ಟೀಮ್ ಇಂಡಿಯಾ ಸೋಲಿಗೆ ಇದುವೇ ಅಸಲಿ ಕಾರಣ..!
India vs South Africa: ರಾಯ್ಪುರದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ 49.2 ಓವರ್ಗಳಲ್ಲಿ 362 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಅದು ಕೂಡ ಬರೋಬ್ಬರಿ 358 ರನ್ಗಳಿಸಿದ ಬಳಿಕ. ರಾಯ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರುತುರಾಜ್ ಗಾಯಕ್ವಾಡ್ (105) ಹಾಗೂ ವಿರಾಟ್ ಕೊಹ್ಲಿ (102) ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು 5 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಐಡೆನ್ ಮಾರ್ಕ್ರಾಮ್ (110) ಶತಕ ಸಿಡಿಸಿದರೆ, ಮ್ಯಾಥ್ಯೂ ಬ್ರೀಟ್ಝ್ಕೆ (68) ಹಾಗೂ ಡೆವಾಲ್ಡ್ ಬ್ರೆವಿಸ್ (54) ಅರ್ಧಶತಕಗಳನ್ನು ಬಾರಿಸಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 49.2 ಓವರ್ಗಳಲ್ಲಿ 362 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು.
ಇತ್ತ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಿದರೂ ಸೋಲಲು ಮುಖ್ಯ ಕಾರಣ ಬೌಲಿಂಗ್ ಮಾತ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ರಾಯ್ಪುರದಲ್ಲಿರುವುದು ಬ್ಯಾಟಿಂಗ್ ಪಿಚ್. ಹೀಗಾಗಿ ಬೃಹತ್ ಮೊತ್ತ ಪೇರಿಸುವುದು ಅನಿವಾರ್ಯವಾಗಿತ್ತು. ಆದರೆ ಟೀಮ್ ಇಂಡಿಯಾ ಬ್ಯಾಟರ್ಗಳು ಅಂತಿಮ ಓವರ್ಗಳಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದರಿಂದ ಸೌತ್ ಆಫ್ರಿಕಾ ತಂಡಕ್ಕೆ ಕಷ್ಟಸಾಧ್ಯವಾದಂತಹ ಗುರಿ ನೀಡಲು ಸಾಧ್ಯವಾಗಿಲ್ಲ.
ಏಕೆಂದರೆ 40 ಓವರ್ಗಳವರೆಗೆ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಅನ್ನೇ ಪ್ರದರ್ಶಿಸಿದ್ದರು. ಇದರಿಂದ ಟೀಮ್ ಇಂಡಿಯಾ ಸ್ಕೋರ್ 400ರ ಗಡಿಮುಟ್ಟುವ ಸೂಚನೆ ಕೂಡ ಸಿಕ್ಕಿತ್ತು. ಆದರೆ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ ಭಾರತ ತಂಡದ ಲೆಕ್ಕಾಚಾರಗಳು ತಲೆ ಕೆಳಗಾದವು.
ಕಿಂಗ್ ಕೊಹ್ಲಿ ಔಟಾದಾಗ ಭಾರತ ತಂಡದ ಸ್ಕೋರ್ 39.1 ಓವರ್ಗಳಲ್ಲಿ 284 ರನ್. ಅಲ್ಲದೆ ಇನ್ನೂ 6 ವಿಕೆಟ್ಗಳಿದ್ದವು. ಹೀಗಾಗಿ ಕೊನೆಯ ಹತ್ತು ಓವರ್ಗಳಲ್ಲಿ 9ರ ಸರಾಸರಿಯಲ್ಲಿ ರನ್ ಗಳಿಸಿದ್ದರೂ ಭಾರತ ತಂಡದ ಸ್ಕೋರ್ 375 ಆಗಿರುತ್ತಿತ್ತು. ಆದರೆ ಕೊನೆಯ 66 ಎಸೆತಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಕಲೆಹಾಕಿದ್ದು ಕೇವಲ 74 ರನ್ಗಳು ಮಾತ್ರ.
ಅಂದರೆ ವಿರಾಟ್ ಕೊಹ್ಲಿ ಔಟಾದ ಬಳಿಕ ಭಾರತ ತಂಡವು 300 ರನ್ಗಳ ಗಡಿದಾಟಲು 27 ಎಸೆತಗಳನ್ನು ತೆಗೆದುಕೊಂಡಿದ್ದರು. ಇನ್ನು ಲುಂಗಿ ಎನ್ಗಿಡಿ ಎಸೆದ 49ನೇ ಓವರ್ನಲ್ಲಿ ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಜೊತೆಗೂಡಿ ಕಲೆಹಾಕಿದ್ದು ಕೇವಲ 4 ರನ್ ಮಾತ್ರ.
ಇನ್ನು ಫಿನಿಶಿಂಗ್ ಪಾತ್ರ ನಿರ್ವಹಿಸಬೇಕಿದ್ದ ರವೀಂದ್ರ ಜಡೇಜಾ ಅಂತಿಮ 27 ಎಸೆತಗಳನ್ನು ಎದುರಿಸಿ ಬಾರಿಸಿದ್ದು ಕೇವಲ 24 ರನ್ಗಳು ಮಾತ್ರ. ಇದರ ನಡುವೆ ಅವರ ಬ್ಯಾಟ್ನಿಂದ ಕೇವಲ 2 ಫೋರ್ಗಳು ಮಾತ್ರ ಮೂಡಿಬಂದಿದ್ದವು. ಪರಿಣಾಮ ಬೃಹತ್ ಮೊತ್ತದತ್ತ ಸಾಗಿದ್ದ ಟೀಮ್ ಇಂಡಿಯಾ ರನ್ ಗತಿ ಅಂತಿಮ ಹಂತದಲ್ಲಿ ಕುಂಠಿತಗೊಂಡಿತು.
ಹೀಗೆ ಕೊನೆಯ 66 ಎಸೆತಗಳಲ್ಲಿ ಕೇವಲ 74 ರನ್ ಮಾತ್ರ ಕಲೆಹಾಕುವ ಮೂಲಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ತಂಡಕ್ಕೆ ಸಾಧಾರಣ ಗುರಿ ನೀಡಿತು. ಈ ಗುರಿಯನ್ನು ಬೆನ್ತತ್ತಲು ಆಗಮಿಸಿದ ಸೌತ್ ಆಫ್ರಿಕಾ ಪಡೆಯು ಅನಾನುಭವಿ ಪ್ರಸಿದ್ಧ್ ಕೃಷ್ಣ ಹಾಗೂ ಹರ್ಷಿತ್ ರಾಣಾ ಅವರ ಲೂಸ್ ಬಾಲ್ಗಳ ಲಾಭ ಪಡೆದುಕೊಂಡರು.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಅದರಲ್ಲೂ ಪ್ರಸಿದ್ಧ್ ಕೃಷ್ಣ 8.2 ಓವರ್ಗಳಲ್ಲಿ 85 ರನ್ ನೀಡಿದ್ದು ಕೂಡ ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಯಿತು. ಇದರಿಂದಾಗಿ ಬೃಹತ್ ಮೊತ್ತ ಪೇರಿಸಿದರೂ ಭಾರತ ತಂಡಕ್ಕೆ ಎರಡನೇ ಪಂದ್ಯ ಗೆಲ್ಲಲು ಸಾಧ್ಯವಗಲಿಲ್ಲ. ಈ ಸೋಲಿನೊಂದಿಗೆ 3 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಗೊಂಡಿದೆ. ಅಲ್ಲದೆ ಶನಿವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯವು ಫೈನಲ್ ಫೈಟ್ ಆಗಿ ಮಾರ್ಪಟ್ಟಿದೆ.
Published On - 8:32 am, Thu, 4 December 25
