ಬೌಲಿಂಗ್ ನೀಡುವುದು ಅಪಾಯಕಾರಿ… ಜಡೇಜಾಗೆ ಓವರ್​ ನೀಡದ ಪರಾಗ್..!

IPL 202 SRH vs RR: ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 216 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 19 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಎಸ್​ಆರ್​ಹೆಚ್ ತಂಡ 57 ರನ್​ಗಳ ಜಯ ಸಾಧಿಸಿದೆ.

ಬೌಲಿಂಗ್ ನೀಡುವುದು ಅಪಾಯಕಾರಿ... ಜಡೇಜಾಗೆ ಓವರ್​ ನೀಡದ ಪರಾಗ್..!
Ravindra Jadeja - Riyan Parag

Updated on: Apr 14, 2026 | 2:24 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲನುಭವಿಸಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಆರ್​ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಎಸ್​ಆರ್​ಹೆಚ್ ತಂಡವು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.

ಅದರಲ್ಲೂ ನಾಯಕ ಇಶಾನ್ ಕಿಶನ್ 44 ಎಸೆತಗಳಲ್ಲಿ 91 ರನ್ ಬಾರಿಸಿದರೆ, ಅನುಭವಿ ದಾಂಡಿಗ ಹೆನ್ರಿಕ್ ಕ್ಲಾಸೆನ್ 26 ಎಸೆತಗಳಲ್ಲಿ 40 ರನ್​ ಚಚ್ಚಿದರು. ಈ ಇಬ್ಬರು ಬ್ಯಾಟರ್​ಗಳ ಸಿಡಿಲಬ್ಬರದ ಹೊರತಾಗಿಯೂ ರಿಯಾನ್ ಪರಾಗ್ ಅನುಭವಿ ಸ್ಪಿನ್ ಆಲ್​ರೌಂಡರ್ ರವೀಂದ್ರ ಜಡೇಜಾಗೆ ಚೆಂಡು ನೀಡಿರಲಿಲ್ಲ ಎಂಬುದೇ ಅಚ್ಚರಿ.

ಅಂದರೆ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಒಂದೇ ಒಂದು ಓವರ್ ಎಸೆದಿರಲಿಲ್ಲ. ಇತ್ತ ಎಸ್​ಆರ್​ಹೆಚ್ ಬ್ಯಾಟರ್​ಗಳು ಅಬ್ಬರಿಸುತ್ತಿದ್ದರೂ ರಿಯಾನ್ ಪರಾಗ್​, ಜಡೇಜಾಗೆ ಓವರ್ ನೀಡಿಲ್ಲ ಏಕೆ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.  ಈ ಪ್ರಶ್ನೆಗೆ ಖುದ್ದು ರಿಯಾನ್ ಪರಾಗ್ ಸ್ಪಷ್ಟನೆ ನೀಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್ ಪರ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರು. ಇತ್ತ ಇಶಾನ್ ಎಡಗೈ ಬ್ಯಾಟರ್ ಆಗಿರುವುದರಿಂದ, ಎಡಗೈ ಸ್ಪಿನ್ನರ್ ಆದ ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವುದು ಅಪಾಯಕಾರಿ ಎಂದು ಭಾವಿಸಿದೆ. ಹೀಗಾಗಿ ಜಡೇಜಾಗೆ ಓವರ್​ ನೀಡಿ ರನ್ ಬಿಟ್ಟುಕೊಡಲು ನಾನು ಬಯಸಲಿಲ್ಲ ಎಂದು ರಿಯಾನ್ ಪರಾಗ್ ಹೇಳಿದ್ದಾರೆ.

ಅಚ್ಚರಿಯ ವಿಷಯವೆಂದರೆ, ರವೀಂದ್ರ ಜಡೇಜಾ ಅವರಿಗೆ ಬೌಲಿಂಗ್ ನೀಡುವ ಬದಲು ರಿಯಾನ್ ಪರಾಗ್ ಅವರೇ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ರವಿ ಬಿಷ್ಣೋಯ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಇವೆಲ್ಲವೂ ಕೇವಲ ಒಂದು ‘ಕ್ಷಣಿಕ ನಿರ್ಧಾರ’ ಆಗಿತ್ತು ಎಂದು ರಿಯಾನ್ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು  ಹೈದರಾಬಾದ್‌ನ ಪಿಚ್ ಸಂಪೂರ್ಣವಾಗಿ ಬ್ಯಾಟಿಂಗ್‌ಗೆ ಪೂರಕವಾಗಿತ್ತು. ಸ್ಪಿನ್ನರ್‌ಗಳಿಗೆ ಹೆಚ್ಚಿನ ತಿರುವು ಸಿಗುತ್ತಿರಲಿಲ್ಲ. ಇಂತಹ ‘ಬೆಲ್ಟರ್’ ಪಿಚ್‌ನಲ್ಲಿ ಜಡೇಜಾ ಅವರ ವೇಗದ ಸ್ಪಿನ್ ಹೆಚ್ಚು ಎಫೆಕ್ಟಿವ್ ಆಗದಿರಬಹುದು ಎಂಬ ಭಯ ಟೀಮ್ ಮ್ಯಾನೇಜ್‌ಮೆಂಟ್‌ನಲ್ಲಿತ್ತು. ಹೀಗಾಗಿ ಅವರನ್ನು ಬೌಲಿಂಗ್​ನಿಂದ ಹೊರಗಿಡಲಾಗಿದೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

ಟೀಕೆಗಳ ಸುರಿಮಳೆ:

ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಸೇರಿದಂತೆ ಹಲವು ತಜ್ಞರು ರಿಯಾನ್ ಪರಾಗ್ ಹಾಗೂ ರಾಜಸ್ಥಾನ್ ರಾಯಲ್ಸ್ ಟೀಮ್ ಮ್ಯಾನೇಜ್ಮೆಂಟ್​ನ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.

“ವಿಶ್ವದ ಶ್ರೇಷ್ಠ ಆಲ್-ರೌಂಡರ್ ಒಬ್ಬರು ತಂಡದಲ್ಲಿದ್ದಾಗ, ಎದುರಾಳಿಗಳು 200ಕ್ಕೂ ಹೆಚ್ಚು ರನ್ ಗಳಿಸುತ್ತಿದ್ದರೂ ಅವರಿಗೆ ಬೌಲಿಂಗ್ ನೀಡದಿರುವುದು ದೊಡ್ಡ ತಪ್ಪು,” ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮಿಂಚಿದ ‘ಜಡ್ಡು’

ಬೌಲಿಂಗ್‌ನಲ್ಲಿ ಅವಕಾಶ ಸಿಗದಿದ್ದರೂ, ಬ್ಯಾಟಿಂಗ್‌ನಲ್ಲಿ ರವೀಂದ್ರ ಜಡೇಜಾ ತಮ್ಮ ತಾಕತ್ತು ಪ್ರದರ್ಶಿಸಿದರು. ಕೇವಲ 32 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಗೆಲುವಿನ ಹತ್ತಿರ ತರಲು ಪ್ರಯತ್ನಿಸಿದರು. ಆದರೆ ತಂಡ ಅಂತಿಮವಾಗಿ ಗುರಿ ತಲುಪಲು ವಿಫಲವಾಯಿತು.

ಇದೀಗ ರಾಜಸ್ಥಾನ್ ರಾಯಲ್ಸ್​ ತಂಡದ ಸೋಲಿಗೆ ನಾಯಕ ರಿಯಾನ್ ಪರಾಗ್ ತೆಗೆದುಕೊಂಡ ನಿರ್ಧಾರವೇ ಕಾರಣ ಎನ್ನಲಾಗುತ್ತಿದೆ. ಅಂದರೆ ಅನುಭವಿ ಆಟಗಾರನಾಗಿ ರವೀಂದ್ರ ಜಡೇಜಾ ಅವರನ್ನು ಬಳಸಿಕೊಳ್ಳದೇ ಇರುವುದರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 216 ರನ್​ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ RCB

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 19 ಓವರ್​ಗಳಲ್ಲಿ 159 ರನ್​​ಗಳಿಸಿ ಆಲೌಟ್ ಆಗುವ ಮೂಲಕ 57 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ತಂಡವು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

 

Follow Us