Wisden 2026: ಪ್ರತಿಷ್ಠಿತ ‘ವಿಸ್ಡನ್’ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ

ವಿಸ್ಡನ್ (Wisden) ಎಂಬುದು ಕ್ರಿಕೆಟ್ ಲೋಕದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ಪ್ರಕಟಣೆಯಾಗಿದೆ. ಇದನ್ನು 'ಕ್ರಿಕೆಟ್‌ನ ಬೈಬಲ್' ಎಂದೇ ಕರೆಯಲಾಗುತ್ತದೆ. 864ರಲ್ಲಿ ಇಂಗ್ಲೆಂಡ್‌ನ ಕ್ರಿಕೆಟಿಗ ಜಾನ್ ವಿಸ್ಡನ್ ಎಂಬುವವರು ಇದನ್ನು ಪ್ರಾರಂಭಿಸಿದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷವೂ ಇದು ಒಂದು ಪುಸ್ತಕದ ರೂಪದಲ್ಲಿ (Wisden Cricketers' Almanack) ಪ್ರಕಟವಾಗುತ್ತಿದೆ.

Wisden 2026: ಪ್ರತಿಷ್ಠಿತ ವಿಸ್ಡನ್ ಪಟ್ಟಿಯಲ್ಲಿ ಭಾರತೀಯರ ಪಾರುಪತ್ಯ
Wisden Cricketers 2026

Updated on: Apr 14, 2026 | 4:04 PM

ಕ್ರಿಕೆಟ್ ಲೋಕದ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ಗೌರವಗಳಲ್ಲಿ ಒಂದಾದ ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ (Wisden Cricketers of the Year) 2026ರ ಸಾಲಿನ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಇಂಗ್ಲೆಂಡ್‌ನ ಬೇಸಿಗೆಯ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಐವರು ಆಟಗಾರರನ್ನು ಗುರುತಿಸುವ ಈ ಗೌರವದಲ್ಲಿ, ಈ ಬಾರಿ ಭಾರತೀಯ ಆಟಗಾರರು ಅಭೂತಪೂರ್ವ ಪ್ರಾಬಲ್ಯ ಮೆರೆದಿರುವುದು ವಿಶೇಷ.

ಈ ಮೂಲಕ ಇದೇ ಮೊದಲ ಬಾರಿಗೆ ಭಾರತದ ನಾಲ್ವರು ಆಟಗಾರರು ಜೊತೆಯಾಗಿ  ‘ವಿಸ್ಡನ್ ಕ್ರಿಕೆಟರ್ಸ್ ಆಫ್ ದಿ ಇಯರ್’ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2022ರಲ್ಲಿ ರೋಹಿತ್ ಶರ್ಮಾ ಮತ್ತು ಜಸ್​ಪ್ರೀತ್​ ಬುಮ್ರಾ ಇಬ್ಬರು ಜೊತೆಯಾಗಿ ಐವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದೇ ದೊಡ್ಡ ಸಾಧನೆಯಾಗಿತ್ತು. ಆದರೆ ಈ ಬಾರಿ ಐವರ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ.

2026ರ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗರು:

2025ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವು ಟೆಸ್ಟ್ ಸರಣಿಯನ್ನು 2-2 ರಿಂದ ಡ್ರಾ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಭಾರತೀಯ ಆಟಗಾರರು ತೋರಿದ ಅಪ್ರತಿಮ ಪ್ರದರ್ಶನವೇ ಈ ಬಾರಿಯ ವಿಸ್ಡನ್ ಗೌರವದಲ್ಲಿ ಭಾರತದ ಪಾರುಪತ್ಯಕ್ಕೆ ಮುಖ್ಯ ಕಾರಣ. ಅದರಂತೆ ಈ ವರ್ಷದ ಪಟ್ಟಿಯಲ್ಲಿ ನಾಲ್ವರು ಭಾರತೀಯರು ಮತ್ತು ಒರ್ವ ಇಂಗ್ಲೆಂಡ್ ಆಟಗಾರ ಸ್ಥಾನ ಪಡೆದಿದ್ದಾರೆ. ಅವರೆಂದರೆ…

ಶುಭಮನ್ ಗಿಲ್ (ಭಾರತ): ಟೀಮ್ ಇಂಡಿಯಾದ ‘ಪ್ರಿನ್ಸ್’ ಎಂದೇ ಕರೆಯಲ್ಪಡುವ ಗಿಲ್, ಇಂಗ್ಲೆಂಡ್ ಸರಣಿಯಲ್ಲಿ ರನ್ ಮಳೆ ಹರಿಸಿದ್ದರು.

  • ಪ್ರಮುಖ ಸಾಧನೆ: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ದಾಖಲೆಯ 430 ರನ್ (ಎರಡೂ ಇನಿಂಗ್ಸ್ ಸೇರಿ) ಗಳಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ಕಠಿಣ ಇಂಗ್ಲಿಷ್ ಪರಿಸ್ಥಿತಿಯಲ್ಲಿ ಅವರ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ಮತ್ತು ಸತತವಾಗಿ ರನ್ ಗಳಿಸುವ ಸಾಮರ್ಥ್ಯವನ್ನು ವಿಸ್ಡನ್ ಶ್ಲಾಘಿಸಿದೆ.

ರಿಷಭ್ ಪಂತ್ (ಭಾರತ): ಅಪಘಾತದ ನಂತರ ಕಮ್‌ಬ್ಯಾಕ್ ಮಾಡಿದ ಪಂತ್, ಇಂಗ್ಲೆಂಡ್‌ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದರು.

  • ಪ್ರಮುಖ ಸಾಧನೆ: ಸರಣಿಯ ನಿರ್ಣಾಯಕ ಘಟ್ಟಗಳಲ್ಲಿ ವೇಗವಾಗಿ ಅರ್ಧಶತಕ ಮತ್ತು ಶತಕಗಳನ್ನು ಸಿಡಿಸಿ ಪಂದ್ಯದ ಗತಿಯನ್ನು ಬದಲಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ವಿಕೆಟ್ ಕೀಪಿಂಗ್‌ನಲ್ಲಿನ ಚುರುಕುತನ ಮತ್ತು ಒತ್ತಡದ ಸಮಯದಲ್ಲಿ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ಅವರ ಧೈರ್ಯಕ್ಕೆ ಈ ಗೌರವ ಸಂದಿದೆ.

ರವೀಂದ್ರ ಜಡೇಜಾ (ಭಾರತ): ವಿಶ್ವದ ನಂಬರ್ 1 ಟೆಸ್ಟ್ ಆಲ್‌ರೌಂಡರ್ ಆಗಿರುವ ಜಡೇಜಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮ್ಯಾಜಿಕ್ ಮಾಡಿದ್ದರು.

  • ಪ್ರಮುಖ ಸಾಧನೆ: ಸರಣಿಯಲ್ಲಿ 20ಕ್ಕೂ ಹೆಚ್ಚು ವಿಕೆಟ್ ಪಡೆಯುವುದರ ಜೊತೆಗೆ, ಕೆಳಕ್ರಮಾಂಕದಲ್ಲಿ ಬಂದು ಉಪಯುಕ್ತ ರನ್ ಸೇರಿಸಿದ್ದರು.
  • ವಿಸ್ಡನ್ ಮೆಚ್ಚುಗೆ: ಜಡೇಜಾ ಅವರ ಫೀಲ್ಡಿಂಗ್ ಮತ್ತು ಪಂದ್ಯದ ಯಾವುದೇ ಹಂತದಲ್ಲಿ ಬ್ರೇಕ್-ಥ್ರೂ ನೀಡುವ ಅವರ ಚಾಕಚಕ್ಯತೆಯನ್ನು ವಿಶೇಷವಾಗಿ ಗುರುತಿಸಲಾಗಿದೆ.

ಮೊಹಮ್ಮದ್ ಸಿರಾಜ್ (ಭಾರತ): ಭಾರತದ ವೇಗದ ದಾಳಿಯ ಆಧಾರಸ್ತಂಭವಾಗಿರುವ ಸಿರಾಜ್, ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದರು.

  • ಪ್ರಮುಖ ಸಾಧನೆ: ಲಾರ್ಡ್ಸ್ ಮತ್ತು ಓವಲ್ ಮೈದಾನಗಳಲ್ಲಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು.
  • ವಿಸ್ಡನ್ ಮೆಚ್ಚುಗೆ: ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಮತ್ತು ಸುದೀರ್ಘ ಸ್ಪೆಲ್ ಎಸೆಯುವ ಅವರ ಎನರ್ಜಿಯನ್ನು ವಿಸ್ಡನ್ ಕೊಂಡಾಡಿದೆ.

ಹಸೀಬ್ ಹಮೀದ್ (ಇಂಗ್ಲೆಂಡ್):  ಈ ಪಟ್ಟಿಯಲ್ಲಿರುವ ಏಕೈಕ ಇಂಗ್ಲಿಷ್ ಆಟಗಾರ ಹಸೀಬ್. ಇಂಗ್ಲೆಂಡ್ ಆಟಗಾರನನ್ನು ಕಮ್‌ಬ್ಯಾಕ್ ಹೀರೊ ಎಂದೇ ಕರೆಯಬಹುದು.

  • ಪ್ರಮುಖ ಸಾಧನೆ: ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ 1,258 ರನ್ ಗಳಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು.
  • ವಿಸ್ಡನ್ ಮೆಚ್ಚುಗೆ: ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ಅವರು ತೋರಿದ ಸ್ಥಿರ ಪ್ರದರ್ಶನ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಮರಳಲು ಅವರು ನಡೆಸಿದ ಹೋರಾಟವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಇತರ ಪ್ರಮುಖ ಪ್ರಶಸ್ತಿಗಳು (2026):

ವಿಸ್ಡನ್‌ನ ಈ 163ನೇ ಆವೃತ್ತಿಯಲ್ಲಿ ಭಾರತದ ಇತರ ಆಟಗಾರರಿಗೂ ದೊಡ್ಡ ಗೌರವಗಳು ಸಂದಿವೆ. ಅವರೆಂದರೆ…

  • ವಿಶ್ವದ ಪ್ರಮುಖ ಮಹಿಳಾ ಕ್ರಿಕೆಟರ್: ದೀಪ್ತಿ ಶರ್ಮಾ (ಭಾರತ) – 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಗೆ ಈ ಗೌರವ ನೀಡಲಾಗಿದೆ..
  • ವಿಶ್ವದ ಪ್ರಮುಖ ಟಿ20 ಕ್ರಿಕೆಟಿಗ: ಅಭಿಷೇಕ್ ಶರ್ಮಾ (ಭಾರತ) – ಒಂದೇ ವರ್ಷದಲ್ಲಿ 1,000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಸಾಧನೆಗೆ ಈ ಗೌರವ ಸಲ್ಲಿಸಲಾಗಿದೆ.
  • ವಿಶ್ವದ ಪ್ರಮುಖ ಪುರುಷ ಕ್ರಿಕೆಟಿಗ: ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) – 2025ರಲ್ಲಿ 17.32 ಸರಾಸರಿಯಲ್ಲಿ 55 ಟೆಸ್ಟ್ ವಿಕೆಟ್ ಪಡೆದಿದ್ದಕ್ಕಾಗಿ ಈ ಗೌರವ ನೀಡಲಾಗಿದೆ.

ವಿರಾಟ್ ಕೊಹ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರಾ?

ವಿರಾಟ್ ಕೊಹ್ಲಿ ಹಲವು ಬಾರಿ ವಿಸ್ಡನ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅದರಲ್ಲೂ ಅವರು 2010 ರಲ್ಲಿ ದಶಕದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದರು ಎಂಬುದು ವಿಶೇಷ. ಅದರಂತೆ ಕೊಹ್ಲಿ ಯಾವಾಗೆಲ್ಲಾ ವಿಸ್ಡನ್  ಗೌರವಕ್ಕೆ ಪಾತ್ರರಾಗಿದ್ದಾರೆ ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ…

  • ದಶಕದ ಏಕದಿನ ಕ್ರಿಕೆಟಿಗ (2010s): 2021 ರಲ್ಲಿ, ವಿಸ್ಡನ್ ಅಲ್‌ಮನ್ಯಾಕ್ ವಿರಾಟ್ ಕೊಹ್ಲಿ ಅವರನ್ನು 2010-2019ರ ದಶಕದ ಅತ್ಯುತ್ತಮ ಏಕದಿನ (ODI) ಕ್ರಿಕೆಟಿಗ ಎಂದು ಗೌರವಿಸಿತು.
  • ವರ್ಷದ ಮುಂಚೂಣಿ ಕ್ರಿಕೆಟಿಗ: ಕೊಹ್ಲಿ ಸತತವಾಗಿ ಮೂರು ಬಾರಿ (2016, 2017, ಮತ್ತು 2018) ವಿಸ್ಡನ್‌ನ ‘ವರ್ಷದ ಮುಂಚೂಣಿ ಕ್ರಿಕೆಟಿಗ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
  • ವಿಸ್ಡನ್ ವರ್ಷದ ಕ್ರಿಕೆಟಿಗರು: 2018ರ ಅವರ ಅದ್ಭುತ ಪ್ರದರ್ಶನಕ್ಕಾಗಿ (ಇಂಗ್ಲೆಂಡ್ ಪ್ರವಾಸ ಸೇರಿದಂತೆ) ವಿರಾಟ್ ಕೊಹ್ಲಿ ಅವರನ್ನು ವಿಸ್ಡನ್‌ನ ವರ್ಷದ ಐವರು ಕ್ರಿಕೆಟಿಗರ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಆಯ್ಕೆಯ ಮುಖ್ಯ ಮಾನದಂಡವೇನು?

ವಿಸ್ಡನ್ ‘ವರ್ಷದ ಐವರು ಕ್ರಿಕೆಟಿಗರು’ ಪ್ರಶಸ್ತಿಯನ್ನು ಮುಖ್ಯವಾಗಿ ಕಳೆದ ಇಂಗ್ಲೆಂಡ್ ಕ್ರಿಕೆಟ್ ಸೀಸನ್‌ನಲ್ಲಿ (English Summer) ಆಟಗಾರರು ತೋರಿದ ಪ್ರದರ್ಶನದ ಆಧಾರದ ಮೇಲೆ ನೀಡಲಾಗುತ್ತದೆ. ಇದಕ್ಕಾಗಿ ಮೂರು ವಿಭಾಗಗಳಲ್ಲಿ ಮೂಲಕ ಆಟಗಾರರ ಪ್ರದರ್ಶನವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅವೆಂದರೆ…

  • ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡ ತಂಡಗಳು: ಇಂಗ್ಲೆಂಡ್ ನೆಲದಲ್ಲಿ ಆ ಸೀಸನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ವಿದೇಶಿ ತಂಡದ ಆಟಗಾರರು. (ಉದಾಹರಣೆಗೆ: ಈ ಬಾರಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಆಡಿದ ಕಾರಣ ಭಾರತೀಯರಿಗೆ ಹೆಚ್ಚು ಅವಕಾಶ ಸಿಕ್ಕಿದೆ).
  • ಇಂಗ್ಲೆಂಡ್ ದೇಶೀಯ ಕ್ರಿಕೆಟ್ (ಕೌಂಟಿ ಕ್ರಿಕೆಟ್​): ಇಂಗ್ಲೆಂಡ್‌ನ ಆಟಗಾರರು ಅಥವಾ ಅಲ್ಲಿನ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ವಿದೇಶಿ ಆಟಗಾರರು ಆ ಸೀಸನ್‌ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನವನ್ನು ಪರಿಗಣಿಸಲಾಗುತ್ತದೆ. (ಉದಾಹರಣೆಗೆ: ಈ ಪಟ್ಟಿಯಲ್ಲಿರುವ ಹಸೀಬ್ ಹಮೀದ್ ಅವರು ಕೌಂಟಿ ಕ್ರಿಕೆಟ್ ಸಾಧನೆಯ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ).
  • ವಿಶ್ವದ ಪ್ರಮುಖ ಕ್ರಿಕೆಟಿಗ: ವಿಸ್ಡನ್ ನೀಡುವ ‘ವಿಶ್ವದ ಪ್ರಮುಖ ಕ್ರಿಕೆಟಿಗ’  ಎಂಬ ಪ್ರತ್ಯೇಕ ಪ್ರಶಸ್ತಿಗೆ ಜಗತ್ತಿನಾದ್ಯಂತ ನಡೆದ ಎಲ್ಲಾ ಪಂದ್ಯಗಳ ಸಾಧನೆಯನ್ನು ಪರಿಗಣಿಸಲಾಗುತ್ತದೆ. ಈ ಬಾರಿ ಆ ಪ್ರಶಸ್ತಿಯನ್ನು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಪಡೆದಿದ್ದಾರೆ.

 

Published On - 3:52 pm, Tue, 14 April 26

Follow Us