮಿಸನ್, ಆ್ಯಡಂ ಮಿಲ್ನ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ನಾಥನ್ ಸ್ಮಿತ್, ಬ್ಲೇರ್ ಟಿಕ್ನರ್.
ಇದನ್ನೂ ಓದಿ: ಬೌಲರ್ಗಳ ತಪ್ಪಿಲ್ಲ… ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ನಮನ್ ಧೀರ್, ಪ್ರಿನ್ಸ್ ಯಾದವ್, ಮಾಯಾಂಕ್ ಯಾದವ್, ಅರ್ಷದೀಪ್ ಸಿಂಗ್ ಸಿಂಗ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್.




