Australia vs Pakistan: ಏನಿದು ಪಿಂಕ್ ಟೆಸ್ಟ್?
Australia vs Pakistan 3rd Test: ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತಂಡವು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಪಿಂಕ್ ಟೆಸ್ಟ್ ಮೂಲಕ ಪಾಕ್ ಪಡೆಯನ್ನು ವೈಟ್ ವಾಶ್ ಮಾಡುವ ಇರಾದೆಯಲ್ಲಿದೆ ಆಸ್ಟ್ರೇಲಿಯನ್ನರು.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ (Australia vs Pakistan) ನಡುವಣ 3ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯವಹಿಸಲು ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಈ ಪಂದ್ಯವನ್ನು ಪಿಂಕ್ ಟೆಸ್ಟ್ (Pink Test) ಎಂದು ಕರೆಯಲಾಗುತ್ತದೆ. ಆದರೆ ಇದು ಪಿಂಕ್ ಬಾಲ್ ಟೆಸ್ಟ್ ಅಲ್ಲ. ಬದಲಿಗೆ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಪಿಂಕ್ ಕ್ಯಾಪ್ ಧರಿಸಿ ಕಣಕ್ಕಿಳಿಯಲಿದ್ದಾರೆ.
ಏನಿದು ಪಿಂಕ್ ಟೆಸ್ಟ್?
ಪ್ರತಿ ವರ್ಷ ಸಿಡ್ನಿಯಲ್ಲಿ ಆಡಲಾಗುವ ಮೊದಲ ಟೆಸ್ಟ್ ಅನ್ನು ಪಿಂಕ್ ಟೆಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಂದ್ಯದಲ್ಲಿ ಆಟಗಾರರು ಪಿಂಕ್ ಕ್ಯಾಪ್ ಧರಿಸುವುದು. ಇದರ ಉದ್ದೇಶ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವುದು ಹಾಗೂ ಅದರ ವಿರುದ್ಧ ಹೋರಾಡುತ್ತಿರುವವರಿಗೆ ಧೈರ್ಯ ತುಂಬುವುದಾಗಿದೆ.
ಇಂತಹದೊಂದು ಅಭಿಯಾನಕ್ಕೆ ನಾಂದಿಯಾಡಿದ್ದು ಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಗ್ಲೆನ್ ಮೆಕ್ಗ್ರಾಥ್ ಎಂಬುದು ವಿಶೇಷ. ಮೆಕ್ಗ್ರಾಥ್ ಅವರ ಪತ್ನಿ ಜೇನ್ ಮೆಕ್‌ಗ್ರಾತ್ ಅವರು ಸ್ತನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಆ ಬಳಿಕ ಮೆಕ್‌ಗ್ರಾತ್ ಫೌಂಡೇಶನ್ ಸ್ಥಾಪಿಸಿದ ಗ್ಲೆನ್ ಮೆಕ್ಗ್ರಾಥ್ ಸ್ತನ ಕ್ಯಾನ್ಸರ್ ಜಾಗೃತಿ ಹಾಗೂ ಈ ಕ್ಯಾನ್ಸರ್‌ನಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವು ನೀಡುತ್ತಾ ಬರುತ್ತಿದೆ.
ಈ ಅಭಿಯಾನಕ್ಕೆ ಸಿಡ್ನಿ ಕ್ರಿಕೆಟ್ ಕೂಡ ಸಾಥ್ ನೀಡಿದ್ದು, ಈ ಮೂಲಕ ಪ್ರತಿ ವರ್ಷ ಪಿಂಕ್ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ಈ ಮೂಲಕ ಸ್ಟೇಡಿಯಂನ ಗ್ಯಾಲರಿಗಳನ್ನು ಪಿಂಕ್ ಬಣ್ಣಗಳಿಂದ ಅಲಂಕೃತಗೊಳಿಸಲಾಗುತ್ತದೆ. ಹಾಗೆಯೇ ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನದಂದು ಲೇಡೀಸ್ ಸ್ಟ್ಯಾಂಡ್ ಅನ್ನು ತಾತ್ಕಾಲಿಕವಾಗಿ ಜೇನ್ ಮೆಕ್‌ಗ್ರಾತ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಇನ್ನು ಈ ಪಂದ್ಯದಲ್ಲಿ ಆಟಗಾರರು ಧರಿಸಿದ ಪಿಂಕ್ ಕ್ಯಾಪ್ ಅನ್ನು ಕೂಡ ಹರಾಜಾಗಿಡಲಾಗುತ್ತದೆ. ಇದರಿಂದ ಬಂದ ಹಣವನ್ನು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುತ್ತದೆ.
ಸರಣಿ ಗೆದ್ದಿರುವ ಆಸ್ಟ್ರೇಲಿಯಾ:
ಪಾಕಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಈಗಾಗಲೇ ಆಸ್ಟ್ರೇಲಿಯಾ ತಂಡವು 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದೀಗ ಪಿಂಕ್ ಟೆಸ್ಟ್ ಮೂಲಕ ಪಾಕ್ ಪಡೆಯನ್ನು ವೈಟ್ ವಾಶ್ ಮಾಡುವ ಇರಾದೆಯಲ್ಲಿದೆ ಆಸ್ಟ್ರೇಲಿಯನ್ನರು. ಈ ಮೂಲಕ ಡೇವಿಡ್ ವಾರ್ನರ್ ಅವರ ವಿದಾಯ ಪಂದ್ಯವನ್ನು ಸ್ಮರಣೀಯವಾಗಿಸಲು ಪಣತೊಟ್ಟಿದ್ದಾರೆ ಪ್ಯಾಟ್ ಕಮಿನ್ಸ್ ಪಡೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚ್ ಮಾರ್ಷ್, ಸ್ಟೀವ್ ಸ್ಮಿತ್, ಮಿಚ್ ಸ್ಟಾರ್ಕ್, ಡೇವಿಡ್ ವಾರ್ನರ್.
ಇದನ್ನೂ ಓದಿ: David Warner: ನಿವೃತ್ತಿ ಬೆನ್ನಲ್ಲೇ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆದ ವಾರ್ನರ್
ಪಾಕಿಸ್ತಾನ ಟೆಸ್ಟ್ ತಂಡ: ಶಾನ್ ಮಸೂದ್ (ನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಆಝಂ, ಫಹೀಮ್ ಅಶ್ರಫ್, ಹಸನ್ ಅಲಿ, ಇಮಾಮ್-ಉಲ್-ಹಕ್, ಖುರ್ರಂ ಶಹಝಾದ್, ಮೀರ್ ಹಮ್ಜಾ, ಮೊಹಮ್ಮದ್ ರಿಝ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನೋಮನ್ ಅಲಿ, ಸೈಮ್ ಅಯೂಬ್, ಸಲ್ಮಾನ್ ಅಲಿ ಅಘಾ, ಸರ್ಫರಾಝ್ ಅಹ್ಮದ್, ಸೌದ್ ಶಕೀಲ್ ಮತ್ತು ಶಾಹೀನ್ ಶಾ ಆಫ್ರಿದಿ.