RCB vs KKR ಪಂದ್ಯವನ್ನು ‘ಎಲ್​ ಪ್ರಿಮೆರೊ’ ಎಂದು ಯಾಕೆ ಕರೆಯಲಾಗುತ್ತೆ?

IPL 2026 RCB vs KKR: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ರಾಯ್​ಪುರ್​ನಲ್ಲಿ ನಡೆಯಲಿರುವ ಈ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದರೆ ಅಂಕ ಪಟ್ಟಿಯಲ್ಲಿ ಮೇಲೇರಬಹುದು. ಅತ್ತ ಪ್ಲೇಆಫ್​ ರೇಸ್​ನಲ್ಲಿ ಉಳಿಯಬೇಕಿದ್ದರೆ ಕೆಕೆಆರ್ ಈ ಮ್ಯಾಚ್​ನಲ್ಲಿ ಗೆಲ್ಲಲೇಬೇಕು.

RCB vs KKR ಪಂದ್ಯವನ್ನು ಎಲ್​ ಪ್ರಿಮೆರೊ  ಎಂದು ಯಾಕೆ ಕರೆಯಲಾಗುತ್ತೆ?
RCB vs KKR

Updated on: May 13, 2026 | 10:56 AM

ವರ್ಷ 2008, ಏಪ್ರಿಲ್ 18ರ ರಾತ್ರಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಅಂದು ಕೇವಲ ಒಂದು ಕ್ರಿಕೆಟ್ ಪಂದ್ಯ ನಡೆಯುತ್ತಿರಲಿಲ್ಲ, ಬದಲಾಗಿ ವಿಶ್ವ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಲಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಎಂಬ ಮಹಾಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿತ್ತು. ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು.

ಅಂದು ಶುರುವಾದ ಉಭಯ ತಂಡಗಳ ಪೈಪೋಟಿ 19ನೇ ಸೀಸನ್​ನಲ್ಲೂ ಮುಂದುವರೆದಿದೆ. ಆದರೆ ಇದೀಗ ಈ ಪೈಪೋಟಿಯನ್ನು ಎಲ್​ ಪ್ರಿಮೆರೊ ಎಂದು ಕರೆಯಲಾಗುತ್ತಿದೆ. ಅಷ್ಟಕ್ಕೂ ಆರ್​ಸಿಬಿ ಮತ್ತು ಕೆಕೆಆರ್​ ನಡುವಣ ಪಂದ್ಯವನ್ನು ಎಲ್ ಪ್ರಿಮೆರೊ ಎಂದು ಏಕೆ ಕರೆಯಲಾಗುತ್ತೆ ಎಂದು ನೋಡುವುದಾದರೆ…

‘ಎಲ್ ಪ್ರಿಮೆರೊ’ (El Primero) ಸ್ಪ್ಯಾನಿಷ್ ಭಾಷೆಯಲ್ಲಿ “ಮೊದಲನೆಯದು” ಎಂದರ್ಥ. ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಇದಾದ ಕಾರಣ ಇದಕ್ಕೆ ಈ ಹೆಸರು ಬಂದಿದೆ. ಈ ಹೆಸರು ಹೆಚ್ಚು ಪ್ರಚಲಿತವಾಗಲು ಕಾರಣ ಉಭಯ ತಂಡಗಳ ನಡುವಣ ಪೈಪೋಟಿ.

ಏಕೆಂದರೆ ಉಭಯ ತಂಡಗಳು ಈವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 20 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದರೆ, 15 ಮ್ಯಾಚ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಅಂದರೆ ಉಭಯ ತಂಡಗಳ ತಂಡಗಳ ನಡುವೆ ಸಮಬಲದ ಹೋರಾಟ ಕಂಡು ಬಂದಿರುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿ.

ಅದರಲ್ಲೂ ಇಂಟ್ರೆಸ್ಟಿಂಗ್ ಎಂದರೆ ಎರಡೂ ತಂಡಗಳು ಪರಸ್ಫರ 200+ ಸ್ಕೋರ್​ಗಳಿಸಿದೆ. ಹಾಗೆಯೇ ಉಭಯ ತಂಡಗಳು 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

  • ಆರ್​ಸಿಬಿ ಕೆಕೆಆರ್ ವಿರುದ್ಧ ಕೇವಲ 49 ರನ್​ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ.
  • ಕೆಕೆಆರ್ ತಂಡವು ಆರ್​ಸಿಬಿ ವಿರುದ್ಧ 84 ರನ್​ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದನ್ನೂ ಓದಿ: RCB vs KKR ಪಂದ್ಯಕ್ಕೆ 5 ಆಟಗಾರರು ಅಲಭ್ಯ!

ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಿದ್ದಾಜಿದ್ದಿಗೂ ಆರ್​ಸಿಬಿ ಮತ್ತು ಕೆಕೆಆರ್ ಪಂದ್ಯಗಳು ಸಾಕ್ಷಿಯಾಗಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯಗಳು ಅಭಿಮಾನಿಗಳ ಹಾಟ್ ಫೇವರೇಟ್ ಆಗಿ ಮಾರ್ಪಟ್ಟಿತ್ತು.

ಇದೀಗ ಉಭಯ ತಂಡಗಳು ಬದಲಾಗಿದೆ. ಈ ಬದಲಾವಣೆಯೊಂದಿಗೆ ಎಲ್​ ಪ್ರಿಮೆರೊ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ದೂರದ ರಾಯ್​ಪುರ್​ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ರಾಯ್​ಪುರ್​ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದರಂತೆ ಈ ಬಾರಿಯ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Published On - 10:50 am, Wed, 13 May 26

Follow Us