
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ (Virat Kohli) ಯುಗಾಂತ್ಯವಾಗಿದೆ. ಅದು ಕೂಡ 36ನೇ ವಯಸ್ಸಿನಲ್ಲಿ. ಟೀಮ್ ಇಂಡಿಯಾ ಪರ 123 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿಗೆ ಇನ್ನೊಂದಷ್ಟು ವರ್ಷಗಳ ಕಾಲ ಮುಂದುವರೆಯುವ ಅವಕಾಶವಿತ್ತು. ಇದಾಗ್ಯೂ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ನಿವೃತ್ತಿ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದೆ. ಈ ಪ್ರಶ್ನೆಗಳಿಗೆ ಸದ್ಯ ಸಿಗುತ್ತಿರುವ ಉತ್ತರ ಈ ಕೆಳಗಿನಂತಿದೆ…
ಕುಟುಂಬದೊಂದಿಗೆ ಸಮಯ ಕಳೆಯಲು: ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅದರಲ್ಲೂ ಅವರ ಮಗಳು ವಾಮಿಕ ಈ ವರ್ಷದಿಂದ ಶೈಕ್ಷಣಿಕ ವರ್ಷವನ್ನು ಆರಂಭಿಸುವ ಸಾಧ್ಯತೆಯಿದೆ. ಇದೇ ಕಾರಣದಿಂದ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್ಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಏಕಾಗ್ರತೆಯ ಕೊರತೆ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 9 ಇನಿಂಗ್ಸ್ಗಳಲ್ಲಿ 7 ಬಾರಿ ಆಫ್ ಸ್ಟಂಪ್ನಿಂದ ಹೊರ ಹೋಗುವ ಚೆಂಡನ್ನು ಮುಟ್ಟಿ ವಿಕೆಟ್ ಒಪ್ಪಿಸಿದರು. ವಿಶೇಷ ಎಂದರೆ ಪ್ರತಿ ಬಾರಿ ಅವರು ವಿಕೆಟ್ ಹಿಂದೆ, ಅಂದರೆ ವಿಕೆಟ್ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ಗೆ ಕ್ಯಾಚ್ ನೀಡಿದ್ದರು. ಪದೇ ಪದೇ ಒಂದೇ ತಪ್ಪನ್ನು ಮಾಡುತ್ತಿರುವುದರಿಂದ ಅವರಲ್ಲಿ ಏಕಾಗ್ರತೆಯ ಕೊರತೆ ಎದ್ದು ಕಾಣಿಸಿತು. ಇದು ಕೂಡ ನಿವೃತ್ತಿ ಘೋಷಿಸಲು ಒಂದು ಕಾರಣ ಎನ್ನಲಾಗುತ್ತಿದೆ.
ಕಳಪೆ ಫಾರ್ಮ್: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಫಾರ್ಮ್ನಲ್ಲಿರುವುದು ಗೊತ್ತೇ ಇದೆ. 2023 ರ ಬಳಿಕ ಅವರ ಬ್ಯಾಟ್ನಿಂದ ಏಕೈಕ ಟೆಸ್ಟ್ ಶತಕ ಮಾತ್ರ ಮೂಡಿಬಂದಿದೆ. ಅದರಲ್ಲೂ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಯಲ್ಲಿ 9 ಇನಿಂಗ್ಸ್ ಆಡಿದ್ದ ಕೊಹ್ಲಿ ಕಲೆಹಾಕಿದ್ದು ಕೇವಲ 190 ರನ್ಗಳು ಮಾತ್ರ. ಇದು ಅವರ ವೈಫಲ್ಯಕ್ಕೆ ಸಾಕ್ಷಿಯಾಗಿ ನಿಂತಿತ್ತು.
ಇಂಗ್ಲೆಂಡ್ ಸರಣಿ: ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ನಿವೃತ್ತಿ ಘೋಷಿಸಲು ಮುಖ್ಯ ಕಾರಣ ಅಲ್ಲಿನ ಪಿಚ್ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ. ಅಂದರೆ ಇಂಗ್ಲೆಂಡ್ ಪಿಚ್ಗಳು ಸ್ವಿಂಗ್ಗೆ ಸಹಕಾರಿ. ಅದರಲ್ಲೂ ಔಟ್ ಸ್ವಿಂಗ್ನಲ್ಲಿ ಆಫ್ ಸ್ಟಂಪ್ನಲ್ಲಿ ವಿಕೆಟ್ ಒಪ್ಪಿಸುತ್ತಿರುವ ಕೊಹ್ಲಿಗೆ ಇಂಗ್ಲೆಂಡ್ನಲ್ಲಿ ಆಡುವುದು ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಅಲ್ಲಿ ಹೋಗಿ ಟೀಕೆಗೆ ಗುರಿಯಾಗುವುದರ ಬದಲು ನಿವೃತ್ತಿ ಘೋಷಿಸುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ.
ಏಕೆಂದರೆ ಬಿಸಿಸಿಐ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್ ಸರಣಿಯಲ್ಲಿ ಮುಂದುವರೆಯುವಂತೆ ಕೇಳಿಕೊಂಡಿದ್ದರು. ಇದಾಗ್ಯೂ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. ಅಂದರೆ ದೀರ್ಘಾವಧಿ ಕ್ರಿಕೆಟ್ಗೆ ತನ್ನ ದೇಹ ಹೊಂದುತ್ತಿಲ್ಲ ಎಂಬುದು ವಿರಾಟ್ ಕೊಹ್ಲಿಗೆ ಮನದಟ್ಟಾದಂತಿದೆ. ಹೀಗಾಗಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಮೂವರ ಟೆಸ್ಟ್ ಕೆರಿಯರ್ ಮುಗಿಸಿದ ಆಸ್ಟ್ರೇಲಿಯನ್ನರು
ಒಟ್ಟಿನಲ್ಲಿ 14 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ರಾಜನಾಗಿ ಮರೆದ ವಿರಾಟ್ ಕೊಹ್ಲಿಯ ಯುಗಾಂತ್ಯವಾಗಿದೆ. ಇನ್ನು ಕಿಂಗ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಏಕದಿನ ಸರಣಿ ಹಾಗೂ ಐಪಿಎಲ್ವರೆಗೆ ಕಾಯಲೇಬೇಕು.