ರಾಬಿನ್ ಉತ್ತಪ್ಪ ಸಿಡಿಲಬ್ಬರ… ಆದರೂ ಸೋತ ‘ಇಂಡಿಯಾ’

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳು ಭಾಗವಹಿಸುವ ಒಂದು ಪ್ರಮುಖ ಟಿ20 ಕ್ರಿಕೆಟ್ ಪಂದ್ಯಾವಳಿಯಾಗಿದೆ. ಪ್ರಸ್ತುತ ಇದರ ಮೂರನೇ ಆವೃತ್ತಿಯು ಯುಎಇಯ ಶಾರ್ಜಾ ಮತ್ತು ದುಬೈನಲ್ಲಿ ಜರುಗುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದಿದ್ದ ಇಂಡಿಯಾ ಚಾಂಪಿಯನ್ಸ್ ಇದೀಗ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ.

ರಾಬಿನ್ ಉತ್ತಪ್ಪ ಸಿಡಿಲಬ್ಬರ... ಆದರೂ ಸೋತ ಇಂಡಿಯಾ
Robin Uthappa
Image Credit source: WCL

Updated on: Oct 11, 2026 | 8:08 AM

ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 11ನೇ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ ಸೋಲನುಭವಿಸಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ಹಾಗೂ ಇಂಡಿಯಾ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕ ಎಬಿ ಡಿವಿಲಿಯರ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಡಿಯಾ ಚಾಂಪಿಯನ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ ಸೌತ್ ಆಫ್ರಿಕಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಈ ಮೂಲಕ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

6 ಸಿಕ್ಸರ್-6 ಫೋರ್:

ಅರ್ಧಶತಕದ ಬಳಿಕವೂ ಉತ್ತಪ್ಪ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದರು. ಆದರೆ, ಮತ್ತೊಂದೆಡೆ ವಿಕೆಟ್‌ಗಳು ಉರುಳಲು ಆರಂಭಿಸಿದ್ದರಿಂದ, ಅಬ್ಬರದ ಆಟವಾಡುತ್ತಿದ್ದ ಉತ್ತಪ್ಪ ಕೊಂಚ ಎಚ್ಚರಿಕೆಯ ಬ್ಯಾಟಿಂಗ್‌ಗೆ ಶರಣಾಗಬೇಕಾದ ಅನಿವಾರ್ಯತೆ ಎದುರಾಯಿತು. ಆದಾಗ್ಯೂ, ಎದುರಿಸಿದ 31 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 6 ಫೋರ್​ಗಳೊಂದಿಗೆ  77 ರನ್ ಚಚ್ಚಿದ ರಾಬಿನ್ ಉತ್ತಪ್ಪ ಅಂತಿಮವಾಗಿ ಔಟಾದರು.

ಆದರೆ ಯುವರಾಜ್ ಸಿಂಗ್ (0), ಅಂಬಾಟಿ ರಾಯುಡು (24), ಇರ್ಫಾನ್ ಪಠಾಣ್ (8) ಕಡೆಯಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಇದಾಗ್ಯೂ  ಅಂತಿಮ ಹಂತದಲ್ಲಿ ಅಬ್ಬರಿಸಿದ ಸ್ಟುವರ್ಟ್ ಬಿನ್ನಿ 30 ಎಸೆತಗಳಲ್ಲಿ 50 ರನ್ ಬಾರಿಸಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಡುಮಿನಿ ಭರ್ಜರಿ ಬ್ಯಾಟಿಂಗ್:

197 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಆಲ್ ರೌಂಡರ್ ಜೆಪಿ ಡುಮಿನಿ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಭಾರತದ ಬೌಲರ್‌ಗಳನ್ನು ದಂಡಿಸಿದ ಡುಮಿನಿ 34 ಎಸೆತಗಳಲ್ಲಿ 66 ರನ್ ಸಿಡಿಸಿ ತಂಡವನ್ನು ಗೆಲುವಿನ ದಡದತ್ತ ಮುನ್ನಡೆಸಿದರು. ಕೊನೆಯಲ್ಲಿ ಕಾಲಿನ್ ಇಂಗ್ರಾಮ್ ನೀಡಿದ 40 ರನ್​ಗಳ ಕೊಡುಗೆಯೊಂದಿಗೆ ಸೌತ್ ಆಫ್ರಿಕಾ ಚಾಂಪಿಯನ್ಸ್ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಜಯಭೇರಿ ಬಾರಿಸಿತು.

ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ವರ್ಲ್ಡ್ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಾಬಿನ್ ಉತ್ತಪ್ಪ (ವಿಕೆಟ್ ಕೀಪರ್) , ಅಂಬಾಟಿ ರಾಯುಡು , ಸ್ಟುವರ್ಟ್ ಬಿನ್ನಿ ,
ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ರಿಷಿ ಧವನ್ , ಪಿಯೂಷ್ ಚಾವ್ಲಾ , ಪವನ್ ನೇಗಿ ,
ಧವಲ್ ಕುಲಕರ್ಣಿ , ಅಭಿಮನ್ಯು ಮಿಥುನ್.

ಇದನ್ನೂ ಓದಿ: 10 ವರ್ಷಗಳ ಬಳಿಕ ಕಂಬ್ಯಾಕ್: 33 ಎಸೆತಗಳಲ್ಲಿ ‘ಶೂನ್ಯ’ದ ದಾಖಲೆ!

ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ರಿಚರ್ಡ್ ಲೆವಿ , ಫಾಫ್ ಡು ಪ್ಲೆಸಿಸ್ , ಎಬಿ ಡಿವಿಲಿಯರ್ಸ್ (ನಾಯಕ) ,
ಜೆಪಿ ಡುಮಿನಿ , ಕಾಲಿನ್ ಇಂಗ್ರಾಮ್ , ಮೋರ್ನೆ ವ್ಯಾನ್ ವೈಕ್ (ವಿಕೆಟ್ ಕೀಪರ್) , ವೇಯ್ನ್ ಪಾರ್ನೆಲ್ , ಶಾನ್ ವಾನ್ ಬರ್ಗ್ , ಮಾರ್ಚಂಟ್ ಡಿ ಲ್ಯಾಂಗ್ , ಹಾರ್ಡಸ್ ವಿಲ್ಜೋಯೆನ್ , ಇಮ್ರಾನ್ ತಾಹಿರ್.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us