
ಭಾರತ ಟಿ20 ತಂಡಕ್ಕೆ ಹೊಸ ಸಾರಥಿಯ ಹುಡುಕಾಟ ಶುರುವಾಗಿದೆ. ಸೂರ್ಯಕುಮಾರ್ ಯಾದವ್ ಅವರ ಉತ್ತರಾಧಿಕಾರಿಯಾಗಲು ಸ್ಫೋಟಕ ದಾಂಡಿಗ ಸಂಜು ಸ್ಯಾಮ್ಸನ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡಿದ ಶ್ರೇಯಸ್ ಅಯ್ಯರ್ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಒಬ್ಬರ ಬಳಿ ಪ್ರಚಂಡ ಫಾರ್ಮ್ ಇದ್ದರೆ, ಮತ್ತೊಬ್ಬರ ಬಳಿ ಐಪಿಎಲ್ ಟ್ರೋಫಿ ಗೆದ್ದ ನಾಯಕತ್ವದ ಚಾಕಚಕ್ಯತೆಯಿದೆ. ಹೀಗಾಗಿಯೇ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಏರ್ಫಟ್ಟಿದೆ.
ಟೀಮ್ ಇಂಡಿಯಾದ ನಾಯಕನ ಸ್ಥಾನಕ್ಕೆ ಮೊದಲು ಶ್ರೇಯಸ್ ಅಯ್ಯರ್ ಅವರ ಹೆಸರು ಕೇಳಿಬಂದಿತ್ತಾದರೂ, ಇತ್ತೀಚಿನ ವರದಿಗಳ ಪ್ರಕಾರ ಸಂಜು ಸ್ಯಾಮ್ಸನ್ ಈಗ ನಾಯಕತ್ವದ ರೇಸ್‌ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಸಿಡಿಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಗೆದ್ದಿರುವುದು ಸಂಜು ಅವರ ಆಯ್ಕೆಗೆ ಬಲವಾದ ಕಾರಣವಾಗಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಸಂಜು ಅವರ ಶಾಂತ ಸ್ವಭಾವ ಮತ್ತು ಸ್ಥಿರ ಪ್ರದರ್ಶನಕ್ಕೆ ಮನಸೋತಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಪ್ರಸಕ್ತ ಐಪಿಎಲ್ ಸೀಸನ್‌ನಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿ ಅಮೋಘ ಫಾರ್ಮ್‌ನಲ್ಲಿದ್ದಾರೆ.
ಶ್ರೇಯಸ್ ಅಯ್ಯರ್ ಅವರು 2023 ರಿಂದ ಟಿ20 ತಂಡದಿಂದ ಹೊರಗುಳಿದಿರುವುದು ಅವರ ಆಯ್ಕೆಗೆ ಅಡ್ಡಿಯಾಗಬಹುದು. ಒಂದು ವೇಳೆ ಸೂರ್ಯಕುಮಾರ್ ಅವರನ್ನು ಮುಂದುವರಿಸಲು ನಿರ್ಧರಿಸಿದರೆ, ಸಂಜು ಅವರನ್ನು ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆಯೂ ಇದೆ. ಇದರೊಂದಿಗೆ ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಹೆಸರುಗಳೂ ಚರ್ಚೆಯಲ್ಲಿವೆ.
ಈ ಹಿಂದೆ ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದ್ದರೂ, ಇದೀಗ ಈ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಹೆಸರು ಕೇಳಿ ಬರುತ್ತಿವೆ. ಅದರಲ್ಲೂ ಶ್ರೇಯಸ್ಗಿಂತ ಗೌತಮ್ ಗಂಭೀರ್ ಸಂಜು ಸ್ಯಾಮ್ಸನ್ ಪರ ಇದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿ ಬಿಸಿಸಿಐ ಅಂತಿಮವಾಗಿ ಯಾರಿಗೆ ಕ್ಯಾಪ್ಟನ್ ಪಟ್ಟ ನೀಡಲಿದ್ದಾರೆ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: ಕೃನಾಲ್ ಪಾಂಡ್ಯ ಕಾಲರ್ ಪಟ್ಟಿ ಹಿಡಿದ ನಿಕೋಲಸ್ ಪೂರನ್!
ಐಪಿಎಲ್ 2026 ಮುಗಿದ ತಕ್ಷಣ ಭಾರತ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸಗಳಲ್ಲೇ ಭಾರತದ ಹೊಸ ಟಿ20 ನಾಯಕ ಯಾರು ಎಂಬುದು ಅಧಿಕೃತವಾಗಿ ತಿಳಿಯಲಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಮುಂದಿನ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.